More

    ಜಲಮೂಲಗಳಿಂದ ಗ್ರಾಮಗಳಿಗೆ ಕುಡಿವ ನೀರು ಪೂರೈಕೆಗೆ 91.25 ಕೋಟಿ ರೂ. ಯೋಜನೆ ಸಿದ್ಧ

    ಚಿಕ್ಕಬಳ್ಳಾಪುರ: ಶಾಶ್ವತ ಬರಪೀಡಿತ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯ ಕುಡಿಯುವ ನೀರಿನ ದಾಹ ನೀಗಿಸಲು ಹೊಸ ಯೋಜನೆ ಸಿದ್ಧವಾಗುತ್ತಿದೆ, ಗ್ರಾಮಗಳಿಗೆ ಸಮೀಪದ ಜಲಮೂಲಗಳಿಂದ ನೀರು ಪೂರೈಕೆಗೆ ಜೀವಜಲ್ ಯೋಜನೆ ಹಾಗೂ ಬಹುಗ್ರಾಮ ಆಧಾರಿತ ಕುಡಿಯುವ ನೀರಿನ ಯೋಜನೆಯಡಿ 91.25 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ.

    91.25 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆಯಲ್ಲಿ 4 ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಯದರ‌್ಲಾಹಳ್ಳಿ ಕೆರೆ ಮೂಲಕ ಮಂಡಿಕಲ್ ಮತ್ತು ಸುತ್ತಲಿನ 13 ಗ್ರಾಮಗಳಿಗೆ ನೀರು ಹರಿಸಲು 13 ಕೋಟಿ ರೂ., ಜಕ್ಕಲಮಡು ಜಲಾಶಯದಿಂದ ಮೈಲಪನಹಳ್ಳಿ ಸೇರಿ 4 ಗ್ರಾಮಗಳಿಗೆ 3.25 ಕೋಟಿ ರೂ., ಗುಡಿಬಂಡೆ ತಾಲೂಕಿನ ಭೈರಸಾಗರ ಜಲಾಶಯದಿಂದ ಹಂಪಸಂದ್ರ ಮತ್ತು 27 ಗ್ರಾಮಗಳಿಗೆ 30 ಕೋಟಿ ರೂ., ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮತ್ತು ಸುತ್ತಲಿನ 60 ಗ್ರಾಮಗಳಿಗೆ ನೀರು ಹರಿಸಲು 45 ಕೋಟಿ ರೂ., ವೆಚ್ಚದ ಯೋಜನೆ ರೂಪಿಸಲಾಗಿದೆ.

    ಅಂತರ್ಜಲಮಟ್ಟ ಕುಸಿತ ಮತ್ತು ಕೊಳವೆ ಬಾವಿಗಳ ವೈಲ್ಯ ಹೆಚ್ಚುತ್ತಿರುವುದರಿಂದ, ಖಾಸಗಿ ಟ್ಯಾಂಕರ್ ಮತ್ತು ಕೊಳವೆಬಾವಿ ಅವಲಂಬನೆ ತಪ್ಪಿಸುವ ಹಾಗೂ ನೀರಿನ ಹಾಹಾಕಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಜಲಾಶಯ ಮತ್ತು ಕೆರೆಗಳ ನೀರನ್ನು ಸಮಸ್ಯಾತ್ಮಕ ಗ್ರಾಮಗಳಿಗೆ ಪೂರೈಸಲಿದ್ದು ಇದಕ್ಕಾಗಿ ಅಭಿವೃದ್ಧಿ ಕೆಲಸ, ತಗುಲುವ ವೆಚ್ಚದ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆದುಕೊಳ್ಳಲಾಗಿದೆ.

    ಶಾಶ್ವತ ಪರಿಹಾರದ ನಿರೀಕ್ಷೆ: ಮಳೆಗಾಲದಲ್ಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ 168 ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಬಾಡಿಗೆ ಆಧಾರಿತ ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವೇ ಹೊರತು ಹಾಹಾಕಾರ ಸಮರ್ಪಕವಾಗಿ ಬಗೆಹರಿಯುತ್ತಿಲ್ಲ. ಇದರಿಂದ ಈ ಯೋಜನೆಯಲ್ಲಿ ಗ್ರಾಮಗಳಿಂದ ಪೈಪ್‌ಲೈನ್ ಅಳವಡಿಸಿ, ಕೆರೆಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದ್ದು ಶಾಶ್ವತ ಪರಿಹಾರದ ನಿರೀಕ್ಷೆ ಹೊಂದಲಾಗಿದೆ.

    ಗ್ರಾಮಗಳಿಗೆ ವಿಸ್ತರಣೆ: ಮಂಚೇನಹಳ್ಳಿಯ ದಂಡಿಗಾನಹಳ್ಳಿ ಕೆರೆ ಮತ್ತು ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆಯು ಸದಾ ಭರ್ತಿಯಾಗಿರುತ್ತದೆ. ಆದರೆ, ದೀಪದ ಕೆಳಗೆ ಸದಾ ಕತ್ತಲು ಎನ್ನುವಂತೆ ಸುತ್ತಲಿನ ಗ್ರಾಮಗಳು ನೀರಿನ ಸಮಸ್ಯೆಗೆ ತತ್ತರಿಸುತ್ತಿದ್ದು, ಸ್ಥಳೀಯ ಜಲಮೂಲಗಳ ಮೂಲಕ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ಹಾಗೆಯೇ ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲಮಡು ಜಲಾಶಯ, ಅಮಾನಿ ಭೈರಸಾಗರ ಕೆರೆಯಿಂದ ಗುಡಿಬಂಡೆ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದ್ದು ಈಗ ಗ್ರಾಮಗಳಿಗೆ ವಿಸ್ತರಿಸಲಾಗಿದೆ. ಜತೆಗೆ ದಂಡಿಗಾನಹಳ್ಳಿ, ಯದಾರ‌್ಲಹಳ್ಳಿ ಕೆರೆಗೆ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

    ಜಿಲ್ಲೆಯ ದಂಡಿಗಾನಹಳ್ಳಿ ಕೆರೆ, ಯದಾರ‌್ಲಹಳ್ಳಿ ಕೆರೆ, ಜಕ್ಕಲಮಡು ಜಲಾಶಯ ಮತ್ತು ಅಮಾನಿ ಭೈರಸಾಗರ ಕೆರೆಯಿಂದ ಆಯ್ದ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಗೆ ರೂಪಿಸಿದ್ದ ಯೋಜನೆ ಸಾಕಾರಗೊಂಡ ಬಳಿಕ ಸಮಸ್ಯೆ ಬಗೆಹರಿಯುತ್ತದೆ.
    ಡಾ ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts