More

    ಜಿಗಳೂರು ಕೆರೆ ಕಾಮಗಾರಿ ಶೀಘ್ರ ಮುಗಿಸಿ

    ಗಜೇಂದ್ರಗಡ: ಹಲವಾರು ವರ್ಷಗಳಿಂದ ಕುಂಟುತ್ತ ಸಾಗಿರುವ ತಾಲೂಕಿನ ಜಿಗಳೂರ ಗ್ರಾಮದ ಕೆರೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಅಧಿಕಾರಿಗಳಿಗೆ ಸೂಚಿಸಿದರು.

    ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ 115 ಕೋಟಿ ರೂ. ಅನುದಾನದಲ್ಲಿ ಮಲಪ್ರಭಾ ನದಿ ಬಲದಂಡೆ ಕಾಲುವೆಯ ಜಿಗಳೂರ ಕೆರೆ ಕಾಮಗಾರಿ ಮತ್ತು ನೀರು ಶುದ್ಧೀಕರಣ ಘಟಕವನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.

    ಕುಡಿಯಲು ನೀರಿಲ್ಲದೆ ಗಜೇಂದ್ರಗಡ ಮತ್ತು ನರೇಗಲ್ ಪಟ್ಟಣದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಮಲಪ್ರಭಾ ನದಿ ನೀರು ಶಾಶ್ವತ ಪೂರೈಸಲು ಕಾಮಗಾರಿಗೆ 2012ರಲ್ಲಿ ಚಾಲನೆ ನೀಡಲಾಗಿತ್ತು. ಅವಧಿ ಮುಗಿದು ಹಲವು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರೇ ಪತ್ತೆ ಇಲ್ಲ. ದಿನಗೂಲಿ ಕೆಲಸಕ್ಕೆ ಆಗಮಿಸಿದ ಜಿಗಳೂರ ಸೇರಿ ಸುತ್ತಲಿನ ಗ್ರಾಮಸ್ಥರಿಗೆ ಹಲವು ತಿಂಗಳ ವೇತನ ನೀಡಿಲ್ಲ, ಬಂಕ್ ಮಾಲೀಕರಿಗೆ ಡೀಸೆಲ್, ಆಯಿಲ್ ಬಿಲ್ ಬಾಕಿ ಇದೆ. ವಾಹನಗಳ ಬಾಡಿಗೆ ಹಣ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಸಹಕಾರ ಹಾಗೂ ಸರ್ಕಾರದಿಂದ ಬೇಕಾದ ಅನುದಾನ ತರಲಾಗುವುದು ಎಂದು ತಿಳಿಸಿದರು.

    ಕ್ಷೇತ್ರದಲ್ಲಿ ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲ. ಪರಿಣಾಮ 3 ಪಟ್ಟಣ ಸೇರಿ ಕೆಲವು ಗ್ರಾಮಗಳಿಗೆ ಜಿಗಳೂರು ಕೆರೆ ಕುಡಿಯುವ ನೀರಿನ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕರ ನೀರಿನ ದಾಹ ನೀಗಿಸಲು ಮುಂದಾಗಬೇಕು. ನಿಷ್ಕಾಳಜಿ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲಾ ಯೋಜನಾ ನಿರ್ದೇಶಕ ಎನ್. ರುದ್ರೇಶ ಮಾತನಾಡಿ, ರೋಣ, ಗಜೇಂದ್ರಗಡ ಹಾಗೂ ನರೇಗಲ್ ಸೇರಿ ಕೆಲವು ಗ್ರಾಮಗಳಿಗೆ ತ್ವರಿತಗತಿಯಲ್ಲಿ ನೀರು ಪೂರೈಸಲು ಜಿಲ್ಲಾಡಳಿತದ ಕಾರ್ಯಾಲಯದಲ್ಲಿ ಈಗಾಗಲೇ ಕೆಲವು ಸಭೆಗಳಲ್ಲಿ ಶಾಸಕ ಕಳಕಪ್ಪ ಬಂಡಿ ರ್ಚಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹೆಸ್ಕಾಂ ನೀರು ಸರಬರಾಜು ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ನೀಡಬೇಕು. ಸ್ಥಳೀಯ ಅಧಿಕಾರಿಗಳಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.

    ವರ್ಷದಿಂದ ಕಾಮಗಾರಿ ಸ್ಥಗಿತ:

    46 ಕೊಟಿ ರೂ. ವೆಚ್ಚದ ಈ ಕಾಮಗಾರಿಗೆ 2012 ಜುಲೈ 8ರಂದು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆರಂಭದಲ್ಲಿ ತೀವ್ರಗತಿಯಲ್ಲಿ ಸಾಗಿದ ಕಾಮಗಾರಿ, 2013 ವಿಧಾನಸಭೆ ಚುನಾವಣೆ ಬಳಿಕ ವೇಗ ಕಳೆದುಕೊಂಡಿತು. ನಂತರ ರೋಣ ಪಟ್ಟಣಕ್ಕೂ ಯೋಜನೆ ವಿಸ್ತರಿಸಲು ನಿರ್ಧರಿಸಿ, ಕೆರೆ ಕಾಮಗಾರಿ ಹೊಸ ವಿನ್ಯಾಸ ರೂಪಿಸಿ ಹೆಚ್ಚುವರಿ 69 ಕೊಟಿ ರೂ. ಒದಗಿಸಿ ಪುನಃ ಚಾಲನೆ ನೀಡಲಾಯಿತು. ಈ ಪೈಕಿ ಶೇ. 20 ಹಣ ಸಂದಾಯವಾಗದ ಕಾರಣ ಕಾಮಗಾರಿ ಕಳೆದೊಂದು ವರ್ಷದಿಂದ ಆಮೆಗತಿಯಲ್ಲಿ ಸಾಗಿದೆ.

    ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಜಿಗಳೂರ ಕೆರೆಗೆ ನೀರು ಹರಿಸಿ ಶುದ್ಧೀಕರಿಸಿ ಪೈಪ್​ಲೈನ್ ಮೂಲಕ ರೋಣ, ಗಜೇಂದ್ರಗಡ, ನರೇಗಲ್ಲ, ಜಿಗಳೂರ, ಹೊಸಹಳ್ಳಿ, ಸೂಡಿ, ದಿಂಡೂರ, ರಾಜೂರ, ಬೂದಿಹಾಳ, ಜಕ್ಕಲಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಇದು. ಗಜೇಂದ್ರಗಡ ಸೇರಿ ವಿವಿಧೆಡೆ ಮೇಲ್ತೊಟ್ಟಿ, ನರೇಗಲ್ಲ ಬಳಿ ಜಲ ಸಂಗ್ರಹಾಗಾರ ನಿರ್ವಿುಸಲಾಗಿದೆ. ಶುದ್ಧೀಕರಣ ಘಟಕದ ಕಾಮಗಾರಿ, ಪೈಪಲೈನ್ ಜೋಡಣೆ ಕಾರ್ಯ ಮುಗಿದಿದೆ. ಕೆರೆ ಕಾಮಗಾರಿ, ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆ, ನಾಲೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ.

    ಹೊಳೆಆಲೂರು ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಸಿಪಿಐ ಸುನೀಲ ಸವದಿ, ಇಂಜಿನಿಯರ್ ವೀರನಗೌಡ ಜೂಕೂರು, ದೇವರಾಜ ದೇಸಾಯಿ, ಪುರಸಭೆ ಮುಖ್ಯಾಧಿಕಾರಿಗಳಾದ ಮಹಾಂತೇಶ ಬೀಳಗಿ, ಎಂ. ನೂರುಲ್ಲಾಖಾನ, ಹೆಸ್ಕಾಂ ಎಇಇ ವೀರೇಶ ರಾಜೂರ, ಭಾಸ್ಕರಸಾ ರಾಯಬಾಗಿ, ದತ್ತು ಬಾಕಳೆ, ಪರಶುರಾಮ ಚಿಲಝುರಿ, ಮುತ್ತಣ್ಣ ಲಿಂಗನಗೌಡರ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts