More

    ಜಲಾವೃತ ಮನೆಯಲ್ಲೇ ರಾತ್ರಿ ಕಳೆದ ವಯೋವೃದ್ಧೆ….

    ನರಗುಂದ: ಮನೆಯೊಳಗೆ ನುಗ್ಗುತ್ತಿದ್ದ ನೀರು, ಇಡೀ ಗ್ರಾಮವನ್ನೇ ಆಪೋಶನ ತೆಗೆದುಕೊಳ್ಳಲು ಹೊರಟ ಮಲಪ್ರಭೆ. ಇಂತಹ ಅಪಾಯದ ಸಂದರ್ಭದಲ್ಲೂ ವಯೋವೃದ್ಧೆಯೊಬ್ಬರು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೋಗುವುದಿಲ್ಲ ಎಂದು ರಾತ್ರಿ ಬೆಳಗಿನವರೆಗೂ ಹಠ ಹಿಡಿದು ಕುಳಿತಿದ್ದಳು……

    ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಜಾಡರ ಓಣಿಯ ಗಟ್ಟಿಗಿತ್ತಿ 85 ವರ್ಷದ ಶಿವನವ್ವ ವಾಲಿ…

    ವರ್ಷಪೂರ್ತಿ ದುಡಿದು ಕಟ್ಟಿಕೊಂಡ ಬದುಕನ್ನು ಪ್ರತಿ ವರ್ಷ ಬರುವ ಪ್ರವಾಹ ಕೊಚ್ಚಿಕೊಂಡು ಹೋಗುತ್ತದೆ. ಎಷ್ಟೊಂದು ವರ್ಷ ಇಂತಹದ್ದೇ ಪರಿಸ್ಥಿತಿ ಇದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಕಣ್ತೆರೆಯುವುದಿಲ್ಲ. ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿಲ್ಲ ಎಂದು ಮನನೊಂದ ವೃದ್ಧೆ, ಏನೇ ಆದರೂ ಮನೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದು, ಕಣ್ಣೀರಿಡುತ್ತ ಕುಳಿತಳು.

    ಸ್ಥಳಕ್ಕೆ ಅಧಿಕಾರಿಗಳ ದಂಡೇ ಧಾವಿಸಿತು. ಮನೆಬಾಗಿಲಿಗೆ ಬಂದ ಜಿ.ಪಂ. ಅಧ್ಯಕ್ಷರ ಕಾಲಿಗೆ ಬಿದ್ದು ಗೋಗರೆದಳು. ಇಡೀ ಗ್ರಾಮಸ್ಥರ ನರಕಯಾತನೆ ತಪ್ಪಬೇಕು ಎಂದಳು.

    2019ರಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ವೃದ್ಧೆ ಸೇರಿದಂತೆ ಗ್ರಾಮದ ಎಲ್ಲರ ಮನೆಗಳು ಮುಳುಗಡೆಯಾಗಿದ್ದವು. ಇದೀಗ ಮತ್ತೆ ಮನೆ ಬಿಟ್ಟು ತೆರಳುವ ಪರಿಸ್ಥಿತಿ ನಿರ್ವಣವಾಗಿದೆ. ಸೋಮವಾರ ರಾತ್ರಿ ಮನೆಯೊಳಗೆ ನೀರು ನುಗ್ಗಿದರೂ ವೃದ್ಧೆ ಒಬ್ಬಂಟಿಯಾಗಿ ಕಾಲ ಕಳೆದಿದ್ದಾಳೆ. ಅಸಹಾಯಕತೆಯಿಂದ ಮನನೊಂದಿದ್ದಾಳೆ. ಅಕ್ಕಪಕ್ಕದ ಮನೆಯವರು ತಮ್ಮ ಅಗತ್ಯ ಸರಂಜಾಮುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವುದನ್ನು ಕಂಡು ಈ ಅಜ್ಜಿಯ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಅಧಿಕಾರಿಗಳು ಶಾಶ್ವತ ಪರಿಹಾರ ಒದಗಿಸಿ ಕೊಡುವುದಾಗಿ ವಚನ ಕೊಟ್ಟರೆ ಮಾತ್ರ ತೆರಳುವುದಾಗಿ ಪಟ್ಟು ಹಿಡಿದಳು.

    ಜಿ.ಪಂ. ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಅವರನ್ನು ನೋಡಿದ ವೃದ್ಧೆ ಕಣ್ಣೀರಿಡುತ್ತಲೇ ಅವರ ಕಾಲಿಗೊರಗಿ, ಪದೇಪದೆ ಪ್ರವಾಹಕ್ಕೆ ತುತ್ತಾಗುವ ಈ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಗೋಗರೆದಳು. ಕೊನೆಗೆ ಪರಿಹಾರ ಒದಗಿಸುವ ಭರವಸೆ ನೀಡಿ ಜಿ.ಪಂ. ಅಧ್ಯಕ್ಷ ರಾಜುಗೌಡ ವೃದ್ಧೆಯ ಮನವೊಲಿಸುವಲ್ಲಿ ಯಶಸ್ವಿಯಾದರು.

    ಗ್ರಾಮದ ಯುವಕರು ವೃದ್ಧೆ ಶಿವನವ್ವ ವಾಲಿ ಅವರನ್ನು ಹೆಗಲ ಮೇಲೆ ಹೊತ್ತು ಕೊಣ್ಣೂರಿನ ಎಇಎಸ್ ಪ್ರೌಢ ಶಾಲೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ಕರೆ ತಂದರು.

    ‘ನನಗೆ ಹಿಂದೆ ಮುಂದೆ ಯಾರೂ ಇಲ್ಲ. ನಡೆಯುವುದಕ್ಕೂ ಬರುವುದಿಲ್ಲ. ನಾನು ಕಾಳಜಿ ಕೇಂದ್ರಕ್ಕೆ ಬಂದರೆ ನನಗೆ ಪ್ರತಿನಿತ್ಯ ಊಟ, ಊಪಚಾರ ಮಾಡುವವರು ಯಾರು? ನನ್ನನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ನಮ್ಮೆಲ್ಲರಿಗೂ ಆದಷ್ಟು ಬೇಗ ಶಾಶ್ವತ ಪರಿಹಾರ ಒದಗಿಸಿಕೊಡಿ ಎಂದು ಶಿವನವ್ವ ಒತ್ತಾಯಿಸಿದರು.

    ಬೂದಿಹಾಳ ಗ್ರಾಮಕ್ಕೂ ನೀರು: ಕೊಣ್ಣೂರು ಗ್ರಾಮದ ಬಸ್ ನಿಲ್ದಾಣದ ಬಳಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪೆಟ್ರೋಲ್ ಬಂಕ್, ವಾಸನದ ತುಳಸಿಗೇರೇಶ್ವರ ದೇವಸ್ಥಾನಕ್ಕೂ ಜಲ ದಿಗ್ಬಂಧನವಾಗಿದೆ. ಹಳೇ ಬೂದಿಹಾಳ ಗ್ರಾಮಕ್ಕೆ ಸಂಪೂರ್ಣ ನೀರು ನುಗ್ಗಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೊಣ್ಣೂರ ಭಾಗದ ಸುತ್ತಲಿನ ಜಮೀನುಗಳಲ್ಲಿ ರೈತರು ಬೆಳೆದಿದ್ದ ಪೇರಲ, ಕಬ್ಬು, ಬಾಳೆ, ಹೆಸರು, ಗೋವಿನಜೋಳ, ಹತ್ತಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿಯಲ್ಲಿ ರೈತರಿದ್ದಾರೆ.

    ವಿಷ ಜಂತುಗಳ ಲಗ್ಗೆ: ನಿರಂತರ ಮಳೆ ಹಾಗೂ ಮಲಪ್ರಭಾ ಪ್ರವಾಹದಿಂದಾಗಿ ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ನದಿ ನೀರಿನೊಂದಿಗೆ ಹರಿದು ಬರುತ್ತಿರುವ ವಿಷ ಜಂತುಗಳು ಆಹಾರ ಮತ್ತು ಆಶ್ರಯಕ್ಕಾಗಿ ಬೆಚ್ಚಗಿನ ಸಾರ್ವಜನಿಕ ಸ್ಥಳಗಳಿಗೆ ಧಾವಿಸುತ್ತಿದ್ದು, ಜನತೆ ಕಂಗಾಲಾಗಿದ್ದಾರೆ.

    ಕೊಣ್ಣೂರಿನ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸೋಮವಾರ ರಾತ್ರಿಯಿಂದಲೇ ಕಡಿತಗೊಂಡಿದೆ. ಕೊಣ್ಣೂರಿನ ಹೊರವಲಯದಲ್ಲಿ ಖಾಸಗಿ ವಾಹನಗಳ ಸಾಲು ಕಿಲೋ ಮೀಟರ್​ಗಟ್ಟಲೇ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts