More

    ಜಿದ್ದಾಜಿದ್ದಿ ಕಾಳಗ, ಬಲಾಢ್ಯರಿಗೆ ಬಿಸಿ

    ಬೆಳಗಾವಿ: ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಲಿತಾಂಶದ್ದೇ ಚರ್ಚೆ. ಇದು ಮುಂದಿನ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆಯೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

    ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ತವರೂರಾದ ಕಲ್ಲೋಳಿಯ ಪಟ್ಟಣ ಪಂಚಾಯಿತಿಯ 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 5 ಅಭ್ಯರ್ಥಿಗಳು ಮಾತ್ರ ಗೆದ್ದಿದ್ದು, 11 ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದರಿಂದ ಕಡಾಡಿ ಮುಖಭಂಗ ಅನುಭವಿಸುವಂತಾಗಿದೆ. ಅರಬಾವಿ ಕ್ಷೇತ್ರದಲ್ಲಿಯೂ 16 ಸದಸ್ಯರ ಪೈಕಿ 5 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಪಕ್ಷೇತರಾಗಿ ಸ್ಪರ್ಧಿಸಿದ್ದ 11 ಜನರು ಗೆದ್ದಿದ್ದಾರೆ.

    ನಾಗನೂರ, ಬೋರಗಾಂವದಲ್ಲಿ ‘ಬಿಗ್ ಜೀರೋ’: ನಾಗನೂರ ಮತ್ತು ಬೋರಗಾಂವ ಪಪಂದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿ, ಶೂನ್ಯ ಸಾಧನೆ ಮಾಡಿದೆ. ಗೆದ್ದೆತ್ತಿನ ಬಾಲ ಹಿಡಿಯುವಂತೆ ಈಗ ಗೆದ್ದವರೆಲ್ಲರೂ ನಮ್ಮವರೇ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಚಲ ವಿಶ್ವಾಸವಿದ್ದರೆ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ-ಕಾಂಗ್ರೆಸ್ ತಮ್ಮ ‘ಚಿಹ್ನೆ’ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಏಕೆ ಎಂದು ರಾಜಕೀಯ ಪರಿಣತರು ಪ್ರಶ್ನಿಸಿದ್ದಾರೆ.

    ಯಕ್ಸಂಬಾದಲ್ಲಿ ಕಾಂಗ್ರೆಸ್ ಜಯಭೇರಿ: ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರ ಸಾರಥ್ಯದಲ್ಲಿ ಸ್ವಗ್ರಾಮವಾಗಿರುವ ಯಕ್ಸಂಬಾ ಪಟ್ಟಣ ಪಂಚಾಯಿತಿಯಲ್ಲಿ 16 ಸ್ಥಾನ ಗೆಲ್ಲುವುದರ ಮೂಲಕ ಕಾಂಗ್ರೆಸ್‌ಗೆ ಪ್ರಚಂಡ ಗೆಲುವು ತಂದುಕೊಟ್ಟಿದ್ದಾರೆ. ಆದರೆ, ಬಿಜೆಪಿ ಮಾತ್ರ ಒಂದೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

    ಅಥಣಿಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಅಥಣಿ ಪುರಸಭೆಯ 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇನ್ನುಳಿದ 12 ಸ್ಥಾನಗಳಲ್ಲಿ 9 ಬಿಜೆಪಿ ಅಭ್ಯರ್ಥಿಗಳು, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

    ಶಾಸಕ ಪಿ.ರಾಜೀವ್ ಕ್ಷೇತ್ರದಲ್ಲಿ ಬಿಜೆಪಿಗೆ ಜಯ: ಬಿಜೆಪಿ ವಕ್ತಾರ ಹಾಗೂ ಕುಡಚಿ (ಮೀಸಲು) ಶಾಸಕ ಪಿ.ರಾಜೀವ್ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾರೂಗೇರಿ ಪುರಸಭೆ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುವುದರ ಮೂಲಕ ಬಿಜೆಪಿ ತನ್ನ ಬಲ ಪ್ರದರ್ಶನ ಮಾಡಿದೆ. ಇನ್ನುಳಿದ 8 ಸ್ಥಾನಗಳ ಪೈಕಿ ಕಾಂಗ್ರೆಸ್‌ನ 7 ಅಭ್ಯರ್ಥಿ, ಓರ್ವ ಪಕ್ಷೇತರ ಜಯ ಸಾಧಿಸಿದ್ದಾರೆ. ಇದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮುಗಳಖೋಡ ಪುರಸಭೆ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದು, ಸ್ಪಷ್ಟ ಬಹುಮತ ಪಡೆದಿದೆ. 6 ಪಕ್ಷೇತರರು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 4 ಸ್ಥಾನ ಗೆದ್ದು ಮುಖಭಂಗ ಅನುಭವಿಸಿದೆ.

    ಕಾಗವಾಡ, ರಾಯಬಾಗದಲ್ಲಿ 50-50: ರಾಯಬಾಗ ತಾಲೂಕಿನ ಎರಡು ಪಪಂಗಳ ಪೈಕಿ ಒಂದರಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೆ, ಮೊತ್ತೊಂದು ಪಪಂನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಹಾಗಾಗಿ ರಾಯಬಾಗದಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ 50-50 ಪಲಿತಾಂಶ ಬಂದಿದೆ. ಕಂಕಣವಾಡಿ ಪಪಂನಲ್ಲಿ ಬಿಜೆಪಿ 12 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಚಿಂಚಲಿ ಪಪಂನಲ್ಲಿ ಕಾಂಗ್ರೆಸ್ 8 ಸ್ಥಾನ ಗೆದ್ದಿದ್ದು, ಬಿಜೆಪಿ- 5 ಮತ್ತು 4 ಪಕ್ಷೇತರರು ಗೆದ್ದಿದ್ದಾರೆ. ಹೀಗಾಗಿ ಚಿಂಚಲಿಯಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಕಾಗವಾಡದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿರುವ ಶೇಡಬಾಳ ಪಪಂದಲ್ಲಿ ಬಿಜೆಪಿ 11 ಸ್ಥಾನ ಗೆದ್ದಿದ್ದು, ಕಾಂಗ್ರೆಸ್- 2, ಪಕ್ಷೇತರ- 2 ಮತ್ತು ಜೆಡಿಎಸ್- 1 ಸ್ಥಾನ ಗೆದ್ದುಕೊಂಡಿವೆ. ಐನಾಪುರ ಪಪಂನಲ್ಲಿ ಕಾಂಗ್ರೆಸ್ 13 ಸ್ಥಾನ ಗೆದ್ದು ಪ್ರಚಂಡ ವಿಜಯ ಸಾಧಿಸಿದ್ದಲ್ಲದೆ, ಸ್ಪಷ್ಟ ಬಹುಮತವನ್ನೂ ಗಳಿಸಿಕೊಂಡಿದೆ. ಬಿಜೆಪಿ ಕೇವಲ 6 ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟರು.

    ಚನಮ್ಮ ಕಿತ್ತೂರು ನಾಡು ಬಿಜೆಪಿ ತೆಕ್ಕೆಗೆ?

    ಎಂ.ಕೆ.ಹುಬ್ಬಳ್ಳಿ ಪಪಂನಲ್ಲಿ 9 ಪಕ್ಷೇತರರು ಗೆದ್ದಿದ್ದು, ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಿತ್ತೂರು ಪಂಪಂನಲ್ಲಿ ಬಿಜೆಪಿಗೆ 9 ಸ್ಥಾನ, ಕಾಂಗ್ರೆಸ್ 5 ಸ್ಥಾನ ಹಾಗೂ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

    ತಾಯಿ-ಮಗನಿಗೆ ವಿಜಯ

    ಅಥಣಿ ಪುರಸಭೆಯ ಚುನಾವಣೆಗೆ ವಾರ್ಡ್ ನಂ- 16ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸದಾಶಿವ ಬುಟಾಳೆ ಹಾಗೂ ವಾರ್ಡ್ ನಂ- 17ರಲ್ಲಿ ಸ್ಪರ್ಧಿಸಿದ್ದ ಆತನ ತಾಯಿ ಶಿವಲೀಲಾ ಸದಾಶಿವ ಬುಟಾಳೆ ವಿಜಯದ ಬಾವುಟ ಹಾರಿಸಿದ್ದಾರೆ.

    ಗಂಡ-ಹೆಂಡತಿಗೆ ಜಯ

    ಅಥಣಿ ಪುರಸಭೆಯ ವಾರ್ಡ್-11ರಲ್ಲಿ ರಾವಸಾಹೇಬ ಐಹೊಳೆ ಹಾಗೂ ಆತನ ಪತ್ನಿ ವಾರ್ಡ್-25ರಲ್ಲಿ ಸ್ಪರ್ಧಿಸಿದ ವಿದ್ಯಾ ರಾವಸಾಹೇಬ ಐಹೊಳೆ ಗೆದ್ದಿದ್ದಾರೆ.

    ಉಗಾರದಲ್ಲಿ 2 ಮತಗಳ ಅಂತರದಿಂದ ಗೆದ್ದ ಪಕ್ಷೇತರ!

    ಉಗಾರ ಪುರಸಭೆಯಲ್ಲಿ ಕೇವಲ 1 ಮತದ ಅಂತರದಿಂದ ಗೆದ್ದಿರುವ ಪಕ್ಷೇತರ ಅಭ್ಯರ್ಥಿಸುಜಯ ಪರಾಕಟೆ, ಸಮೀಪದ ಸ್ಪರ್ಧಿಯನ್ನು ಸೋಲಿಸಿದ್ದಾರೆ.

    ಪಕ್ಷೇತರರಿಗೆ ಡಿಮ್ಯಾಂಡ್

    ಸಂಖ್ಯಾಬಲ ಕಡಿಮೆಯಿರುವ ಕಡೆಗಳಲ್ಲಿ ಪಕ್ಷೇತರ ಸದಸ್ಯರಿಗೆ ಏಕಾಏಕಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಪಕ್ಷೇತರರ ಅದೃಷ್ಟ ಖುಲಾಯಿಸಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪುರಸಭೆಯಲ್ಲಿ 23 ಸ್ಥಾನಗಳಲ್ಲಿ ಬಿಜೆಪಿ 10 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಬ್ಬರು ಪಕ್ಷೇತರು ಗೆದ್ದಿರುವುದರಿಂದ ಪಕ್ಷೇತರರೇ ಅಲ್ಲಿ ನಿರ್ಣಾಯಕರಾಗಲಿದ್ದಾರೆ.

    | ರಾಯಣ್ಣ ಆರ್.ಸಿ. ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts