More

    ಜಿಮ್ಸ್ನಲ್ಲಿ ವೃದ್ಧ ದಂಪತಿ ಹೈರಾಣ

    ಕಲಬುರಗಿ: ತುರ್ತು ಚಿಕಿತ್ಸೆ ಪಡೆದುಕೊಳ್ಳಲು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಬಂದಿದ್ದ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ವೃದ್ಧ ದಂಪತಿ ಮರಳಿ ಊರಿಗೆ ಹೋಗಲು ವಾಹನಗಳ ವ್ಯವಸ್ಥೆಯಿಲ್ಲದೆ ಹೈರಾಣ ಆಗಿರುವ ಘಟನೆ ಶುಕ್ರವಾರ ನಡೆದಿದೆ.
    ಜಂಪಣ್ಣ ಕುಂಬಾರ ಹಾಗೂ ನಾಗಮ್ಮ ಸಂಕಷ್ಟಕ್ಕೆ ಸಿಲುಕಿದ್ದರು. ಮನೆಯಲ್ಲಿ ಮಾತಿಗೆ ಮಾತು ಬೆಳೆದಾಗ ತಾಯಿ ಮತ್ತು ಮಗನ ನಡುವೆ ಚಕಮಕಿ ನಡೆದಾಗ ಮಗ ಸಹನೆ ಕಳೆದುಕೊಂಡು ತಾಯಿಗೆ ಹೊಡೆದಿದ್ದಾನೆ. ಅಸ್ವಸ್ಥಗೊಂಡ ಪತ್ನಿಯನ್ನು ಕರೆದುಕೊಂಡು ಜಂಪಣ್ಣ ಅಂಬುಲೆನ್ಸ್ನಲ್ಲಿ ಜಿಮ್ಸ್ ಆಸ್ಪತ್ರೆಗೆ ಬಂದಿದ್ದರು.
    ಶುಕ್ರವಾರ ಬಂದಾಗ ತುರ್ತು ಚಿಕಿತ್ಸಾ ವಿಭಾಗದದವರು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ತಪಾಸಣೆ ನಡೆಸಿದ ಚಿಕಿತ್ಸೆ ನೀಡಿ ವೈದ್ಯರು ಊರಿಗೆ ಹೋಗಲು ಸಲಹೆ ನೀಡಿದ್ದಾರೆ. ನಂತರ ಅವರು ವಾಹನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಿವಾರ್ಯವಾಗಿ ತುರ್ತು ಚಿಕಿತ್ಸಾ ವಿಭಾಗದ ಬಳಿಯ ದಾಖಲಾತಿ ಕೇಂದ್ರ ಬಳಿಯಲ್ಲಿಯೇ ಕುಳಿತುಕೊಂಡಿದ್ದರು.
    ಆಸ್ಪತ್ರೆಗೆ ಬಂದಾಗ ಅಜ್ಜಿಯನ್ನ್ನು ಸ್ಕಾನಿಂಗ್ ಮತ್ತು ಎಕ್ಸ್ರೆ ಮಾಡಲು ರೇಡಿಯಾಲಜಿ ವಿಭಾಗಕ್ಕೆ ಕರೆದುಕೊಂಡು ಹೋಗಲು ಅಲ್ಲಿನ ಆಯಾಗಳು ಸಹಾಯ ಮಾಡಿಲ್ಲ. ವೃದ್ಧನೇ ಸ್ಟ್ರೇಚರ್ ಮೇಲೆ ಮಲಗಿಸಿಕೊಂಡು ತಳ್ಳಿಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಆನಂದ ನಂದೂರ ಎಂಬುವರು ಈ ವಿಷಯ ವಿಜಯವಾಣಿ ಗಮನಕ್ಕೆ ತಂದಾಗ ಅಲ್ಲಿಗೆ ಹೋಗಿ ವೃದ್ಧ ದಂಪತಿಯನ್ನು ಮಾತನಾಡಿಸಿದಾಗ ಚಿಕಿತ್ಸೆ ನೀಡಿದ್ದಾರೆ. ಊರಿಗೆ ಹೋಗಲು ಬಸ್ ಅಥವಾ ಇನ್ನಾವುದೇ ಅನುವು ಇಲ್ಲದೆ ಕುಳಿತುಕೊಂಡಿದ್ದಾಗಿ ಹೇಳಿದರು.
    ಜಿಲ್ಲಾ ಸರ್ಜನ್ ಡಾ.ಎ.ಬಿ.ರುದ್ರವಾಡಿ ಅವರ ಗಮನಕ್ಕೆ ದಂಪತಿ ವಾಹನವಿಲ್ಲದೆ ಊರಿಗೆ ಹೋಗಲು ಪರದಾಡುತ್ತಿರುವುದರ ಬಗ್ಗೆ ಗಮನ ಸೆಳೆದಾಗ, ಅಫಜಲಪುರ ಕಡೆಯಿಂದ ಬರುವ ಅಂಬುಲೆನ್ಸ್ನಲ್ಲಿ ಇಲ್ಲವೇ ಬೇರೊಂದು ಅಂಬುಲೆನ್ಸ್ ಮಾಡಿ ಅವರನ್ನು ಊರಿಗೆ ಕಳುಹಿಸುವ ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts