More

    ಜಿಲ್ಲೆಯ ಪ್ರತಿ ಹಳ್ಳಿಗೆ ಶುದ್ಧ ನೀರು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರತಿಯೊಂದು ಹಳ್ಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸಿದ್ಧವಾಗಿದ್ದು, ಆದಷ್ಟು ಶೀಘ್ರ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಿ ಜಾರಿ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲೆಯ ಕಲಘಟಗಿ ತಾಲೂಕಿನ ಭರ್ತಿಯಾದ ನೀರಸಾಗರ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ನೀರಸಾಗರ ಜಲಾಶಯ ಸುತ್ತಮುತ್ತಲಿನ 12 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವಂತೆ ಬೇಡಿಕೆ ಇದೆ. ಜಿಲ್ಲೆಯ ಸಮಗ್ರ ಯೋಜನೆ ಜಾರಿ ವಿಳಂಬವಾದರೆ ಬೇಡಿಕೆ ಇರುವ 12 ಹಳ್ಳಿಗಳಿಗೆ ಆದ್ಯತೆ ಮೇರೆಗೆ ನೀರು ಪೂರೈಸಲು ಕಿರು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ನೀರಸಾಗರ ಅಣೆಕಟ್ಟು 1955ರಲ್ಲಿ ನಿರ್ವಿುಸಲಾಗಿದ್ದು, 1087 ಎಕರೆ ವಿಸ್ತಿರ್ಣ ಹೊಂದಿದೆ. ಅಂದಾಜು ಒಂದು ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಈ ನೀರನ್ನು ಹಳೇಹುಬ್ಬಳ್ಳಿ, ಗೋಕುಲ ರಸ್ತೆ, ಹೊಸೂರ ಸೇರಿ ಅರ್ಧ ಹುಬ್ಬಳ್ಳಿಗೆ ಪೂರೈಕೆ ಮಾಡಲಾಗುತ್ತದೆ. ಈ ಮೊದಲು ಉಣಕಲ್ಲ ಕೆರೆ ನೀರು ಬಳಸಲಾಗುತ್ತಿತ್ತು ಎಂದರು.

    ಬೃಂದಾವನ ಮಾದರಿ: ನೀರಸಾಗರ ಜಲಾಶಯದ ಬಳಿಯಲ್ಲಿ ಸುಮಾರು 300 ಎಕರೆ ಸರ್ಕಾರಿ ಜಾಗ ಇದೆ. ಇದನ್ನು ಮೈಸೂರಿನ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಬೆಳೆಸುವ ಆಶಯ ಇದೆ. ಅದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಮತ್ತು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಸೂಚಿಸಲಾಗಿದೆ ಎಂದರು.

    ಅತಿವೃಷ್ಟಿ ಹಾನಿ: ಧಾರವಾಡ ಜಿಲ್ಲೆಯಲ್ಲಿ ಈಚೆಗೆ ಸುರಿದ ಅತಿಯಾದ ಮಳೆಯಿಂದ ಸುಮಾರು 500 ಕೋಟಿ ರೂ. ಬೆಳೆ ಹಾನಿಯಾಗಿದೆ. ಆಸ್ತಿ ಪಾಸ್ತಿ ನಷ್ಟವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವರದಿ ನೀಡಲಾಗುವುದು, ಸಂತ್ರಸ್ತರಿಗೆ ಕೂಡಲೇ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.

    ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಲಘಟಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ಮೇಲಿನಮನಿ, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಪಿ. ಸುರೇಶ, ಚಾಮರಾಜಗೌಡ, ಸಹಾಯಕ ಅಭಿಯಂತರ ಎಂ.ಎಫ್. ನೇಗಿನಹಾಳ, ವಸಂತ ಗುಡಿ ಇತರರು ಉಪಸ್ಥಿತರಿದ್ದರು.

    ಪಿಸಿಐಟಿ ಕಚೇರಿ ಉಳಿಸಿಕೊಳ್ಳಲು ಯತ್ನ
    ಹುಬ್ಬಳ್ಳಿ:
    ನವನಗರದಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ಕಲಘಟಗಿ ತಾಲೂಕಿನ ನೀರಸಾಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಆಯುಕ್ತರ ಕಚೇರಿ ಗೋವಾಕ್ಕೆ ಸ್ಥಳಾಂತರವಾಗುತ್ತಿರುವ ವಿಷಯ ತಿಳಿದ ಕೂಡಲೆ ಇಲ್ಲಿಯೇ ಉಳಿಸಲು ಮನವಿ ಮಾಡಿರುವೆ. ಈ ದಿಸೆಯಲ್ಲಿ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.

    ಲಲಿತಕಲಾ ಅಕಾಡೆಮಿ ಕೇಂದ್ರ ಬೆಳಗಾವಿಗೆ ಹೊರಟಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಇಲ್ಲಿಗೇ ಬರಬೇಕು, ಅಲ್ಲಿಯೇ ಆಗಬೇಕು ಎಂದು ಹೇಳುವುದು ಸರಿಯಲ್ಲ. ಉತ್ತರ ಕರ್ನಾಟಕದ ಎಲ್ಲಿಯಾದರೂ ಬರಲಿ, ಮೊದಲು ಬರಲಿ ಎಂದರು.

    ಹಿಂದಿ ಹೇರಿಕೆ ಇಲ್ಲ: ಹಿಂದಿ ಹೇರಿಕೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕೇಂದ್ರ ಸರ್ಕಾರ ಯಾವುದೇ ಹೇರಿಕೆ ಮಾಡುತ್ತಿಲ್ಲ. ಹಿಂದಿ ರಾಷ್ಟ್ರೀಯ ಭಾಷೆ. ಇಂಗ್ಲಿಷ್ ಮೇಲೆ ಪ್ರೀತಿ ತೋರುವವರು ಹಿಂದಿಗೇಕೆ ಆಕ್ಷೇಪಿಸುತ್ತಾರೆ? ಅಷ್ಟಕ್ಕೂ ಯಾರ ಮೇಲೂ ಹಿಂದಿಯನ್ನು ಹೇರುತ್ತಿಲ್ಲವಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts