More

    ಜಿಲ್ಲಾದ್ಯಂತ ಸಂಕ್ರಾಂತಿ ಸಡಗರ

    ಗದಗ: ಗದಗ-ಬೆಟಗೇರಿ ಸೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿಯನ್ನು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

    ಬೆಳಗ್ಗೆ ಎಳ್ಳು-ಅರಿಷಿಣ ಹಚ್ಚಿಕೊಂಡು ಸ್ನಾನ ಮಾಡಿ, ಎಳ್ಳು-ಬೆಲ್ಲ ಸವಿದು, ಹಿರಿಯರಿಗೆ ಎಳ್ಳು ಬೆಲ್ಲ ಕೊಟ್ಟು ಆಶೀರ್ವಾದ ಪಡೆದರು. ಕೆಲವರು ನದಿ, ಕೆರೆಗಳಲ್ಲಿ ಸ್ನಾನ ಮಾಡಿ ಸಮೀಪದಲ್ಲಿರುವ ಪುಣ್ಯಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

    ಗದಗ- ಬೆಟಗೇರಿ ಅವಳಿ ನಗರದ ಭೀಷ್ಮ ಕೆರೆ, ಬಿಂಕದಕಟ್ಟಿ ಕಿರು ಮೃಗಾಲಯ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ, ನಾಗಾವಿ ತಾಂಡಾ ಬಳಿ ಇರುವ ಜಲಶಂಕರ ದೇವಸ್ಥಾನ, ಕಪ್ಪತಗುಡ್ಡ, ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ, ಗಜೇಂದ್ರಗಡ ಕಾಲಕಾಲೇಶ್ವರ ದೇವಸ್ಥಾನ, ಶಿರಹಟ್ಟಿ ಫಕೀರೇಶ್ವರ ದೇವಸ್ಥಾನ, ಐತಿಹಾಸಿಕ ಲಕ್ಕುಂಡಿ ಸೇರಿ ಜಿಲ್ಲೆಯ ವಿವಿಧ ಉದ್ಯಾನಗಳಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು.

    ಬಗೆಬಗೆಯ ಆಹಾರ: ಮಾದಲಿ, ಕರಿಗಡುಬು, ಎಳ್ಳು- ಶೇಂಗಾ ಹೋಳಿಗೆ, ತುಪ್ಪ, ಸಜ್ಜಿ -ಬಿಳಿಜೋಳ ರೊಟ್ಟಿ, ಹಿಟ್ಟಿನಪಲ್ಲೆ, ಮೊಸರನ್ನ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದ ಜನರು ಸಂಬಂಧಿಕರೊಡನೆ ಸೇರಿ ಹಬ್ಬದೂಟ ಸವಿದರು.

    ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥವನ್ನು ಬದಲಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿತು. ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ವೀರನಾರಾಯಣ, ತ್ರಿಕೂಟೇಶ್ವರ, ಪಂಡಿತ ಪುಟ್ಟರಾಜ ಗವಾಯಿಗಳ ಮಠ, ಅಂಬಾಭವಾನಿ ದೇವಸ್ಥಾನ, ಕಪ್ಪತಗುಡ್ಡದ ಕಪ್ಪತಮಲ್ಲೇಶ್ವರ, ಬನಶಂಕರಿ ದೇವಸ್ಥಾನ, ಶಿವಾನಂದಮಠಕ್ಕೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಜಾತ್ರಾ ಮಹೋತ್ಸವ: ಸಂಕ್ರಾಂತಿಯಂದು ತಾಲೂಕಿನ ನಾಗಾವಿ ತಾಂಡಾದ ಜಲಾಶಂಕರ ಹಾಗೂ ಪಾಪನಾಶಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಜರುಗಿತು. ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು.

    ಭೀಷ್ಮ ಕೆರೆ ಆವರಣದ ಮಕ್ಕಳ ಉದ್ಯಾನ, ಬಸವೇಶ್ವರ ಪುತ್ಥಳಿ ಬಳಿಯ ಪ್ರದೇಶ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಪುಟಾಣಿ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಯುವಕರು ಆಗಮಿಸಿದ್ದರಿಂದ ಹಬ್ಬ ಮತ್ತಷ್ಟು ರಂಗೇರಿತ್ತು.

    ಮಕರ ಸಂಕ್ರಾಂತಿ ನಿಮಿತ್ತ ಬಿಂಕದಕಟ್ಟಿ ಕಿರು ಮೃಗಾಲಯದ ಅವರಣದಲ್ಲಿ ಸಾರ್ವಜನಿಕರ ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮೃಗಾಲಯದಲ್ಲಿ ಪ್ರವೇಶಕ್ಕೆ ಸಾರ್ವಜನಿಕರಿಗೆ ಸುಲಭವಾಗಿ ಅವಕಾಶ ಕಲ್ಪಿಸಲು ಹೆಚ್ಚುವರಿ ಕೌಂಟರ್​ಗಳನ್ನು ತೆರೆಯಲಾಗಿತ್ತು.

    ಮಕರ ಸಂಕ್ರಾಂತಿಯಂದು ಪೋಷಕರ ಜತೆಗೆ ಆಗಮಿಸಿದ್ದ ಮಕ್ಕಳು ಭೀಷ್ಮ ಕೆರೆ ಆವರಣದ ಉದ್ಯಾನ ಹಾಗೂ ಮೃಗಾಲಯದಲ್ಲಿ ಜೋಕಾಲಿ, ಜಾರುವಬಂಡಿ, ರೋಪ್ ಜಂಪಿಂಗ್ ಸೇರಿ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು. ಮೃಗಾಲಯದಲ್ಲಿನ ಹುಲಿಗಳು ನೋಡುಗರನ್ನು ಆಕರ್ಷಿಸಿದವು. ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಯುವಕರು ವುಡನ್ ವಾಕ್ ಥ್ರೂ ಅಡ್ವೆಂಚರ್ ಹಾಗೂ ಚಾರಣ ಪಥಕ್ಕೆ ತೆರಳಿ ಸಾಹಸ ಪ್ರದರ್ಶಿಸಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts