More

    ಜಿಲ್ಲೆಯ ಪ್ರಥಮ ಹಳ್ಳಿ ಸಂತೆಗೆ ಗ್ರಹಣ

    ಹಳಿಯಾಳ: ಜಿಲ್ಲೆಯ ಪ್ರಥಮ ಹಳ್ಳಿ ಸಂತೆ ಎಂಬ ಹೆಗ್ಗಳಿಕೆ ಪಡೆದ ತೇರಗಾಂವ ಸಂತೆಯು ಶುರುವಾದ ಎರಡೇ ವರ್ಷಗಳಲ್ಲಿ ಹಳ್ಳ ಹಿಡಿದಿದೆ. ಜಿಲ್ಲೆಯಲ್ಲಿ ಆರಂಭಗೊಂಡ ಮೊದಲ ಹಳ್ಳಿ ಸಂತೆ ಎಂಬ ಹೆಮ್ಮೆಯೊಂದಿಗೆ ಅದ್ದೂರಿಯಾಗಿ ಉದ್ಘಾಟನೆಗೊಂಡ ತಾಲೂಕಿನ ತೇರಗಾಂವ ಗ್ರಾಮದ ‘ಹಳ್ಳಿ ಸಂತೆ’ ಮಳಿಗೆಗಳಲ್ಲಿ ಈಗ ವಹಿವಾಟು ನಡೆಯದೇ ಬಂದ್ ಆಗಿವೆ.

    ಶಾಸಕ ಆರ್.ವಿ. ದೇಶಪಾಂಡೆ ಅವರು ವಿಶೇಷ ಆಸಕ್ತಿ ವಹಿಸಿ 2017ರಲ್ಲಿಯೇ ತೇರಗಾಂವ ಗ್ರಾಮಕ್ಕೆ ಹಳ್ಳಿ ಸಂತೆ ಯೋಜನೆಯನ್ನು ಮಂಜೂರು ಮಾಡಿ ತಂದಿದ್ದರು. ಹಳ್ಳಿ ಸಂತೆ ಯೋಜನೆಯಲ್ಲಿ 33 ಲಕ್ಷ ರೂ. ವೆಚ್ಚದ 36 ಮಳಿಗೆಗಳ ಮಾರುಕಟ್ಟೆ ಪ್ರಾಂಗಣ, 5 ಲಕ್ಷ ರೂ. ವೆಚ್ಚದ ಮೀನಿನ ಮಾರುಕಟ್ಟೆ ನಿರ್ವಣವನ್ನು ಈ ಯೋಜನೆ ಒಳಗೊಂಡಿತ್ತು.

    2018ರ ಫೆಬ್ರವರಿ 17ರಂದು ಶಾಸಕ ದೇಶಪಾಂಡೆ ಅವರು ಈ ಹಳ್ಳಿಸಂತೆ ಮಳಿಗೆಗಳನ್ನು ಲೋಕಾರ್ಪಣೆ ಮಾಡಿ ಇದರ ಸದುಪಯೋಗವನ್ನು ಪಡೆಯಬೇಕೆಂದು ಮನವಿ ಮಾಡಿದ್ದರು.

    ಗ್ರಾಮಸ್ಥರಿಗೆ ನಿರಾಸಕ್ತಿ: ಆರಂಭದಲ್ಲಿ ಹಳ್ಳಿ ಸಂತೆಯ ಮಳಿಗೆಯಲ್ಲಿ ಗುರುವಾರ ನಡೆಯುವ ವಾರದ ಸಂತೆಯು ಉತ್ತಮವಾಗಿಯೇ ನಡೆದವು. ವ್ಯಾಪಾರ- ವಹಿವಾಟು ಚೆನ್ನಾಗಿಯೇ ನಡೆದವು. ಮಳೆಗಾಲ ಆರಂಭವಾದಂತೆ ಮಳಿಗೆಯ ಸುತ್ತಲಿನ ಪ್ರದೇಶ ಕೆಸರುಮಯವಾಗಲಾರಂಭಿಸಿದ್ದರಿಂದ ಅಲ್ಲಿಗೆ ಗ್ರಾಮಸ್ಥರು ವ್ಯಾಪಾರ ಮಾಡಲು ಹಿಂಜರಿಯಲಾರಂಭಿಸಿದರು.

    ಪರಿಣಾಮ ಗ್ರಾಮ ಪಂಚಾಯಿತಿಯ ಅನುಮತಿಯಂತೆ ಗ್ರಾಮದಲ್ಲಿನ ಬಸ್ತಿ ಓಣಿಯಲ್ಲಿಯೇ ವಾರದ ಸಂತೆಯು ನಡೆಯಲಾರಂಭಿಸಿತು. ಗ್ರಾಮದ ನಡುವೆಯ ಸಂತೆ ನಡೆದ ಕಾರಣ ಜನರಿಗೂ ಅನುಕೂಲವಾಯಿತು. ಅದರ ಜೊತೆಯಲ್ಲಿ ಅಲ್ಲಿಯೇ ಅಕ್ಕಪಕ್ಕದಲ್ಲಿ ಅಂಗಡಿಗಳನ್ನು ಹೊಂದಿರುವವರಿಗೂ ಸ್ವಲ್ಪ ವ್ಯಾಪಾರ ಕುದುರಿತು. ಗ್ರಾಮದ ಹೊರಭಾಗದಲ್ಲಿರುವ ಹಳ್ಳಿ ಸಂತೆ ಮಳಿಗೆಯನ್ನು ಮರು ಆರಂಭಿಸುವ ಹಾಗೂ ವಾರದ ಸಂತೆಯನ್ನು ಅಲ್ಲಿಯೇ ಮರು ಸ್ಥಳಾಂತರಿಸುವ ವಿಚಾರ ಅಲ್ಲಿಯೇ ನನೆಗುದಿಗೆ ಬಿದ್ದಿತು. ಈ ಮಧ್ಯೆ ಕರೊನಾ ಒಕ್ಕರಿಸಿದ್ದರಿಂದ ಹಳ್ಳಿ ಸಂತೆ ಸ್ಥಗಿತಗೊಂಡು ಬಿಟ್ಟಿತು. ಹಳ್ಳಿ ಸಂತೆ ಮಳಿಗೆ ಅಕ್ಕಪಕ್ಕದ ಪ್ರದೇಶದಲ್ಲಿ ಸಿಮೆಂಟ್ ಪೇವರ್ಸ್ ಹಾಕಿ ಮಾರಾಟಗಾರರಿಗೆ ಹಾಗೂ ಜನರಿಗೆ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವ ಪ್ರಸ್ತಾವನೆಯನ್ನು ಜಿ.ಪಂಗೆ ಕಳಿಸಲು ಯೋಜಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಹೇಳುತ್ತಿದೆ. ಹಳ್ಳಿ ಸಂತೆ ವ್ಯಾಪಾರ ನಿಲ್ಲಿಸಿದ್ದರಿಂದ ಇಲ್ಲಿನ ಮಳಿಗೆಯ ನಿರ್ವಹಣೆಯು ತಪ್ಪಿ ಕಟ್ಟಡ ಶಿಥಿಲಗೊಳ್ಳಲಾರಂಭಿಸಿದ್ದರೆ ಇನ್ನೊಂದೆಡೆ ಕುಡುಕರಿಗೆ ಪ್ರಶಸ್ತ ತಾಣವಾಗಿ ಮಾರ್ಪಾಡಾಗುತ್ತಿದೆ.

    ಹಳ್ಳಿ ಸಂತೆ ಮಳಿಗೆಯನ್ನು ನವೀಕರಣಗೊಳಿಸಲು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆಯನ್ನು ಕಳಿಸಲು ಗ್ರಾ.ಪಂಗೆ ತಿಳಿಸಿದ್ದೇನೆ.
    | ಸಂತೋಷ ರೇಣಕೆ (ಜಿ.ಪಂ ಉಪಾಧ್ಯಕ್ಷರು )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts