More

    ಜಿಲ್ಲೆಯಲ್ಲಿ ಬಿರುಗಾಳಿ, ಮಳೆ

    ಕಾರವಾರ/ಹಳಿಯಾಳ: ಜಿಲ್ಲೆಯ ವಿವಿಧೆಡೆ ಶನಿವಾರ ಸಾಯಂಕಾಲ ಮಳೆಯಾಗಿದ್ದು, ಹಳಿಯಾಳದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ. ಸಾಯಂಕಾಲ 4 ರಿಂದ ಕೆಲ ಹೊತ್ತು ಯಲ್ಲಾಪುರ, ಮುಂಡಗೋಡ. ಹಳಿಯಾಳ ಭಾಗದಲ್ಲಿ ಭಾರಿ ಗಾಳಿ, ಗುಡುಗು ಸಮೇತ ಮಳೆಯಾಗಿದೆ. ಕಾರವಾರದಲ್ಲಿ ಸಂಜೆ 7 ಗಂಟೆಯಿಂದ ಮಳೆ ಪ್ರಾರಂಭವಾಗಿದೆ. ಮುಂಡಗೋಡ, ಯಲ್ಲಾಪುರ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಹಾನಿಯಾಗಿದ್ದು ಇನ್ನಷ್ಟೆ ವರದಿ ಬರಬೇಕಿದೆ.

    ಹಳಿಯಾಳದಲ್ಲಿ ವ್ಯಾಪಕ ಹಾನಿ: ಹಳಿಯಾಳ ಪಟ್ಟಣದಲ್ಲಿ ಬಿರುಗಾಳಿಯ ರಭಸಕ್ಕೆ ಭಾರಿ ಗಾತ್ರದ ಮರಗಳು ಬಿದ್ದು, ಮನೆಗಳು ಜಖಂಗೊಂಡಿವೆ. ಹಲವು ಮನೆಗಳ ಮೇಲ್ಛಾವಣಿಗೆ ಹಾಕಿದ್ದ ಶೀಟ್​ಗಳು ಹಾರಿ ಹೋಗಿವೆ. ಬೆಳಗಾವಿ ರಸ್ತೆಯ ಚಿಕ್ಕನೀರಾವರಿ ಇಲಾಖೆ ಕಚೇರಿಯ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಗುಡ್ನಾಪುರ ಗಲ್ಲಿಯ ಪಶು ಆಸ್ಪತ್ರೆಯ ಪಕ್ಕದ ನಾಗೇಂದ್ರ ಶಂಕರ ಅಸುಕರ ಅವರ ಮನೆಯ ಮೇಲೆ ಬೃಹತ್ ಮರ ಬಿದ್ದು ಅಪಾರ ಹಾನಿಯಾಗಿದೆ. ಬಸವರಾಜ ಗಲ್ಲಿಯ ಶಿವಾನಂದ ಬುಲಬುಲೆ ಅವರ ಮನೆಯ ಮೇಲ್ಛಾವಣಿಗೆ ಹಾಕಿದ ಶೀಟ್​ಗಳು ಹಾರಿ ರಸ್ತೆಯ ಮೇಲೆ ಬಿದ್ದಿವೆ. ದಲಾಯತ್​ಗಲ್ಲಿಯಲ್ಲಿ ಅಬ್ದುಲ್​ರಹೆಮಾನ ಖಲೀಲ್ ಅಹ್ಮದ ಕೊಲ್ಲಾಪುರ ಎಂಬುವವರ ಮನೆಯ ಮೇಲೆ ಬೃಹತ್ ಮರ ಬಿದ್ದು ಮನೆ ಜಖಂಗೊಂಡಿದೆ. ಬಾಬುರಾವ್ ಹೋಟೆಲ್ ಬಳಿ ಶಿವಾಜಿ ಗುರವ ಅವರ ಮನೆಯ ಎಲ್ಲ ಹೆಂಚುಗಳು, ದುರ್ಗಾ ನಗರದ ಶಿವಾಜಿ ಸುರೋಜಿ ಅವರ ಕಟ್ಟಡದ ಮೇಲ್ಛಾವಣಿಯ ಸ್ಟೀಲ್ ಶೀಟ್​ಗಳು ಹಾರಿ ಹೋಗಿವೆ. ವಿಧಾನ ಪರಿಷತ್ ಸದಸ್ಯರ ಕಚೇರಿಯ ಬಳಿಯಿದ್ದ ಮರವು ನೆಲಕ್ಕೊರಗಿ ಬಿದ್ದಿದೆ. ಬಸ್ ನಿಲ್ದಾಣ ರಸ್ತೆಯಲ್ಲಿರುವ ಹಲವು ಮನೆಗಳಿಗೂ ಹಾನಿಯಾಗಿದೆ. ಪುರಸಭೆಯ ಜೆಇ ಹರೀಶ ಜಿ.ಆರ್. ಹಾಗೂ ಕಂದಾಯ ಇಲಾಖೆಯ ಆತ್ಮಾನಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts