More

    ಜೀವದ ಹಂಗು ತೊರೆದು ಯೋಧರಂತೆ ಸೇವೆ

    ಶಿರಸಿ: ಕರೊನಾ ವೈರಸ್ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ 189 ಕಾರ್ಯಕರ್ತರೆಯರು ತಮ್ಮ ಜೀವದ ಹಂಗು ತೊರೆದು ಯೋಧರಂತೆ ಜನ ಸೇವೆಯಲ್ಲಿ ತೊಡಗಿದ್ದಾರೆ.

    ಹೋಮ್ ಕ್ವಾರಂಟೈನ್, ವಿದೇಶ ಹಾಗೂ ಬೆಂಗಳೂರು ಸೇರಿ ಹೊರಗಡೆಯಿಂದ ಬಂದವರನ್ನು ತಪಾಸಣೆ ನಡೆಸುವ ಮತ್ತು ಅವರು ಎಲ್ಲೂ ಓಡಾಡದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಆಶಾ ಕಾರ್ಯಕರ್ತೆಯರ ಮೇಲಿದೆ. ಎಲ್ಲರೂ ತಮ್ಮ ಮನೆಗಳಲ್ಲಿ ಆರಾಮಾಗಿದ್ದರೆ ಇವರು ಮಾತ್ರ ಸುಡು ಬಿಸಿಲಿನಲ್ಲಿ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

    ತಾಲೂಕಿನಲ್ಲಿ 189 ಆಶಾ ಕಾರ್ಯಕರ್ತೆಯರಿದ್ದು, ಎಲ್ಲರನ್ನೂ ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇನ್ನು ತಾಲೂಕಿನಲ್ಲಿ 11 ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, 351ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಇವರೊಂದಿಗೆ ಸೇರಿ ಜನರನ್ನು ಈ ಮಹಾಮಾರಿಯಿಂದ ಕಾಪಾಡುವ ಕೆಲಸದಲ್ಲಿ ತೊಡಗಿದ್ದಾರೆ.

    ತಾಲೂಕಿನಾದ್ಯಂತ ಅಂದಾಜು 4,500ಕ್ಕೂ ಅಧಿಕ ಜನರು ಹೊರಗಡೆಯಿಂದ ಆಗಮಿಸಿದ್ದಾರೆ. ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ಹೊರಗಿನವರ ಆಗಮನವೂ ಹೆಚ್ಚಾಗಿದೆ. ಅವರೆಲ್ಲರನ್ನೂ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮಾಡುವುದು ಆಶಾ ಕಾರ್ಯಕರ್ತೆಯರ ಕಾರ್ಯವಾಗಿದೆ. ಅಲ್ಲದೆ, ಪ್ರತಿ ದಿನದ ವರದಿಯನ್ನು ಆರೋಗ್ಯ ಇಲಾಖೆಯ ಮುಖ್ಯಸ್ಥರಿಗೆ ನೀಡಬೇಕಾಗಿದ್ದು, ಹೋಮ್ ಕ್ವಾರಂಟೈನ್ ಸಿಕ್ಕಾ ಹಾಕುವುದು, ಮನೆಯಲ್ಲಿ ಇರುತ್ತಾರೋ ಇಲ್ಲವೋ ನೋಡುವುದು, ಅವರ ಚಲನವಲನಗಳ ಬಗ್ಗೆ ಗಮನ ಹರಿಸುವುದು ಮತ್ತು ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ದೂರು ನೀಡುವುದು ಕಾರ್ಯಕರ್ತೆಯರ ಕರ್ತವ್ಯದ ಭಾಗವಾಗಿದೆ.

    ಆಶಾ ಕಾರ್ಯಕರ್ತೆಯರ ಜತೆಗೆ ತಾಲೂಕಾಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ವೈದ್ಯರು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿಯೇ ಜ್ವರದ ತಪಾಸಣೆಯ ಕ್ಲಿನಿಕ್ ತೆರೆಯಲಾಗಿದೆ. ಈ ಕ್ಲಿನಿಕ್​ನಲ್ಲಿ ಈವರೆಗೆ ಸುಮಾರು 182 ಜನರು ತಪಾಸಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ತುರ್ತು ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಮುಂದುವರಿಸಲಾಗಿದೆ. ಡಯಾಲಿಸೀಸ್​ನಂತಹ ಅತಿ ಅಗತ್ಯ ಸೇವೆಯನ್ನು ಯಾವುದೇ ಅಡೆಚಣೆಯಿಲ್ಲದೆ ನೀಡಲಾಗುತ್ತಿದೆ.

    3 ನೆಗೆಟಿವ್! : ಶಿರಸಿಯ ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಮೂರು ಕರೊನಾ ವೈರಸ್ ಸೋಂಕು ಶಂಕಿತ ಪ್ರಕರಣಗಳು ಸುಖಾಂತ್ಯ ಕಂಡಿದ್ದು, ಮೂರು ಪ್ರಕರಣಗಳು ನೆಗೆಟಿವ್ ಬಂದಿವೆ. ದುಬೈ, ರಿಯಾಜ್ ಮತ್ತು ಓಮನ್ ದೇಶದಿಂದ ಬಂದಿದ್ದ ಮೂರು ಶಂಕಿತರ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ಮೂವರು ಆರೋಗ್ಯವಾಗಿದ್ದು, ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts