More

    ಜಿಲ್ಲೆಯಲ್ಲಿ ಏ.15ರಿಂದ ಜನ, ಮನೆಗಣತಿ

    ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಏ.15ರಿಂದ ಮನೆಪಟ್ಟಿ, ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಕಾರ್ಯ ಆರಂಭವಾಗಲಿದೆ. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕೇಳುವ ಅಧಿಕಾರಿಗಳಿಗೆ ಸಾರ್ವಜನಿಕರು ವಿವರ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

    ಜಿಲ್ಲಾಡಳಿತದ ಸಭಾಂಗಣದಲ್ಲಿ ಮಂಗಳವಾರ ಜನಗಣತಿ-2021ಕ್ಕೆ ಸಂಬಂಧಿಸಿದಂತೆ ಕ್ಷೇತ್ರ ತರಬೇತುದಾರರಿಗಾಗಿ ಏರ್ಪಡಿಸಿದ್ದ 5 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕೈಗೊಳ್ಳಲಾಗುತ್ತಿರುವ 8ನೇ ಜನಗಣತಿ ಇದಾಗಿದ್ದು, ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿಗೆ ಇದರಿಂದ ಸಹಕಾರಿಯಾಗಲಿದೆ ಎಂದರು.

    ಜನಗಣತಿಯಲ್ಲಿ ಮನೆ ಸ್ಥಿತಿ, ಸೌಲಭ್ಯ ಮತ್ತು ಸ್ವತ್ತುಗಳು, ಜನಸಂಖ್ಯಾಶಾಸ್ತ್ರ, ಧರ್ಮ, ಪರಿಶಿಷ್ಟ ಜಾತಿ, ಪಂಗಡ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಸಂತಾನೋತ್ಪತ್ತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ಕಲೆಹಾಕಲಾಗುತ್ತದೆ ಎಂದು ಹೇಳಿದರು.

    ಮಾಹಿತಿ ಸಂಗ್ರಹಕ್ಕೆ ಮೊಬೈಲ್ ಆಪ್ ರೂಪಿಸಿದ್ದು, ಇದನ್ನು ತುಂಬ ಸರಳ, ಅನುಕೂಲಕರ ಮತ್ತು ಬಳಕೆದಾರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಗಣತಿದಾರರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಾರ್ವಕಾಲಿಕ ಎನ್​ಪಿಆರ್ ಕಿರು ಪುಸ್ತಕಗಳನ್ನು ಸಾಗಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

    ಈ ಮಹತ್ವದ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಎಲ್ಲ ಹಂತದ ಕ್ಷೇತ್ರ ಕಾರ್ಯಕರ್ತರು, ಗಣತಿದಾರರು ನಿಷ್ಠೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ದದಿಂದ ವ್ಯವಹರಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗೀಸ್, ರಾಜ್ಯ ಸಂಪನ್ಮೂಲ ವ್ಯಕ್ತಿ ಮ್ಯಾಥ್ಯೂ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts