More

    ಜಾಲತಾಣಗಳಲ್ಲಿ ಮಾರಿಕಾಂಬಾ ದೇಗುಲದ ಅಧಿಕೃತ ಖಾತೆ

    ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದ ಹೆಸರು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನಕಲಿ ಖಾತೆಗಳಿಂದ ಜನಮಾನಸಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಅಧಿಕೃತ ಲೋಗೊ ಬಳಸಿ ಹೊಸ ಖಾತೆಗಳನ್ನು ಸೃಷ್ಟಿಸಿ ನೈಜ ಮಾಹಿತಿ ನೀಡಲು ಮುಂದಾಗಿದೆ.

    ಈಗಾಗಲೇ ಫೇಸ್​ಬುಕ್, ವಾಟ್ಸ್ ಆಪ್, ಟ್ವೀಟರ್, ಇನ್ಸಾ್ಟಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ 10ಕ್ಕೂ ಹೆಚ್ಚು ನಕಲಿ ಖಾತೆಗಳು ದೇವಾಲಯದ ಹೆಸರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಖಾತೆಗಳ ಅಡ್ಮಿನ್​ಗಳು ಯಾವ ಮಾಹಿತಿ ಹಾಕುತ್ತಾರೆ ಅದು ದೇವಾಲಯ ನೀಡಿದ ಮಾಹಿತಿ ಎಂದೇ ಜನಸಾಮಾನ್ಯರು ಭಾವಿಸುತ್ತಿದ್ದಾರೆ. ಇದರಿಂದ ದೇವಾಲಯದೆಡೆ ಭಕ್ತರಿಗೆ ಬೇರೆ ಭಾವನೆ ಬಂದು ಆಡಳಿತ ಮಂಡಳಿ ಧರ್ಮದರ್ಶಿಗಳು ಸ್ಪಷ್ಟೀಕರಣ ನೀಡುವ ಸಂದರ್ಭಗಳು ಸಾಕಷ್ಟಿದ್ದವು. ನಕಲಿ ಖಾತೆದಾರರ ಉಪಟಳದಿಂದ ಬೇಸತ್ತ ದೇವಾಲಯ ಪ್ರಮುಖರು ಸಾರ್ವಜನಿಕ ಪ್ರಕಟಣೆ ಕೂಡ ನೀಡಿದ್ದರು. ಆದರೆ, ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಇದರಿಂದ ದೇವಾಲಯದ ಹೆಸರು ಹಾಳಾಗುತ್ತಿರುವುದನ್ನು ಗಮನಿಸಿದ ಆಡಳಿತ ಮಂಡಳಿಯ ಪ್ರಮುಖರು ದೇವಾಲಯದ ಆಡಳಿತಾಧಿಕಾರಿ ಜಿಲ್ಲಾ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಹೊಸ ಲೋಗೊ ಸಿದ್ಧಪಡಿಸಿ ದೇವಾಲಯದ ಹೆಸರಿನಲ್ಲಿ ಅಧಿಕೃತ ಖಾತೆ ತೆರೆದಿದ್ದಾರೆ.

    ದೇವಾಲಯದ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗೂ ಈ ಲೋಗೊ ಬಳಸಲಾಗುತ್ತಿದ್ದು, ಇದರಿಂದ ನಕಲಿ ಖಾತೆಗಳ ತಪ್ಪು ಮಾಹಿತಿಗಳಿಗೆ ತಡೆ ಬಿದ್ದಂತಾಗಿದೆ ಎಂಬುದು ದೇವಾಲಯ ಪ್ರಮುಖರ ಅಭಿಪ್ರಾಯ.

    ವೆಬ್​ಸೈಟ್ ನವೀಕರಣ: ದೇವಾಲಯದ ವೆಬ್​ಸೈಟ್ ಕೂಡ ನವೀಕರಿಸಿ ಲೋಕಾರ್ಪಣೆ ಮಾಡಲಾಗಿದ್ದು, ದೇವಾಲಯದ ಇತಿಹಾಸ, ಪರಂಪರೆ, ಪೂಜಾ ಪದ್ಧತಿ, ಜಾತ್ರೆಯ ವಿಧಿವಿಧಾನಗಳ ಚಿತ್ರ, ದೃಶ್ಯಗಳ ಸಹಿತ ಮಾಹಿತಿ ನೀಡಲು ಕ್ರಮ ವಹಿಸಲಾಗಿದೆ. ಜತೆಗೆ ಪ್ರಸ್ತುತ ಆಡಳಿತ ಮಂಡಳಿಯ ಕೊನೆಯ ಜಾತ್ರೆ ಇದಾಗಿದ್ದು, ಅಧಿಕಾರವಧಿ ಪೂರ್ಣವಾಗುವ ಮುನ್ನ ದೇವಾಲಯದ ಅಭಿವೃದ್ಧಿಯ ನೀಲಿನಕ್ಷೆ ಬಿಡುಗಡೆಗೆ ಮುಂದಾಗಿದೆ. ಸುಮಾರು 200 ಕೋಟಿ ರೂಪಾಯಿ ಮೊತ್ತದ ಯೋಜನೆಯ ನೀಲಿನಕ್ಷೆಯನ್ನು ಮಾ. 5ರಂದು ಬೆಳಗ್ಗೆ ಜಾತ್ರಾ ಗದ್ದುಗೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

    ವ್ಯವಸ್ಥಿತ ಜಾತ್ರೆಗೆ ಸಿದ್ಧತೆ: ವರ್ಷದಿಂದ ವರ್ಷಕ್ಕೆ ಮಾರಿಜಾತ್ರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ವ್ಯವಸ್ಥಿತ ಜಾತ್ರೆಗೆ ಆಡಳಿತ ಮಂಡಳಿ ಸಜ್ಜಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ಹೇಳಿದರು. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ದೇವಿ ದರ್ಶನಕ್ಕೆ ಬರುವ ಭಕ್ತರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಬಿಸಿಲಿನಿಂದ ರಕ್ಷಣೆಗಾಗಿ ಸರತಿ ಸಾಲಿನುದ್ದಕ್ಕೂ ಚಪ್ಪರ, ಅಂಗವಿಕಲರು ಹಾಗೂ ವೃದ್ಧರಿಗೆ ಜಾತ್ರಾ ಚಪ್ಪರದ ಬಳಿಯಿಂದ ರ‍್ಯಾಂಪ್ ಮೂಲಕ ವ್ಹೀಲ್​ಚೇರ್ ಬಳಸಿ ದೇವಿಯ ದರ್ಶನ ವ್ಯವಸ್ಥೆ, ವಿವಿಧ ಸಮಿತಿಗಳ ರಚಿಸಿ ಆಯಾ ವಿಭಾಗದ ಜವಾಬ್ದಾರಿ ಹಂಚಿಕೆ, ಸ್ವಯಂ ಸೇವಕರ ನೇಮಕ, ಕಾರ್ಯ ಶೈಲಿಯ ತಿಳಿವಳಿಕೆ ನೀಡಲಾಗುತ್ತಿದೆ. ಚಪ್ಪರ ಕಟ್ಟುವ ಕಾರ್ಯ ಸಾಗಿದ್ದು, ಅಂಗಡಿಗಳ ಹರಾಜು ಪ್ರಾರಂಭಿಸಲಾಗುವುದು. ಪೊಲೀಸರು, ಸ್ವಯಂ ಸೇವಕರು, ಬಾಬುದಾರರು, ಸೇವಾಸಕ್ತರು ಸೇರಿ 3 ಸಾವಿರಕ್ಕೂ ಹೆಚ್ಚು ಜನರು ಜಾತ್ರೆಯ ಯಶಸ್ವಿಗೆ ಶ್ರಮಿಸಲಿದ್ದಾರೆ. ದೇವಾಲಯದಲ್ಲಿಯೇ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥಿತ ಗುಣಮಟ್ಟ, ಪಾರದರ್ಶಕತೆಗೆ ಆದ್ಯತೆ ನೀಡಿದ್ದು, ಪಾಕ ವ್ಯವಸ್ಥೆಯಲ್ಲಿ ಪ್ರವೀಣರಿಗೆ ಗುತ್ತಿಗೆ ನೀಡಲಾಗಿದೆ. ಊಟ ಹಾಗೂ ಪ್ರಸಾದ ವ್ಯವಸ್ಥೆಗೆ ಎಫ್​ಎಸ್​ಎಸ್​ಐಎ ಪ್ರಮಾಣೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts