More

    ಜಿಲ್ಲೆಯಲ್ಲಿ 5ಕ್ಕೇರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಸೇರಿ ಮೊತ್ತೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು ಐದು ಪ್ರಕರಣಗಳು ಸಕ್ರಿಯವಾಗಿದ್ದು, 21ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸೋಮವಾರ 41 ವರ್ಷದ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ನಿವಾಸಿ ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಗುತ್ತಲದ 9 ವರ್ಷದ ಬಾಲಕನಿಗೆ ಸೋಂಕು ದೃಢಗೊಂಡಿದೆ. ಗುತ್ತಲದ ಬಾಲಕನಿಗೆ ಈ ಹಿಂದೆ ಗುತ್ತಲದಲ್ಲಿ ಪಾಸಿಟಿವ್ ಬಂದಿದ್ದ ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದಾನೆ. ಕಾನ್​ಸ್ಟೇಬಲ್ ಸೋಂಕಿನ ಸಂಪರ್ಕ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಇಬ್ಬರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಟ್ರಾವೆಲ್ ಹಿಸ್ಟರಿ: ಕದರಮಂಡಲಗಿ ಗ್ರಾಮದ ನಿವಾಸಿ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೇಟೇಬಲ್ ಎಂದು ಕರ್ತವ್ಯ ನಿರ್ವಹಿಸುತ್ತಿದ್ದು, ಜೂ. 3 ಹಾಗೂ 4ರಂದು ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೆಬೆನ್ನೂರನ ಪೊಲೀಸ್ ವಸತಿ ಗೃಹದಲ್ಲಿರುವ ಅಕ್ಕನ ಮನೆಯಲ್ಲಿದ್ದ ತನ್ನ ಪತ್ನಿಯನ್ನು ಕರೆತರಲು ಹೋಗಿದ್ದರು. 2 ದಿವಸ ಅಕ್ಕನ ಮನೆಯಲ್ಲೇ ಇದ್ದ. ಜೂ. 5ರಂದು ಹರಿಹರದ ಅಮೃತ ಕ್ಲಿನಿಕಲ್ ಲ್ಯಾಬ್​ನಲ್ಲಿ ಮಗನ ಜಾಂಡೀಸ್ ರಕ್ತ ತಪಾಸಣೆಗಾಗಿ ಹೋಗಿದ್ದ. ನಂತರ ಲ್ಯಾಬ್​ನ ಹತ್ತಿರವಿರುವ ಆಯುರ್ವೆದ ಔಷಧ ನೀಡುವ ಮಿಲ್ಟ್ರಿ ಹನುಮಂತರಾವ್ ಅವರಲ್ಲಿ ಔಷಧ ಪಡೆದುಕೊಂಡಿದ್ದಾರೆ. ನಂತರ ಹೆಂಡತಿ ಹಾಗೂ ಮಗನೊಂದಿಗೆ ಕದರಮಂಡಲಗಿ ಗ್ರಾಮದಲ್ಲಿರುವ ತನ್ನ ಮನೆಗೆ ಆಗಮಿಸಿದ್ದಾನೆ. ರಾತ್ರಿ ಬ್ಯಾಡಗಿ ಠಾಣೆಗೆ ಬಂದು ರಾತ್ರಿ ಪಹರೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಾಹಿತಿ ಸಂಗ್ರಹಣೆಗಾಗಿ ನಗರದ ವಿವಿಧ ಸ್ಥಳಗಳಲ್ಲಿ ಸಂಚರಿಸಿದ್ದಾರೆ.

    ಜೂ. 8ರಂದು ಬ್ಯಾಡಗಿಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬ್ಯಾಡಗಿ ಕೃಷಿ ಉತ್ಪನ್ನ ಸಂಸ್ಕರಣ ಘಟಕದ ಉಪಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜೂ. 11ಹಾಗೂ 12ರಂದು ಎಂದಿನಂತೆ ದಿನವಿಡಿ ಕರ್ತವ್ಯ ನಿರ್ವಹಿಸಿದ್ದಾರೆ. ಜೂ. 12ರಂದು ಬೆಳಗ್ಗೆ ಮತ್ತೊಮ್ಮೆ ಕದರಮಂಡಲಗಿ ಬಂದಿದ್ದಾರೆ. ನಂತರ ಸರ್ಕಾರದ ಆದೇಶದಂತೆ ಪೊಲೀಸ್ ಸಿಬ್ಬಂದಿಗೆ ನಡೆಸುವ ನಿಯಮಿತ ಪರೀಕ್ಷೆ ಸಂದರ್ಭದಲ್ಲಿ ಇವರ ಗಂಟಲ ದ್ರವದ ಮಾದರಿಯನ್ನು ಜೂ. 12 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಲ್ಯಾಬ್ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

    ಸೋಂಕಿತ ಕಾನ್ಸ್​ಟೇಬಲ್​ನ ಮನೆಯ 19 ಸದಸ್ಯರು, 45 ಆರಕ್ಷಕ ಸಿಬ್ಬಂದಿ ಹಾಗೂ ತಾಲೂಕು ಕಚೇರಿಯ 10 ಜನ ಸೇರಿ 74 ಜನರನ್ನು ಪ್ರಾಥಮಿಕ ಸಂರ್ಪತರೆಂದು ಗುರುತಿಸಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿ ನಾಲ್ವರನ್ನು ಗುರುತಿಸಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಬ್ಯಾಡಗಿ ಪೊಲೀಸ್ ಠಾಣೆ, ಪೊಲೀಸ್ ವಸತಿ ಗೃಹವನ್ನು ಸೀಲ್​ಡೌನ್ ಮಾಡಲಾಗಿದೆ. 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಎಂದು ಘೊಷಿಸಲಾಗಿದೆ.

    ಬ್ಯಾಡಗಿ ತಾಲೂಕು ಕಚೇರಿಯನ್ನು ಸೀಲ್​ಡೌನ್ ಮಾಡಲಾಗಿದೆ. ತಾಲೂಕು ಕಚೇರಿಯ ಪ್ರಾಥಮಿಕ ಸಂರ್ಪತರಿಗೆ ರಜೆ ನೀಡಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ತಹಸೀಲ್ದಾರ್ ಪ್ರಭಾರವನ್ನು ಹಾವೇರಿ ತಹಸೀಲ್ದಾರ್​ಗೆ ವಹಿಸಲಾಗಿದೆ.

    ಬಾಲಕನ ಟ್ರಾವೆಲ್ ಹಿಸ್ಟರಿ: ಗುತ್ತಲದ ಸೋಂಕಿತ ಬಾಲಕ ತಂದೆ, ತಾಯಿಯೊಂದಿಗೆ ಗುತ್ತಲದ ಆಂಗ್ಲಾಪುರ ಓಣಿಯ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದು, ಬಾಲಕ ಮತ್ತು ಆತನ ಕುಟುಂಬದವರು ಖಲಾಲ್ ಪ್ಲಾಟ್ ಕಂಟೇನ್ಮೆಂಟ್ ಜೋನ್​ನಲ್ಲಿರುವ ಆತನ ದೊಡ್ಡಪ್ಪನ ಮನೆಗೆ ಕಾರಹುಣ್ಣಿಮೆಗಾಗಿ ಜೂ. 5ರಂದು ರಾತ್ರಿ ಊಟಕ್ಕೆ ಹೋಗಿದ್ದ. ಬಾಲಕನ ಮನೆ ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ.

    ಗುತ್ತಲದ 6ನೇ ವಾರ್ಡ್​ನಲ್ಲಿ ಸೀಲ್​ಡೌನ್

    ಬಾಲಕನೋರ್ವನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ 6ನೇ ವಾರ್ಡ್​ನ ಆಯ್ದ ಪ್ರದೇಶವನ್ನು ಸೋಮವಾರ ಸೀಲ್​ಡೌನ್ ಮಾಡಲಾಯಿತು. ಬಾಲಕ ವಾಸವಿದ್ದ 6ನೇ ವಾರ್ಡ್ ವ್ಯಾಪ್ತಿಯ ಮನೆಯ ಪ್ರದೇಶಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಡಾ. ದಿಲೀಪ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ತಹಸೀಲ್ದಾರ್ ಶಂಕರ ಜಿ.ಎಸ್. ಅವರ ತಂಡ ಜನರ ಅಭಿಪ್ರಾಯ ಸಂಗ್ರಹಿಸಿತು. ಸೋಂಕಿತ ಬಾಲಕನ ಮನೆಗೆ ನಿಕಟ ಸಂಪರ್ಕ ಹಾಗೂ ಆತನ ಹೆಚ್ಚಿನ ಚಲನವಲನದ ಅನ್ವಯ ಎಲ್ಲ ಪ್ರದೇಶಗಳಲ್ಲಿ ಸಂಚರಿಸಿ ಕಂಟೇನ್ಮೆಂಟ್ ಜೋನ್ ಗುರುತಿಸಿ ಬ್ಯಾರಿಕೇಡ್​ಗಳನ್ನು ಹಾಕುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts