More

    ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ

    ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಭಟ್ಕಳ ಹೊರತುಪಡಿಸಿ ಕರಾವಳಿ ಭಾಗದಲ್ಲಿ ಸೋಮವಾರ ಬೆಳಗಿನಿಂದ ಮಲೆನಾಡಿನಲ್ಲಿ ಮಧ್ಯಾಹ್ನದ ನಂತರ ಮಳೆ ನಿಂತಿದೆ.

    ಭಟ್ಕಳದಲ್ಲಿ ಅತಿ ಹೆಚ್ಚು ಮಳೆ: ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಭಟ್ಕಳದಲ್ಲಿ 155 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 81.4, ಹಳಿಯಾಳ-77.6, ಹೊನ್ನಾವರ- 74.2, ಕಾರವಾರ- 48.5, ಕುಮಟಾ- 67.8, ಮುಂಡಗೋಡ- 28.4, ಸಿದ್ದಾಪುರ- 61.2, ಶಿರಸಿ- 95, ಜೊಯಿಡಾ- 47.4, ಯಲ್ಲಾಪುರದಲ್ಲಿ 86.4 ಮಿಮೀ ಮಳೆಯಾಗಿದೆ.

    ತೆರೆದೇ ಇರುವ ಬಾಗಿಲು: ಕದ್ರಾ ಹಾಗೂ ಕೊಡಸಳ್ಳಿ ಅಣೆಕಟ್ಟೆಗಳ ಗೇಟ್​ಗಳನ್ನು ಭಾನುವಾರ ತೆರೆಯಲಾಗಿದ್ದು, ಸೋಮವಾರವೂ ನೀರು ಹೊರಬಿಡಲಾಗುತ್ತಿದೆ. ಕೊಡಸಳ್ಳಿ ಅಣೆಕಟ್ಟೆ ಎರಡು ಗೇಟ್ ತೆರೆದು 20361 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕದ್ರಾ ಅಣೆಕಟ್ಟೆಯ 6 ಗೇಟ್​ಗಳನ್ನು 1 ಮೀಟರ್​ನಷ್ಟು ಎತ್ತಿ 22 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಮಾಡಿ, 22,740 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಟ್ಟಾರೆ 42,740 ಕ್ಯೂಸೆಕ್ ನೀರು ಕಾಳಿ ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಉಕ್ಕಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

    ಗರಿಷ್ಠ 34.50 ಮೀಟರ್ ಸಂಗ್ರಹಣಾ ಸಾಮರ್ಥ್ಯದ ಕದ್ರಾ ಅಣೆಕಟ್ಟೆಯಲ್ಲಿ 31.75 ಮೀಟರ್​ನಷ್ಟು ನೀರು ತುಂಬಿದ್ದು,31196 ಕ್ಯೂಸೆಕ್ ಒಳಹರಿವಿದೆ. ಸೂಪಾ ಅಣೆಕಟ್ಟೆಗೆ 44075 ಕ್ಯೂಸೆಕ್ ನೀರು ಹರಿಯುತ್ತಿದೆ. 564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಸೂಪಾದಲ್ಲಿ 547.82 ಮೀಟರ್ ನೀರು ತುಂಬಿದೆ. ಕೊಡಸಳ್ಳಿ ಅಣೆಕಟ್ಟೆಗೆ 24690 ಕ್ಯೂಸೆಕ್ ನೀರಿನ ಒಳಹರಿವಿದೆ.

    ಕೊಚ್ಚಿ ಹೋದ ರಾಮಪಾಲ ರಸ್ತೆ: ಜೊಯಿಡಾ: ಭಾರಿ ಮಳೆಯಿಂದಾಗಿ ನಂದಿಗದ್ದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಪಾಲಕ್ಕೆ ಹೋಗುವ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಮಳೆಯ ಕಾರಣ ಹಳ್ಳದ ನೀರು ಭಾರಿ ಪ್ರಮಾಣದಲ್ಲಿ ಹರಿದು ಕಚ್ಚಾ ರಸ್ತೆಯ ಒಂದು ಬದಿ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಸಂಚಾರಕ್ಕೆ ತೊಂದರೆಯಾಗಿದೆ.

    ವಿವಿಧೆಡೆ ಮನೆಗಳಿಗೆ ಹಾನಿ: ಶಿರಸಿ: ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ತಾಲೂಕಿನ ಅಂಡಗಿ ಗ್ರಾಮದ ಮಂಜುನಾಥ ಗೌಡ, ಮಳಲಿ ಹೊಸ್ತೋಟದ ಸುಧಾ ಗೌಡ ಅವರಿಗೆ ಸೇರಿದ ಮನೆಗಳಿಗೆ ಧಕ್ಕೆಯಾಗಿ ಅಂದಾಜು 50 ಸಾವಿರ ರೂ. ಹಾನಿ ಸಂಭವಿಸಿದೆ. ನೈಗಾರ ಊರಿನ ಲಕ್ಷ್ಮಣ ಗೌಡ ಅವರ ನಾಟಿ ಮಾಡಿದ ಭತ್ತದ ಗದ್ದೆಗೆ ನೀರು ನುಗ್ಗಿ 20 ಸಾವಿರ ನಷ್ಟವಾಗಿದೆ. ಜಾನ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ರಿ ಗ್ರಾಮದ ನಾಯ್ಕರಕೇರಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕುಸಿಯುವ ಹಂತ ತಲುಪಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಎಂಟು ಮನೆಗಳು ಕುಸಿತ; ಹಳಿಯಾಳ: ಮಳೆಯ ಆರ್ಭಟಕ್ಕೆ ತಾಲೂಕಿನೆಲ್ಲೆಡೆ ವಾಸದ ಎಂಟು ಮನೆಗಳು ಕುಸಿದಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಹಳಿಯಾಳ ಪಟ್ಟಣದಲ್ಲಿ ದೇಶಪಾಂಡೆ ನಗರ, ಸಿದ್ಧರಾಮೇಶ್ವರ ಗಲ್ಲಿ, ಗಣಪತಿ ಗಲ್ಲಿ, ಹಾಗೂ ಗ್ರಾಮಾಂತರ ಭಾಗದಲ್ಲಿ ಜಾವಳ್ಳಿ ಗ್ರಾಮದಲ್ಲಿ ಮೂರು, ಮಂಗಳವಾಡ, ಛತ್ರನಾಳಮನೆ ತಲಾ ಒಂದು ಮನೆ ಕುಸಿದಿದೆ. ಮಂಗಳವಾಡ ಹಳ್ಳದಲ್ಲಿ ಭಾನುವಾರ ರಾತ್ರಿ ಜಾನುವಾರು ಕೊಚ್ಚಿ ಹೋಗಿದ್ದ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಹಾಗೂ ಪಟ್ಟಣದಲ್ಲಿನ ಎಲ್ಲ ಕೆರೆಗಳು ತುಂಬಿ ಕೊಂಡಿದ್ದು, ತಟ್ಟಿಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts