More

    ಜಿಪಂನಿಂದ ಕೋಟಿತೀರ್ಥಕ್ಕೆ ಕಾಯಕಲ್ಪ

    ಶ್ರೀಧರ ಅಡಿ ಗೋಕರ್ಣ

    ಇಲ್ಲಿನ ಪೌರಾಣಿಕ ಪುಷ್ಕರಣಿ ಕೋಟಿತೀರ್ಥ ಮತ್ತೆ ಸುದ್ದಿಯಲ್ಲಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೋಟಿತೀರ್ಥದ ಸಂಪೂರ್ಣ ಶುದ್ಧೀಕರಣಕ್ಕೆ ಸ್ಥಳದಲ್ಲಿಯೇ ಯೋಜನೆ ಮಂಜೂರು ಮಾಡಿದ ತರುವಾಯ ಸ್ಥಳೀಯರಲ್ಲಿ ಇದರ ಪುನರುತ್ಥಾನದ ಆಸೆ ಚಿಗುರೊಡೆದಿದೆ.

    ಡಿಸೆಂಬರ್ ಮೊದಲ ವಾರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಕರ್ಣದಲ್ಲಿ ಸ್ಥಳೀಯರ ಸಭೆ ನಡೆಸಿ ಕಾಮಗಾರಿಯ ಬಗ್ಗೆ ವಿವರಿಸಲಿದ್ದಾರೆ. ಪುರಾತನ ಪುರಾಣಗಳು ಗೋಕರ್ಣದ ಕೋಟಿತೀರ್ಥಕ್ಕೆ ಉನ್ನತ ಸ್ಥಾನ ನೀಡಿವೆ. ಮುಕ್ಕಾಲು ಕಿಮೀಗೂ ಹೆಚ್ಚಿನ ವ್ಯಾಪ್ತಿಯಲ್ಲಿ, ಆರು ಎಕರೆಗೂ ಮೀರಿದ ವಿಸ್ತೀರ್ಣ ಇರುವ ಕೋಟಿತೀರ್ಥವು ಪರಮ ಪಾವನಿ ಮತ್ತು ಸರ್ವ ಪಾಪನಾಶಿನಿಯಾಗಿದ್ದು, ಪಾಪಿಷ್ಟನಾದ ಮಾನವ ಇಲ್ಲಿ ಒಮ್ಮೆ ಸ್ನಾನ ಮಾಡಿದರೆ ಸಾಕು ಪುನರ್ಜನ್ಮದ ಕಾಟವಿಲ್ಲ ಎನ್ನುತ್ತದೆ ಪುರಾಣ. ಆದರೆ, ಪೌರಾಣಿಕ ಘನತೆಗೆ ಕುಂದು ಬರುವಂತಿದೆ ಸದ್ಯ ಈ ತೀರ್ಥದ ಪರಿಸ್ಥಿತಿ.

    ಸರ್ಕಾರ ಕಾರಣ: ಕೋಟಿತೀರ್ಥ ಕಳೆದ ಹಲವು ವರ್ಷಗಳಿಂದ ಕಲ್ಮಶಕೂಪ ಆಗಿರುವುದಕ್ಕೆ ಸ್ಥಳೀಯರಾಗಲಿ, ಇಲ್ಲಿಗೆ ನಿತ್ಯ ಭೇಟಿ ಕೊಡುವ ಯಾತ್ರಿಕರಾಗಲಿ ಖಂಡಿತಾ ಕಾರಣರಲ್ಲ. ಕೋಟಿತೀರ್ಥದ ಇವತ್ತಿನ ದುಸ್ಥಿತಿಗೆ 2014ರಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ವಿುತಿ ಕೇಂದ್ರ ನಡೆಸಿದ ಅಸಮರ್ಪಕ ಮತ್ತು ಅಪೂರ್ಣ ಕಾಮಗಾರಿ ಕಾರಣ. ಅಂದು ಮಳೆಗಾಲದ ಪ್ರಾರಂಭದ ವೇಳೆ ಕೋಟಿತೀರ್ಥದ ಸ್ವಚ್ಛತಾ ಕೆಲಸ ಪ್ರಾರಂಭಿಸಿ ಪೂರ್ತಿ ನೀರು ಹೊರಸಾಗಿಸಲಿಲ್ಲ. ಇದನ್ನು ಮುಚ್ಚಿಹಾಕಲು ಹೊರಗಿನಿಂದ ವಿವಿಧ ಸಸ್ಯಗಳ ಬೀಜದಿಂದ ಕೂಡಿದ್ದ ಅಶುದ್ಧ ಮಣ್ಣು ತಂದು ಕೋಟಿತೀರ್ಥಕ್ಕೆ ಸುರಿದು ನೀರು ಆರಿಸಿದ ನಾಟಕವಾಡಿ ಕಾಮಗಾರಿಗೆ ಇತಿಶ್ರೀ ಹಾಡಲಾಯಿತು. ಮುಂದೆ ಒಂದೇ ತಿಂಗಳಲ್ಲಿ ಕೋಟಿತೀರ್ಥದ ನೀರಿನಾಳದಿಂದ ಬಗೆಬಗೆಯ ಕಾಡು ಸಸ್ಯಗಳ ಸಾಮ್ರಾಜ್ಯ ಮೇಲೆದ್ದು ಬಂದು ನೀರು ಕಪ್ಪು ಬಣ್ಣಕ್ಕೆ ತಿರುಗಿತು.

    ಸಚಿವರ ಮೌಖಿಕ ಒಪ್ಪಿಗೆ: ತೀರ್ಥ ಸ್ವಚ್ಛ ಮಾಡುವ ಕುರಿತಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ 1 ಕೋಟಿ 50 ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಬೆಂಗಳೂರಿನ ಜಲ ತಜ್ಞ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಈ ಯೋಜನೆ ಸಿದ್ಧವಾಗಿದೆ. ಉತ್ತರ ಕನ್ನಡ ಜಿಪಂ ಸಿಇಒ ಮತ್ತು ಗ್ರಾಮೀಣಾಭಿವೃದ್ಧಿ ಕಮಿಷನರ್ ಮಟ್ಟದ ವಿಡಿಯೋ ಕಾನ್ಪರೆನ್ಸ್ ನಡೆಸಿರುವ ಸಚಿವ ಈಶ್ವರಪ್ಪನವರು ಯೋಜನೆಗೆ ಮೌಖಿಕ ಒಪ್ಪಿಗೆ ಸೂಚಿಸಿದ್ದಾರೆ.

    ಕೋಟಿತೀರ್ಥದಲ್ಲಿ ಸದ್ಯ 60 ಸಾವಿರ ಲೀ. ನೀರಿದೆ ಎಂದು ಅಂದಾಜಿಸಲಾಗಿದೆ. ಕೋಟಿತೀರ್ಥದ ನೀರಿನ ಒಳ ಹರಿವು ಡಿಸೆಂಬರ್ ಕೊನೆಯವರೆಗೂ ಮುಂದುವರಿಯಲಿರುವುದರಿಂದ ಜನವರಿ ವೇಳೆಗೆ ನೀರು ಆರಿಸುವ ಕೆಲಸಕ್ಕೆ ಮುಂದಾಗಲು ನಿರ್ಧರಿಸಲಾಗಿದೆ. ಆ ತರುವಾಯ ಕೆಲವು ವಾರಗಳವರೆಗೆ ತೀರ್ಥದ ಮಣ್ಣು ಪೂರ್ತಿಯಾಗಿ ಒಣಗಲು ಬಿಟ್ಟು ನಂತರ ಅದರ ಹೊರ ಸಾಗಾಟ ನಡೆಯಲಿದೆ. ಮೇ ಅಂತ್ಯದ ಒಳಗೆ ಪೂರ್ಣ ಕಾಮಗಾರಿ ಮುಗಿಸಿ ಮುಂಬರುವ ಮಳೆಗಾಲದ ಪ್ರಾರಂಭಕ್ಕೆ ತೀರ್ಥವನ್ನು ಅಣಿಗೊಳಿಸುವ ಪ್ರಯತ್ನದಲ್ಲಿ ಜಿಪಂ ಮುಂದಾಗಿದೆ.

    ಆರೋಗ್ಯ ಇಲಾಖೆ ಎಚ್ಚರಿಕೆ
    ಆರೋಗ್ಯ ಇಲಾಖೆ ಕೋಟಿತೀರ್ಥದ ನೀರಿನ ಪರೀಕ್ಷೆ ನಡೆಸಿ ಈ ಹಿಂದೆಯೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ಇದನ್ನು ಬಳಸಿದಲ್ಲಿ ಭಯಂಕರ ಚರ್ಮ ರೋಗದ ಜೊತೆಗೆ ಇನ್ನೂ ಅನೇಕ ಸಾಂಸರ್ಗಿಕ ರೋಗ ಬರುವ ಸಾಧ್ಯತೆಗಳ ಬಗ್ಗೆ ಎಚ್ಚರಿಸಿ ಇದನ್ನು ಬಳಸದಂತೆ ನಿರ್ಬಂಧಿಸಿದೆ. ಹೀಗಾಗಿ, ಕೋಟಿತೀರ್ಥ ಇಂದು ಪ್ರದರ್ಶನದ ಪುಷ್ಕರಣಿಯಾಗಿ ಮಾತ್ರ ಉಳಿದುಕೊಂಡಿದೆ.

    ಗ್ರಾಮೀಣಾಭಿವೃದ್ಧಿ ಸಚಿವರ ಆದೇಶದಂತೆ ಯಾತ್ರಿಕರ ಶ್ರದ್ಧಾ ಕೇಂದ್ರವಾದ ಪುರಾತನ ಕೋಟಿತೀರ್ಥವನ್ನು ಶುದ್ಧೀಕರಿಸಲು ಈಗಾಗಲೇ ತಜ್ಞರಿಂದ ಯೋಜನೆ ಸಿದ್ಧ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗೆಗೆ ನಡೆಸಲಾದ ವಿಡಿಯೋ ಕಾನ್ಪರೆನ್ಸ್​ನಲ್ಲಿ ಇದಕ್ಕೆ ಮೌಖಿಕ ಒಪ್ಪಿಗೆ ನೀಡಿರುವ ಸಚಿವರು ಮುಂದುವರಿಯಲು ತಿಳಿಸಿದ್ದಾರೆ. ಸದ್ಯವೇ ಸರ್ಕಾರದ ಲಿಖಿತ ಆದೇಶ ಬರುವ ಸಾಧ್ಯತೆಯಿದೆ. ಆ ತರುವಾಯ ಟೆಂಡರ್ ಮುಂತಾದ ಅಗತ್ಯ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಯೋಜನೆ ಸಂಬಂಧ ಮುಂದಿನ ವಾರ ಸ್ಥಳೀಯ ಸಭೆ ನಡೆಸಿ ವಿವರಿಸಲು ಉದ್ದೇಶಿಸಲಾಗಿದೆ.
    ಎಂ. ರೋಶನ್ಜಿ ಲ್ಲಾ ಪಂಚಾಯತಿ ಸಿಇಒ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts