More

    ಜಿಲ್ಲೆಯಲ್ಲಿ ಮುಂದುವರಿದ ಹದ ಮಳೆ

    ಕಾರವಾರ: ಜಿಲ್ಲೆಯಲ್ಲಿ ಹದವಾಗಿ ಮಳೆ ಮುಂದುವರಿದಿದೆ. ಅಂಕೋಲಾದಲ್ಲಿ ಶುಕ್ರವಾರ ಒಂದೇ ದಿನ 200 ಮಿಮೀ ಮಳೆಯಾಗಿದ್ದರಿಂದ ನೀರು ತುಂಬಿ ಸಮಸ್ಯೆಯಾಗಿದೆ.

    ಶನಿವಾರ ಎಲ್ಲೆಡೆ ಮಳೆಯ ಪ್ರಮಾಣ ಕೊಂಚ ಕಡಿಮೆ ಇದೆ. ಶನಿವಾರ ಬೆಳಗಿನ ವರದಿಯಂತೆ ಭಟ್ಕಳದಲ್ಲಿ 78 ಮಿಮೀ, ಹಳಿಯಾಳ-3.6, ಹೊನ್ನಾವರ-84.4, ಕಾರವಾರ-51.8, ಕುಮಟಾ- 109, ಮುಂಡಗೋಡ- 4.4, ಸಿದ್ದಾಪುರ- 20.4, ಶಿರಸಿ-33.5, ಜೊಯಿಡಾ-17, ಯಲ್ಲಾಪುರದಲ್ಲಿ 21.6 ಮಿಮೀ ಮಳೆಯಾಗಿದೆ.

    ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ಮಳೆಯಿಂದ ಈಶ್ವರ ಮಂಜಪ್ಪ ನಾಯ್ಕ ಹಾಗೂ ಮಹಾಬಲೇಶ್ವರ ಶ್ರೀನಿವಾಸ ನಾಯ್ಕ ಅವರ ಮನೆಗಳಿಗೆ ಹಾನಿಯಾಗಿದೆ. ಮುಂಡಳ್ಳಿಯ ಮಂಜುನಾಥ ದುರ್ಗಯ್ಯ ನಾಯ್ಕ ಇವರ ವಾಸ್ತವ್ಯದ ಮನೆ ಮೇಲೆ ಕಾಡು ಜಾತಿಯ ಮರ, ಅಡಕೆ ಮರ ಬಿದ್ದು ಹಾನಿಯಾಗಿದೆ.

    ಮೊದಲ ಮುನ್ಸೂಚನೆ: ಮಳೆಯಿಂದ ಅಣೆಕಟ್ಟೆಗಳಿಗೆ ನೀರು ಹರಿದು ಬರ ಲಾರಂಭಿಸಿದೆ. ಕದ್ರಾಕ್ಕೆ 5681 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 4001 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದಿಸಿ ಹೊರಬಿಡಲಾಗುತ್ತಿದೆ. 34.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 30.30 ಮೀಟರ್ ನೀರು ಸಂಗ್ರಹವಾಗಿದೆ. 32.50 ಮೀಟರ್ ನೀರು ಸಂಗ್ರಹವಾಗುತ್ತಿದ್ದಂತೆ ನೀರನ್ನು ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ಮೊದಲ ಮುನ್ನೆಚ್ಚರಿಕೆ ನೋಟಿಸ್ ನೀಡಿದೆ. ಸೂಪಾ ಅಣೆಕಟ್ಟೆಗೆ 1092 ಕ್ಯೂಸೆಕ್, ಕೊಡಸಳ್ಳಿಗೆ 4257 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಅವಾಂತರ ಸೃಷ್ಟಿಸಿದ ಮಳೆ: ಅಂಕೋಲಾ ತಾಲೂಕಿನ ಕೇಣಿ, ಮೂಲೆಭಾಗ, ಹರಿಕಂತ್ರವಾಡಗಳಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ತುಂಬಿತ್ತು. ಅಲ್ಲದೆ, ಪೂಜಗೇರಿ ಹಳ್ಳದಲ್ಲಿ ನೀರು ನಿಂತ ಪರಿಣಾಮ ನದಿಭಾಗದ ವಿವಿಧ ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇನ್ನು ಅಂಕೋಲಾದಿಂದ ಮಂಜಗುಣಿಗೆ ತೆರಳುವ ರಸ್ತೆಯ ಮೇಲೆ ನೀರು ನಿಂತಿದ್ದರಿಂದಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.

    ಶನಿವಾರ ಮನೆಯೊಳಗೆ ತುಂಬಿದ ನೀರನ್ನು ಹೊರ ಹಾಕುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದವು. ಮಳೆಗಾಲ ಆರಂಭವಾದ ಕೂಡಲೆ ಕೇಣಿ ಭಾಗದಲ್ಲಿ ಆತಂಕ ಶುರುವಾಗುತ್ತದೆ. ಒಂದೆಡೆ ಸಮುದ್ರದ ನೀರು ನುಗ್ಗುವ ಭಯ, ಇನ್ನೊಂದೆಡೆ ಕೇಣಿ ಹಳ್ಳ ತುಂಬಿ ಹರಿದಾಗ ಇನ್ನೊಂದು ರೀತಿಯ ಆತಂಕ ಪ್ರತಿ ವರ್ಷವೂ ಈ ಭಾಗದವರನ್ನು ಕಾಡುತ್ತಲೇ ಬಂದಿದೆ. ನದಿಭಾಗದಲ್ಲಿ ಶುಕ್ರವಾರ ಕೆಲ ಮನೆಗಳಿಗೆ ನೀರು ತುಂಬಿದ್ದರಿಂದ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಆದರೆ, ಶನಿವಾರ ಮಳೆ ತಗ್ಗಿದ್ದರಿಂದಾಗಿ ಜನಜೀವನ ಸಹಜ ಸ್ಥಿತಿಗೆ ತಲುಪಿದೆ.

    ನೀರು ನುಗ್ಗಿದ ಮನೆಗಳಿಗೆ ತಹಸೀಲ್ದಾರ್ ಉದಯ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲೆ ಸಮಸ್ಯೆ ಉಂಟಾದರೂ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts