More

    ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆ

    ನರೇಗಲ್ಲ: ಕರೊನಾ ವೈರಸ್ ತಡೆಗಟ್ಟಲು ಲಾಕ್​ಡೌನ್ ಜಾರಿಯಲ್ಲಿರುವುದರಿಂದ ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಲಾಗಿದೆ.

    ಪಿಎಸ್​ಐ ಬಸವರಾಜ ಕೊಳ್ಳಿ ಮಾತನಾಡಿ, ‘ಕರೊನಾ ವೈರಸ್ ಹರಡದಂತೆ ತಡೆಯಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಮತ್ತು ಜನರನ್ನು ತಪಾಸಣೆ ಮಾಡುವ ಉದ್ದೇಶದಿಂದ ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಲಾಗಿದೆ. ಠಾಣಾ ವ್ಯಾಪ್ತಿಯ ಹಂಚಿನಾಳ ರಸ್ತೆ, ಹಾಲಕೆರೆ ಸರ ಹದ್ದು, ದ್ಯಾಂಪುರ ಹತ್ತಿರ ಸೇರಿ ವಿವಿಧೆಡೆ ಚೆಕ್​ಪೋಸ್ಟ್ ಸ್ಥಾಪಿಸಿ ಅಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರತಿಯೊಂದು ವಾಹನಗಳ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ, ಪಟ್ಟಣ, ಗ್ರಾಮಗಳಿಗೆ ಜನರ ಪ್ರವೇಶ ನಿಷೇಧಿಸಲಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಜನರು ಮನೆ ಬಿಟ್ಟು ಹೊರಗೆ ಬಾರದಂತೆ ನೋಡಿಕೊಳ್ಳಲಾಗುತ್ತದೆ’ ಎಂದರು.

    ಪಪಂ ಕಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ ಮಾತನಾಡಿ, ನರೇಗಲ್ಲ ಪಟ್ಟಣದ 17 ವಾರ್ಡ್​ಗಳಲ್ಲಿ ಈಗಾಗಲೇ ಹೈಪೋ ಕ್ಲೊರೈಡ್ ಔಷಧ ಸಿಂಪಡಿಸಲಾಗಿದೆ. ಅಲ್ಲದೆ, ಪಪಂ ಸಿಬ್ಬಂದಿ ಬೇರೆ ಜಿಲ್ಲೆಗಳಿಂದ ಪಟ್ಟಣಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

    ಎಎಸ್​ಐ ಶೇಖರ ಹೊಸಳ್ಳಿ, ಪೇದೆಗಳಾದ ಮಂಜುನಾಥ ಬಂಡಿವಡ್ಡರ, ಎಸ್.ಎ. ಜೋಶಿ, ಎಸ್.ಬಿ. ಸವದತ್ತಿ, ಮಂಜುನಾಥ ಮುಳಗುಂದ, ಬಸವರಾಜ ಮುಳಗುಂದ, ಟಿ.ಎನ್, ಕಾರಭಾರಿ, ಹನುಮಂತ ದೊಡ್ಡಮನಿ, ಹನುಮಂತ ಡಂಬಳ, ನಾಗರಾಜ ಮಂಗಳೂರ, ಪಪಂ ಸಿಬ್ಬಂದಿ ಎಸ್.ಎ. ಜಕ್ಕಲಿ, ಆರಿಫ್ ಮಿರ್ಜಾ, ನೀಲಪ್ಪ ಚಳ್ಳಮರದ, ಶರಣಪ್ಪ ಮ್ಯಾಗೇರಿ ಇತರರಿದ್ದರು.

    ರಸ್ತೆಗೆ ಮುಳ್ಳು ಕಂಟಿ ಇಟ್ಟ ಗ್ರಾಮಸ್ಥರು

    ನರಗುಂದ: ಕರೊನಾ ವೈರಸ್ ಹರಡುವ ಭೀತಿಯಿಂದಾಗಿ ತಾಲೂಕಿನ ಕಲಕೇರಿ ಮತ್ತು ಹುಣಸೀಕಟ್ಟಿ ಗ್ರಾಮಸ್ಥರು ತಮ್ಮ ಗ್ರಾಮ ಪ್ರವೇಶಿಸದಂತೆ ಮಾರ್ಗಮಧ್ಯೆ ಮುಳ್ಳಿನ ಕಂಟಿಗಳನ್ನು (ಬೇಲಿ) ಇಟ್ಟು ಕರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

    ಗ್ರಾಮಗಳ ಮಧ್ಯದ ಹಿರೇಹಳ್ಳ ಹಾಗೂ ಸಿದ್ದಾಪುರದಿಂದ ಜಗಾಪೂರ ಗ್ರಾಮ ಪ್ರವೇಶಿಸುವ ಡಾಂಬರ್ ರಸ್ತೆಗಳಲ್ಲಿ ಮುಳ್ಳಿನ ಕಂಟಿಗಳನ್ನು ಹಚ್ಚಲಾಗಿದೆ. ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಲಕೇರಿ ಗ್ರಾಮವು ಹುಣಸೀಕಟ್ಟಿ, ಜಗಾಪೂರ, ಸಿದ್ದಾಪೂರ, ಕಣಕೀಕೊಪ್ಪ, ಗುರ್ಲಕಟ್ಟಿ ಸೇರಿ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಈ ರಸ್ತೆ ಮಾರ್ಗವಾಗಿ ನೂರಾರು ವಾಹನ ಸವಾರರು ಸಂಚರಿಸುತ್ತಾರೆ. ಈ ವೇಳೆ ಪಕ್ಕದ ಜಿಲ್ಲೆ ಮತ್ತು ಗ್ರಾಮಗಳಿಂದ ಬರುವ ಅಪರಿಚಿತರಿಂದ ತಮ್ಮ ಗ್ರಾಮದ ಜನರಿಗೆ ಕರೊನಾ ಸೋಂಕು ಹರಡಬಾರದೆಂದು ಈ ಮುಳ್ಳಿನ ಕಂಟಿ ಹಚ್ಚಲಾಗುತ್ತಿದೆ. ಇದರಿಂದಾಗಿ ಕೆಲ ವಾಹನ ಸವಾರರು ಬೇರೆ ಊರುಗಳಿಗೆ ತೆರಳಬೇಕಾದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೂಳಿದ ಕೆಲವರಿಗೆ ಇದು ಅನಿವಾರ್ಯ ಎಂಬಂತೆ ಪಕ್ಕದಲ್ಲಿರುವ ಜಮೀನುಗಳಲ್ಲಿ ತಮ್ಮ ವಾಹನಗಳನ್ನು ತಳ್ಳುತ್ತ ಪ್ರಮುಖ ರಸ್ತೆಯನ್ನೇರಿ ಮುಂದಿನ ಕಾರ್ಯಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts