More

    ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಉತ್ತೇಜನ

    ತುಮಕೂರು: ಜಿಲ್ಲೆಯ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೋದ್ಯಮಿಗಳ ಕೊಡುಗೆ ಪ್ರಮುಖವಾಗಿದ್ದು, ಎಲ್ಲ ರೀತಿಯಲ್ಲೂ ಸಹಕಾರ ಕಲ್ಪಿಸಲು ಜಿಲ್ಲಾಡಳಿತ ಕೂಡ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕೈಗಾರಿಕೋದ್ಯಮಿಗಳ ಕುಂದುಕೊರತೆ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾಮಟ್ಟದ ಕೈಗಾರಿಕೆಗಳ ಏಕಗವಾಕ್ಷಿ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು. ಜಿಲ್ಲೆಯಲ್ಲಿ ಅಪಾರವಾದ ನೈಸರ್ಗಿಕ ಸಂಪನ್ಮೂಲ ಹೊಂದಿದ್ದು, ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಹೊಂದಿದೆ. ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಕೈಗಾರಿಕೆಗಳಿಂದ ಉತ್ತಮ ಉದ್ಯೋಗಾವಕಾಶ ದೊರೆಯಬೇಕು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

    ತುಮಕೂರು ಹಾಗೂ ಬೆಂಗಳೂರಿನ ಪ್ರಮುಖ 23 ಉದ್ದಿಮೆದಾರರು ಮೇಳದಲ್ಲಿ ನೋಂದಾಯಿಸಿರುವುದು ಸಂತಸದ ವಿಷಯ. ಇವರಿಗೆ ವಿವಿಧ ಕೌಶಲವುಳ್ಳ 1,523 ನೌಕರರ ಅಗತ್ಯವಿದೆ, ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ವಿದ್ಯುತ್, ನೀರು ಸೇರಿ ಹಲವು ಮೂಲಸೌಲಭ್ಯಗಳ ಗುಣಮಟ್ಟ ಹೆಚ್ಚಿಸಿ, ಮತ್ತಿತರ ಮೂಲಸೌಕರ್ಯ ಒದಗಿಸಿ ಕೈಗಾರಿಕೆಗಳಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಜಿಲ್ಲಾಡಳಿತ ಶ್ರಮಿಸಲಿದೆ ಎಂದು ಹೇಳಿದರು.

    ಜಿಲ್ಲೆಯ ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸೆ.13ರಂದು ಜಿಲ್ಲಾ ಮಟ್ಟದ ಬೃಹತ್ ಉದ್ದಿಮೆದಾರರ ದುಂಡು ಮೇಜಿನ ಸಮಾವೇಶ ಆಯೋಜಿಸಲಾಗಿದೆ. 12 ಬೃಹತ್ ಉದ್ದಮೆದಾರರು 50 ಮಧ್ಯಮ ಕೈಗಾರಿಕೆಗಳು ಹಾಗು ಕೈಗಾರಿಕಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರಮುಖ 10 ಯಶಸ್ವಿ ಉದ್ದಿಮೆಗಳ ಸಿಇಒಗಳನ್ನು ಸಮಾವೇಶದಲ್ಲಿ ಸನ್ಮಾನಿಸಲಾಗುವುದು ಎಂದರು.

    ಅನುಮತಿ ತಡವಾಗಿ ಅಭಿವೃದ್ಧಿಗೆ ಅಡ್ಡಿ: ಜಿಲ್ಲೆಯ ಕೈಗಾರಿಕಾ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿದ್ದು, ಸರ್ವೀಸ್ ರಸ್ತೆಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರ ಅನುಮತಿ ಅವಶ್ಯಕತೆ, ಅನುಮತಿ ತಡಮಾಡುತ್ತಿರುವುದು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಕೆಐಎಡಿಬಿ ಇಇ ಡಿ.ಲಕ್ಷ್ಮೀಶ ಹೇಳಿದರು. ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಯದರ್ಶಿ ಹರೀಶ್ ಮಾತನಾಡಿ, ಉದ್ದಮಿದಾರರು ಕೊಳವೆಬಾವಿ ಕೊರೆಯಲು ಅನುಮತಿ ಅಗತ್ಯವಿದೆ ಎಂದರು. ಗಣಿ ಮತ್ತು ಭೂಗರ್ಭ ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೆ ಸಭೆಯನ್ನು ಕರೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

    ಗ್ರಾಮಿಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ತುಂಬಾ ಉಪಯುಕ್ತ ತೆರಿಗೆ ವಿಧಾನ ಅನುಸರಿಸಲಾಗುತ್ತಿದೆ. ಈ ಬಗ್ಗೆ ಕೈಗಾರಿಕೆಗಳ ಮಾಲೀಕರು ಯಾವುದಾದರು ಸಮಸ್ಯೆ ಇದ್ದಲ್ಲಿ ಗ್ರಾಪಂ ಪಿಡಿಒ ಸಂಪರ್ಕಿಸಬಹುದು. | ಜಿ.ಪ್ರಭು, ಜಿಪಂ ಸಿಇಒ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts