More

    ಜಾನುವಾರುಗಳಿಗೂ ಕರೊನಾ ಮಾದರಿ ಹೆಮ್ಮಾರಿ

    ಶಿಗ್ಗಾಂವಿ: ಒಂದೆಡೆ ಸಾರ್ವಜನಿಕರು ಕರೊನಾ ಸೋಂಕಿನಿಂದ ಬಳಲಿ ಬೆಂಡಾಗುತ್ತಿದ್ದರೆ, ಮತ್ತೊಂದೆಡೆ ಜಾನುವಾರುಗಳು ಕೂಡ ಇದೇ ಮಾದರಿಯ ಸೋಂಕಿಗೆ ತುತ್ತಾಗುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

    ತಾಲೂಕಿನ ದನಕರುಗಳು ಲುಂಪಿ ಸ್ಕಿನ್ ಎನ್ನುವ ರೋಗದಿಂದ ಬಳಲುತ್ತಿವೆ. ಚೀನಾದಿಂದ ಬಂದ ಕರೊನಾ ಜನರನ್ನು ಕಾಡುತ್ತಿದ್ದರೆ ಲುಂಪಿ ಸ್ಕಿನ್ ಆಫ್ರಿಕಾದಿಂದ ಬಂದು ಜಾನುವಾರುಗಳನ್ನು ಕಾಡುತ್ತಿದೆ. ಸದ್ಯ ಈ ಸಾಂಕ್ರಾಮಿಕ ರೋಗ ತಾಲೂಕಿನಾದ್ಯಂತ ದನಕರುಗಳಿಗೂ ವ್ಯಾಪಿಸುತ್ತಿದೆ. ಈ ರೋಗಕ್ಕೂ ನಿರ್ದಿಷ್ಟ ಔಷಧ ಇಲ್ಲದ ಕಾರಣ ಕಾಯಿಲೆಗೆ ತುತ್ತಾಗುವ ದನಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಮಾತ್ರ ನೀಡಲಾಗುತ್ತಿದೆ.

    ತಾಲೂಕಿನ ಶಿಡ್ಲಾಪುರ, ಹುನಗುಂದ, ಮುಗಳಿಕಟ್ಟಿ, ಚಂದಾಪುರ, ಕಲಕಟ್ಟಿ, ಹುಲಿಕಟ್ಟಿ, ಮಲ್ಲನಾಯ್ಕನಕೊಪ್ಪ, ತಡಸ, ಅಡವಿ ಸೋಮಾಪುರ, ಮುತ್ತಳ್ಳಿ, ಕುನ್ನೂರ, ಶ್ಯಾಡಂಬಿ ಹಾಗೂ ಇತರೆ ಗ್ರಾಮಗಳಲ್ಲಿ ಈ ಕಾಯಿಲೆ ವ್ಯಾಪಕವಾಗಿ ಹರಡಿದೆ.

    ಒಂದೆಡೆ ಕರೊನಾ ಸಂಕಷ್ಟ, ಮತ್ತೊಂದೆಡೆ ಅತಿವೃಷ್ಟಿಯಿಂದ ಬೆಳೆ ಹಾನಿ. ಹೀಗಾಗಿ, ಆದಾಯವಿಲ್ಲದೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಹೀಗಿರುವಾಗಲೇ ಜಾನುವಾರುಗಳಿಗೆ ಕಾಯಿಲೆ ಶರವೇಗದಲ್ಲಿ ಹಬ್ಬುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಕಾಯಿಲೆಗೊಳಗಾದ ಜಾನುವಾರುಗಳು ತೀವ್ರ ಜ್ವರದಿಂದ ಬಳಲುತ್ತಿವೆ. ಮೇವು ತಿನ್ನುತ್ತಿಲ್ಲ, ಮೈಮೇಲೆ ಗುಳ್ಳೆಗಳು ಕಂಡು ಬರುತ್ತಿವೆ. ಕೆಲ ಜಾನುವಾರುಗಳಿಗೆ ಕಾಲು ಬಾವು ಬರುತ್ತಿದ್ದು ಮೇಲೆ ಎದ್ದೇಳಲೂ ಆಗುತ್ತಿಲ್ಲ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಹೈರಾಣಾಗುತ್ತಿವೆ.

    ತಾಲೂಕಿನ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮಂಜೂರಾದ 68 ಸಿಬ್ಬಂದಿ ಪೈಕಿ ಕೇವಲ 31 ಜನ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರೋಗ ಉಲ್ಬಣಗೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ರೈತರು.

    ಈ ಕಾಯಿಲೆಗೂ ಇಲ್ಲ ಲಸಿಕೆ: ಆಫ್ರಿಕಾ ದೇಶದಿಂದ ಬಂದ ಈ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ನೊಣಗಳಿಂದಾಗಿ ಈ ಕಾಯಿಲೆ ಬಹು ಬೇಗ ಹರಡುತ್ತದೆ. ಒಂದು ವೇಳೆ ಲಸಿಕೆ ಲಭ್ಯವಾದರೂ ಕಾಯಿಲೆ ಹತೋಟಿಗೆ ಬರಲು 40 ದಿನ ಬೇಕು. ಆರೋಗ್ಯವಾಗಿರುವ ಜಾನುವಾರುಗಳನ್ನು ಪ್ರತ್ಯೇಕವಾಗಿ ಇಡಬೇಕು. ದನದ ಕೊಟ್ಟಿಗೆಯಲ್ಲಿ ಹೊಗೆ ಹಾಕಿ ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಗುಳ್ಳೆಗಳಾಗಿ ಒಡೆದರೆ ಅದಕ್ಕೆ ಅರಿಶಿಣ, ಬೇವಿನ ಸೊಪ್ಪನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಹಚ್ಚಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕಾಯಿಲೆಗೆ ಒಳಗಾದ ಜಾನುವಾರುಗಳಿಗೆ ಕಡ್ಡಾಯವಾಗಿ ಐದು ದಿನ ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ನೀಡುವ ಮೂಲಕ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇದೊಂದು ವೈರಸ್ ಆಗಿರುವ ಪರಿಣಾಮ ಇಂಥದ್ದೇ ಚಿಕಿತ್ಸೆ ನೀಡಬೇಕೆಂದು ಯಾವುದೇ ನಿಖರವಾದ ಔಷಧ ಇಲ್ಲ ಎನ್ನುತ್ತಾರೆ ಶಿಗ್ಗಾಂವಿ ತಾಲೂಕು ಪಶು ವೈದ್ಯಾಧಿಕಾರಿ ಡಾ. ಆರ್.ವೈ. ಹೊಸಮನಿ.

    ನಮ್ಮ ಹೋರಿಗೆ ರೋಗ ಲಕ್ಷಣ ಕಂಡು ಬಂದ ತಕ್ಷಣ ಪಕ್ಕದ ಹೋತನಹಳ್ಳಿ ಪಶು ಆಸ್ಪತ್ರೆ ವೈದ್ಯರನ್ನು ಸಂರ್ಪಸಿದರೂ ಚಿಕಿತ್ಸೆಗಾಗಿ ಎರಡು ದಿನ ಕಾಯಬೇಕಾಯಿತು. ಈಗ ಒಂದರ ಬದಲಾಗಿ ಮೂರು ಜಾನುವಾರುಗಳಿಗೆ ರೋಗ ಹರಡಿದೆ. ಇಡೀ ಗ್ರಾಮ ರೋಗಕ್ಕೆ ತುತ್ತಾಗುವ ಮುನ್ನ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಜಾನುವಾರುಗಳೊಂದಿಗೆ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.

    | ಮಂಜಪ್ಪ ಗಡ್ಡೆ, ಹುಲಿಕಟ್ಟಿ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts