More

    ಜಿಲ್ಲೆಗೆ ಉತ್ತಮ ಫಲಿತಾಂಶ ನೀಡಿ

    ರಿಪ್ಪನ್​ಪೇಟೆ: ಕರೊನಾ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ವಿಳಂಬವಾಗಿದೆ. ಮಕ್ಕಳು ಶಿಕ್ಷಕರಿಂದ ದೂರ ಉಳಿದಿದ್ದು ಅವರೊಂದಿಗೆ ಸಂಪರ್ಕ ಸಾಧಿಸಿ ಮಾರ್ಗದರ್ಶನ ನೀಡುವ ಮೂಲಕ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸುವಂತೆ ನೋಡಿಕೊಳ್ಳಬೇಕೆಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಸಲಹೆ ನೀಡಿದರು.

    ಪಟ್ಟಣದ ಮೇರಿಮಾತಾ ಪ್ರೌಢಶಾಲಾ ಸಭಾಂಗಣದಲ್ಲಿ ಹೊಸನಗರ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರೊಂದಿಗೆ ಏರ್ಪಡಿಸಿದ್ದ ಎಸ್​ಎಸ್​ಎಲ್​ಸಿ ಪರೀಕ್ಷಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಫೋನ್ ಇನ್ ಹಾಗೂ ಆನ್​ಲೈನ್ ತರಗತಿ ಮುಂದುವರಿಸಿ. ಆದರೆ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

    ಉತ್ತೀರ್ಣ ಮಾನದಂಡ ಇಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಚಿಕ್ಕ ತಂಡಗಳನ್ನು ರಚಿಸಿ ನಿಗದಿತ ಪ್ರದೇಶದಲ್ಲಿ ಅಂತರ ಕಾಯ್ದುಕೊಂಡು ವಿಷಯವಾರು ಬೋಧನೆ ಅನಿವಾರ್ಯ. ಹಾಸ್ಟೆಲ್​ನಿಂದ ಊರಿಗೆ ಹೋದ ಮಕ್ಕಳನ್ನು ವಾಪಸ್ ಕರೆಸಿಕೊಂಡು ಪುನರ್ಮನನ ತರಗತಿ ಮಾಡಿ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

    ಬಾಲ್ಯ ನೆನೆದ ಸ್ಥಾಯಿ ಸಮಿತಿ ಅಧ್ಯಕ್ಷ: ವಿದ್ಯಾರ್ಥಿ ದಿನಗಳಲ್ಲಿ ನಾನೇನು ಬುದ್ಧಿವಂತನಲ್ಲ. ನಾನು ಶೇ.45 ಅಂಕಗಳಿಕೆಯೊಂದಿಗೆ ಪಾಸ್ ಮಾಡಿದ್ದೇನೆ. ಓದಿನಲ್ಲಿ ಹೆಚ್ಚೇನೂ ಆಸಕ್ತಿ ಇಲ್ಲದ ನಾನು ಪರೀಕ್ಷೆ ಸಂದರ್ಭ 25-30 ದಿನಗಳಲ್ಲಿ ಮಾತ್ರ ಓದುತ್ತಿದ್ದೆ. ಪಾಸ್ ಆಗಲು ಅಷ್ಟು ದಿನಗಳು ಸಾಕಾಗಿದ್ದವು ಎಂದು ಕೆ.ಇ.ಕಾಂತೇಶ್ ತಮ್ಮ ಬಾಲ್ಯವನ್ನು ಸ್ಮರಿಸಿದರು. ಪರೀಕ್ಷೆಗೆ 23 ದಿನಗಳಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಕರು ಓದಿನತ್ತ ಗಮನಹರಿಸುವಂತೆ ಮಾಡಿದರೆ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದೆಂಬುದು ನನ್ನ ನಿರೀಕ್ಷೆ ಎಂದು ಹೇಳಿದರು.

    ಡಿಡಿಪಿಐ ಎನ್.ಎಂ.ರಮೇಶ್, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್, ತಾಪಂ ಅಧ್ಯಕ್ಷ ಆಲುವಳ್ಳಿ ವೀರೇಶ್, ಸದಸ್ಯ ಎನ್.ಚಂದ್ರೇಶ್, ಬಿಇಒ ರಮೇಶ್, ಶಂಕರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts