More

    ಜಿಲ್ಲೆಯ 19 ಕೇಂದ್ರಗಳಲ್ಲಿ ಪಿಯು ಪರೀಕ್ಷೆ ಇಂದು

    ಗದಗ: ಜಿಲ್ಲೆಯ 19 ಪರೀಕ್ಷೆ ಕೇಂದ್ರಗಳಲ್ಲಿ ಗುರುವಾರ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಇಂಗ್ಲಿಷ್ ವಿಷಯ ಪರೀಕ್ಷೆಯು ಅಂದು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಜರುಗಲಿದೆ.

    ಪರೀಕ್ಷೆ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷೆ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪರೀಕ್ಷೆ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಈ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.

    ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿನ ಸೈಬರ್ ಕೇಂದ್ರ, ಝುರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಫೋಟೋ ಕಾಪಿಯರ್​ಗಳನ್ನು ಬಂದ್ ಮಾಡಲು ಆದೇಶಿಸಿದೆ. ಪರೀಕ್ಷೆ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ.

    ಎಲ್ಲ ಪರೀಕ್ಷೆ ಕೇಂದ್ರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಕರೊನಾ ಸೋಂಕು ನಿವಾರಣೆ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಪರೀಕ್ಷೆ ಕೇಂದ್ರಕ್ಕೆ ಪ್ರವೇಶಿಸುವ ಅಧಿಕೃತ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಿ ಒಳಗೆ ಪ್ರವೇಶಿಸಲು ಅವಕಾಶ ನೀಡಬೇಕು. ಯಾವುದೇ ವಿದ್ಯಾರ್ಥಿ ಮಾಸ್ಕ್ ಧರಿಸದೇ ಬಂದಲ್ಲಿ, ಆರೋಗ್ಯ ತಪಾಸಣೆ ಕೌಂಟರ್​ನಲ್ಲಿರುವ ಹೆಚ್ಚುವರಿ ಮಾಸ್ಕ್ ನೀಡುವ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು.

    ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣೆ ಕೌಂಟರ್ ತೆರೆಯಬೇಕು. ಪ್ರತಿ ಪರೀಕ್ಷೆ ಕೇಂದ್ರಗಳಿಗೆ ಆರೋಗ್ಯ ಸಹಾಯಕರ ಸೇವೆ ಒದಗಿಸಬೇಕು. ಆರೋಗ್ಯ ತಪಾಸಣೆ ಕೌಂಟರ್​ನಲ್ಲಿ ಪರೀಕ್ಷೆ ಕೇಂದ್ರಕ್ಕೆ ಪ್ರವೇಶ ಪಡೆಯುವ ಪ್ರತಿ ಅಧಿಕೃತ ಅಧಿಕಾರಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಬೇಕು. ಯಾವುದೇ ಅಧಿಕಾರಿ, ಸಿಬ್ಬಂದಿಗೆ ಕೆಮ್ಮು, ಜ್ವರ, ನೆಗಡಿ ಇರುವುದು ಕಂಡುಬಂದಲ್ಲಿ ಪ್ರವೇಶ ನಿರಾಕರಿಸಬೇಕು.

    ಕಂಟೇನ್ಮೆಂಟ್ ವಲಯಗಳಿಂದ ಬರುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳ ಮೇಲೆ ಇನ್ಸಿಡೆಂಟ್ ಕಮಾಂಡರ್ ಅವರು ಮೊಹರು ಹಾಕಬೇಕು ಹಾಗೂ ಇಂತಹ ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಕಂಟೇನ್ಮೆಂಟ್ ವಲಯಗಳಿಂದ ಬರುವ ಪ್ರತಿ ವಿದ್ಯಾರ್ಥಿಗಳಿಗೆ ಹಾಗೂ ಈ ವಿಶೇಷ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಠಡಿ ಮೇಲ್ವಿಚಾರಕರಿಗೆ ಆರೋಗ್ಯ ಇಲಾಖೆಯಿಂದ ಮೂರು ಪದರುಗಳ ಸರ್ಜಿಕಲ್ ಮಾಸ್ಕ್ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಶಿರಹಟ್ಟಿ ವರದಿ

    ಶಿರಹಟ್ಟಿ: ಪಟ್ಟಣದ ಎಫ್.ಎಂ. ಡಬಾಲಿ ಸಪೂ ಕಾಲೇಜ್ ಮತ್ತು ಸಿ.ಸಿ.ಎನ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪರೀಕ್ಷೆ ಕೇಂದ್ರಗಳಲ್ಲಿ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಗುರುವಾರ ಜರುಗಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಕೇಂದ್ರಗಳಿಗೆ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಲಾಗಿದೆ.

    ಒಟ್ಟು 594 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಲ್ಲಿ ಶಿರಹಟ್ಟಿ ತಾಲೂಕಿನ 10 ಕಾಲೇಜಿನ 516 ವಿದ್ಯಾರ್ಥಿಗಳಿದ್ದರೆ, 78 ವಿದ್ಯಾರ್ಥಿಗಳು ಹೊರ ಜಿಲ್ಲೆಯವರು. ಒಟ್ಟು ಎರಡು ಪರೀಕ್ಷೆ ಕೇಂದ್ರಗಳಲ್ಲಿ 27 ಕೊಠಡಿ ಗುರುತಿಸಲಾಗಿದೆ. ಅವುಗಳಲ್ಲಿ 17 ಎಫ್.ಎಂ. ಡಬಾಲಿ ಮತ್ತು 10 ಸಿ.ಸಿ.ಎನ್. ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಸಂಬಂಧಿಸಿವೆ. ವಿದ್ಯಾರ್ಥಿಗಳನ್ನು ಕರೆ ತರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಬಸ್ ಸೌಲಭ್ಯ ಸಿಗದಿದ್ದರೆ ಅಂಥವರನ್ನು ತಕ್ಷಣ ಕರೆ ತರಲು ಸ್ಥಳೀಯ ಖಾಸಗಿ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಿಳಿಸಿದರು.

    ಪಿಯು ಪರೀಕ್ಷಾ ಕೇಂದ್ರ ಪರಿಶೀಲನೆ

    ಲಕ್ಷೆ್ಮೕಶ್ವರ: ಗುರುವಾರ ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಪಟ್ಟಣದ ಬಿಸಿಎನ್ ಪಿಯು ಕಾಲೇಜ್ ಮತ್ತು ಪಾಲಿಟೆಕ್ನಿಕ್ ಕಾಲೇಜ್​ನ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾ ಅಧೀಕ್ಷಕರು ಮತ್ತು ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಗಿ ಮಂಗಳವಾರ ಪರಿಶೀಲಿಸಿದರು.

    ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಕುಬೇರಪ್ಪ ಮಾಹಿತಿ ನೀಡಿ, ಪರಸ್ಪರ ಅಂತರ ಕಾಯ್ದುಕೊಳ್ಳಲು 24 ವಿದ್ಯಾರ್ಥಿಗಳಿಗೆ 1 ಕೊಠಡಿಯಂತೆ 30 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ತಾಲೂಕಿನ 652 ವಿದ್ಯಾರ್ಥಿಗಳು ಮತು ಅಂತರ್ ಜಿಲ್ಲೆಯ 28 ವಿದ್ಯಾರ್ಥಿಗಳು ಸೇರಿ ಒಟ್ಟು 680 ಪರೀಕ್ಷಾರ್ಥಿಗಳಿದ್ದಾರೆ. ಬಿಸಿಎನ್ ಪಪೂ ಕಾಲೇಜಿನಲ್ಲಿ 17 ಕೊಠಡಿಗಳು ಹಾಗೂ ಬಿಸಿಎನ್ ಪದವಿ ಕಾಲೇಜ್​ನಲ್ಲಿ 13 ಕೊಠಡಿ ಸಿದ್ಧ್ದಡಿಸಲಾಗಿದೆ ಎಂದರು.

    ಆಡಳಿತಾಧಿಕಾರಿ ನಾಗರಾಜ ಕುಲಕರ್ಣಿ, ಮುಖ್ಯ ಅಧೀಕ್ಷಕ ಡಿ.ಪಿ. ಹೇಮಾದ್ರಿ, ಕುಬೇರಪ್ಪ ವೈ.ಎಸ್., ಸಹ ಅಧೀಕ್ಷಕ ಎ.ಎಂ. ಅಂಗಡಿ, ಎಸ್.ಎಸ್. ಅಂಗಡಿ, ಬಿ.ಜೆ. ಪಾಟೀಲ, ಡಿ.ಎಸ್. ಪ್ಯಾಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts