More

    ಜಾನಿ ಸಾವಿಗೆ ಕಂಬನಿ ಮಿಡಿದ ಪೊಲೀಸರು

    ಹಾವೇರಿ: ಕಳ್ಳತನ, ದರೋಡೆ, ಕೊಲೆ ಅಪರಾಧಿಗಳಿಗೆ ಜಾನಿ ಹೆಸರು ಕೇಳಿದರೆ ಎಲ್ಲಿಲ್ಲದ ಭಯ. ಖಾಕಿ ಪಡೆಗೆ ಈ ಜಾನಿ ಅಂದರೆ ಒಂದು ಆನೆ ಬಲವಿದ್ದಂತೆ…

    ಹೌದು! ಅಷ್ಟಕ್ಕೂ ಈ ಜಾನಿ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆಗಿರುವ ಶ್ವಾನದಳದಲ್ಲಿನ 9 ವರ್ಷದ ಶ್ವಾನ. ಕಳೆದ 7 ವರ್ಷಗಳಿಂದ ಜಾನಿ ಹಾವೇರಿ ಜಿಲ್ಲೆಯ ಶ್ವಾನದಳದ ಸದಸ್ಯನಾಗಿತ್ತು. ಆದರೆ, ಅನಾರೋಗ್ಯದ ಕಾರಣ ಶನಿವಾರ ಮೃತಪಟ್ಟಿದೆ. ಜಾನಿ ಸಾವಿಗೆ ಪೊಲೀಸರು ಕಂಬನಿ ಮಿಡಿದು, ಶಾಸ್ತ್ರೋಕ್ತವಾಗಿ ಅಂತಿಮ ವಿಧಿವಿಧಾನ ನಡೆಸಿದರು.

    2012 ಸೆಪ್ಟೆಂಬರ್ 10ರಂದು ಜನ್ಮತಾಳಿದ್ದ ಜಾನಿ, ಬೆಂಗಳೂರಿನ ಆಡುಗೋಡಿ ದಕ್ಷಿಣ ಸಿಎಆರ್ ಮೈದಾನದಲ್ಲಿ 6 ತಿಂಗಳು ವಿಧೇಯತೆ ತರಬೇತಿ ಮತ್ತು 6 ತಿಂಗಳು ವಾಸನೆ ಗ್ರಹಿಕೆ ತರಬೇತಿ ಸೇರಿ ಒಟ್ಟು ಒಂದು ವರ್ಷ ವಿಶೇಷ ತರಬೇತಿ ಪಡೆದಿತ್ತು. ಹಲವು ಪ್ರಮುಖ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಾನಿ ತನ್ನದೇ ಕೈಚಳಕ ತೋರಿಸಿ, ಅಧಿಕಾರಿಗಳಿಂದ ಸೈ ಎನ್ನಿಸಿಕೊಂಡಿತ್ತು. ಆದರೆ, 2016ರಲ್ಲಿ ಜಾನಿ ಯಕೃತ್ ಸಮಸ್ಯೆಯಿಂದ ಬಳಲುತ್ತಿತ್ತು. ಆಗ ಬೆಂಗಳೂರಿನ ಹೆಬ್ಬಾಳದ ಪಶು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೂ ಜಾನಿ ಗುಣವಾಗಿರಲಿಲ್ಲ. 3 ತಿಂಗಳ ಅವಧಿ ಕೊಟ್ಟು ಅಲ್ಲಿನ ವೈದ್ಯರು ಕಳುಹಿಸಿದ್ದರು. ನಂತರ ನಾಲ್ಕು ವರ್ಷಗಳ ಕಾಲ ಬೆಳಗ್ಗೆ ಒಂದು ಲೀಟರ್ ಹಾಲು, 200 ಗ್ರಾಂ ಗಂಜಿ, ಬೇಯಿಸಿದ ಮೊಟ್ಟೆ , 200 ಗ್ರಾಂ ಪೆಡಿಗ್ರಿ ಹಾಗೂ 2 ರೀತಿಯ ಶಕ್ತಿವರ್ಧಕ ಟಾನಿಕ್​ಗಳನ್ನು ಸೇವಿಸುತ್ತ ಬದುಕಿತ್ತು. ಸದಾ ಚಟುವಟಿಕೆಯಿಂದಿರುತ್ತಿದ್ದ ಜಾನಿ ಸಾವಿಗೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.

    ಜಾನಿಯನ್ನು ಸಮಾಧಿ ಮಾಡಿದ್ದ ಸ್ಥಳದಲ್ಲಿ ಅದರ ಜೊತೆಗಾರರಾಗಿದ್ದ ಜೂಲಿ, ರಾಣಿ, ಕನಕ ಎಂಬ ಶ್ವಾನಗಳು ಕೆಲಹೊತ್ತು ರೋದಿಸಿದ್ದು ನೋಡುಗರ ಕಣ್ಣಾಲೆಯಲ್ಲಿ ನೀರು ತರಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts