More

    ಜಿಲ್ಲೆಯಲ್ಲಿ ಕರೊನಾ ಪ್ರಕರಣ ಇಲ್ಲ

    ಧಾರವಾಡ: ಉಮ್ರಾ, ಮೆಕ್ಕಾ, ಮದೀನಾ ಪ್ರವಾಸದಿಂದ ನಗರಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಕಾರಣಕ್ಕೆ ಕೋವಿಡ್ 19 (ಕರೊನಾ ವೈರಸ್) ಪ್ರಕರಣ ಸಂಶಯದ ಹಿನ್ನೆಲೆಯಲ್ಲಿ ಶನಿವಾರ ತಪಾಸಣೆ ನಡೆಸಿ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಮಾ. 14ರಂದು ಅವರು ನಗರಕ್ಕೆ ಆಗಮಿಸಿ ಸಂದರ್ಭದಲ್ಲಿ ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಲಾಗಿತ್ತು. ಶಿವಮೊಗ್ಗದ ವಿಆರ್​ಡಿಎಲ್ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿತ್ತು. ಭಾನುವಾರ ಸಂಜೆ ಪ್ರಯೋಗಾಲಯದ ವರದಿ ‘ನೆಗೆಟಿವ್’ ಎಂದು ಬಂದಿದೆ.

    ಕರೊನಾ ವೈರಸ್ ಹಾವಳಿ ಪ್ರಾರಂಭವಾದ ದಿನದಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 2 ಪ್ರಕರಣಗಳು ಕಂಡು ಬಂದಿದ್ದು, ಎರಡೂ ವರದಿಗಳು ನೆಗೆಟಿವ್ ಬಂದಿವೆ. ವೈರಸ್ ತಡೆಗೆ ಜಿಲ್ಲಾದ್ಯಂತ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಭೀತಿಗೆ ಒಳಗಾಗಬಾರದು. ಸ್ವಚ್ಛತಾ ಹಾಗೂ ಅನುಸರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಧಾರವಾಡದಲ್ಲಿ ನಡೆದ ಪ್ರಕರಣದ ಸುದ್ದಿ ಹರಡುತ್ತಿದ್ದಂತೆ ಜನರಲ್ಲಿ ಒಂದು ರೀತಿಯಲ್ಲಿ ಭಯದ ವಾತಾವರಣ ನಿರ್ವಣವಾಗಿತ್ತು. ಇದೀಗ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಡುವಂತಾಗಿದೆ.

    60 ಮಾರ್ಗಗಳ ಬಸ್ ಸಂಚಾರ ಸ್ಥಗಿತ

    ಕರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಎಲ್ಲ ಬಸ್ ಘಟಕಗಳಲ್ಲಿ ಡೆಟಾಲ್, ಫಿನಾಯಿಲ್ ಮತ್ತು ಸ್ಯಾನಿಟೈಜರ್​ಗಳನ್ನು ಉಪಯೋಗಿಸಿ ಬಸ್​ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಎಲ್ಲ ಸಿಬ್ಬಂದಿಗೆ ಮಾಸ್ಕ್ ಉಪಯೋಗಿಸಲು ಸೂಚಿಸಲಾಗಿದೆ. ಬಸ್ ನಿಲ್ದಾಣಗಳ ಆವರಣಗಳು, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳ ಮತ್ತು ಶೌಚಗೃಹಗಳನ್ನು ಸ್ಯಾನಿಟೈಜರ್ ಉಪಯೋಗಿಸಿ ಸ್ವಚ್ಛಗೊಳಿಸಲಾಗುತ್ತಿದೆ.

    ಕರೊನಾ ವೈರಸ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕದ ಮೂಲಕ ಮಾಹಿತಿ ಬಿತ್ತರಿಸಿ, ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಪ್ರಯಾಣಿಕರ ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಒಟ್ಟು 60 ಮಾರ್ಗಗಳ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಪ್ರಯಾಣಿಕರ ಸಂಚಾರ ಪ್ರಮಾಣ ಗಮನಿಸಿ ಅಗತ್ಯವಿದ್ದಲ್ಲಿ ಇನ್ನಷ್ಟು ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಪ್ರತಿ ಬಸ್ ಘಟಕ ಮತ್ತು ನಿಲ್ದಾಣಕ್ಕೆ ಅಧಿಕಾರಿಗಳು ಮತ್ತು ಮೇಲ್ವಿಚಾರಕ ಸಿಬ್ಬಂದಿಯನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು ನಿರಂತರ ಸ್ವಚ್ಛತೆ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ರೈಲ್ವೆ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್

    ಕರೊನಾ ವೈರಸ್ ಕುರಿತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ನೈಋತ್ಯ ರೈಲ್ವೆ ವಲಯ, ಶಂಕಿತರ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿ 16 ಹಾಗೂ ಮೈಸೂರಿನ ವಿಭಾಗೀಯ ಆಸ್ಪತ್ರೆಯಲ್ಲಿ 10 ಬೆಡ್​ಗಳ ವಿಶೇಷ ಐಸೋಲೆಷನ್ ವಾರ್ಡ್ ಸ್ಥಾಪಿಸಿದೆ.

    ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಸೌಲಭ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಹುಬ್ಬಳ್ಳಿ, ಮೈಸೂರು, ಬೆಂಗಳೂರು, ವಾಸ್ಕೊ ಡ ಗಾಮಾ, ವಿಜಯಪುರ, ಬೆಳಗಾವಿ, ಗದಗ, ಬಳ್ಳಾರಿ, ಹೊಸಪೇಟೆ, ಅಳ್ನಾವರ ಮತ್ತು ಬಾಗಲಕೋಟ ನಿಲ್ದಾಣಗಳಲ್ಲಿ ಕರೊನಾ ವೈರಸ್ ಬಗ್ಗೆ ಹೆಲ್ಪ್​ಡೆಸ್ಕ್ ಪ್ರಾರಂಭಿಸಲಾಗಿದೆ.

    ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಬ್ಯಾನರ್​ಗಳನ್ನು ಲಗತ್ತಿಸಿ, ಅದರಲ್ಲಿ ಈ ವೈರಸ್ ನಿಯಂತ್ರಣಕ್ಕಾಗಿ ಯಾವ ಕಾರ್ಯ ಮಾಡಬೇಕು ಹಾಗೂ ಯಾವುದನ್ನು ಮಾಡಬಾರದೆಂಬುದನ್ನು ವಿವರಿಸಿದೆ. ಕೆಲವೆಡೆ ಎಲ್​ಇಡಿ ಟಿವಿ ಮತ್ತು ಆಡಿಯೋ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

    ಜನದಟ್ಟಣೆ ಹೆಚ್ಚಿರುವ ರೈಲ್ವೆ ಟಿಕೆಟ್ ಬುಕ್ಕಿಂಗ್ ಕಚೇರಿ, ಟಿಕೆಟ್ ತಪಾಸಣೆ ಸ್ಥಳ ಮತ್ತಿತರೆಡೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts