More

    ಜರ್ಮನ್​ದಿಂದ ಕನ್ನಡಿಗನ ಸಂದೇಶ

    ಗದಗ: ಕರೊನಾ ವೈರಾಣು ತಡೆಗಟ್ಟಲು ಭಾರತದ ಸರ್ಕಾರ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಪ್ರತಿಯೊಬ್ಬ ಕನ್ನಡಿಗ ಕರೊನಾ ವೈರಸ್ ಹೆಮ್ಮಾರಿ ಹಿಮ್ಮೆಟ್ಟಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಜರ್ಮನ್ ದೇಶದ ಬರ್ಲಿನ್​ನಲ್ಲಿ ವಾಸವಿರುವ ಗದಗ ನಗರದ ಸಿದ್ದು ಎಂಬುವವರು ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿರುವ ವಿಡಿಯೋ ಹರಿಬಿಟ್ಟಿರುವ ಅವರು ಕರೊನಾ ಅತ್ಯಂತ ಅಪಾಯಕಾರಿ ವೈರಾಣು ಆಗಿದ್ದು, ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. 130 ಕೋಟಿ ಜನರು ಇರುವಂತಹ ಭಾರತದೊಳಗೆ ಕರೊನಾ ಪ್ರವೇಶ ಮಾಡಿರುವುದು ಆತಂಕ ತರುವಂತಹ ಸಂಗತಿಯಾಗಿದೆ. ಮಹಾಮಾರಿ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಲಾಕ್​ಡೌನ್ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ. ಲಾಕ್​ಡೌನ್​ಗೆ ಜನರು ಸಹಕರಿಸಬೇಕು. ಸರ್ಕಾರದ ನಿರ್ಣಯವನ್ನು ಚಾಚುತಪ್ಪದೆ ಪಾಲಿಸಬೇಕು. ಪ್ರತಿಬಂಧಕಾಜ್ಞೆ ಘೊಷಣೆ ಮಧ್ಯೆಯೂ ವಿನಾಕಾರಣ ಸಂಚರಿಸುವುದು, ಏನಾಗುತ್ತೆ ಎಂಬ ಹುಂಬ ಧೈರ್ಯ ಮಾಡಿದರೆ ಪರಿಣಾಮ ಅತ್ಯಂತ ಗಂಭೀರವಾಗಿರುತ್ತದೆ. ನೀವು, ನಿಮ್ಮ ಕುಟುಂಬ ಮತ್ತು ದೇಶದ ರಕ್ಷಣೆಗಾಗಿ 21 ದಿನಗಳ ಕಾಲ ಯಾರೂ ಹೊರಗೆ ಬರಬಾರದು ಎಂದು ಕೈಜೋಡಿಸಿ ಪ್ರಾರ್ಥಿಸುತ್ತೇನೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕಿದೆ. ಹೀಗಾಗಿ ಎಲ್ಲರೂ ಸಹಕಾರ ನೀಡಬೇಕು. ತರಕಾರಿ ತಿನ್ನದಿದ್ದರೆ ಯಾರೂ ಸಾಯಲ್ಲ. ಕರೊನಾ ವೈರಸ್ ಹಾವಳಿ ಮುಗಿದ ನಂತರ ತಿನ್ನುವುದು, ಸಂಭ್ರಮಿಸುವುದು ಇದ್ದೇ ಇದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

    ಜರ್ಮನ್ ದೇಶದಲ್ಲಿ 8 ಕೋಟಿ ಜನಸಂಖ್ಯೆ ಇದೆ. ಈ ದೇಶದಲ್ಲಿ ಈಗಾಗಲೇ 35 ಸಾವಿರ ಜನರಿಗೆ ಕರೊನಾ ಸೋಂಕು ಇದೆ. ಇದೇ ಕಾರಣಕ್ಕೆ ನಿತ್ಯ ಅನೇಕ ಸಾವುಗಳು ಸಂಭವಿಸತೊಡಗಿವೆ. ಆದರೂ ಸಹ ಇಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನು ಮುಂದುವರಿದಿದೆ. ಕಳೆದ 18-20 ದಿನಗಳಿಂದ ನಾವು ಚಿಕ್ಕ ರೂಂನಲ್ಲಿ ವಾಸವಿದ್ದೇವೆ. ಕರೊನಾ ತಡೆಗಟ್ಟಲು ಭಾರತ ಸರ್ಕಾರ ಬೇಗನೆ ಎಚ್ಚೆತ್ತುಕೊಂಡು ಲಾಕ್​ಡೌನ್ ಜಾರಿಗೊಳಿಸಿದೆ. ಕನ್ನಡಿಗರು ಸರ್ಕಾರದ ಆದೇಶ ಪಾಲಿಸಿ ದೇಶವನ್ನು ಉಳಿಸಿ ರಕ್ಷಿಸಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ವಗ್ರಾಮಕ್ಕೆ ಬರಲು ಹರಸಾಹಸ

    ಗದಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷೆ್ಮೕಶ್ವರ ತಾಲೂಕಿನ ಬಂಜಾರ ಸಮಾಜದ ಸುಮಾರು 50 ಕಾರ್ವಿುಕರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಾಕೋರು ರುಕ್ಮಿಣಿ ಕಾಲೇಜ್​ನಲ್ಲಿ ತಂಗಿದ್ದು, ಸ್ವಗ್ರಾಮಕ್ಕೆ ಬರಲು ಆಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ಉಳ್ಳಾಲದ ಸೋಮೇಶ್ವರ ದೇವಸ್ಥಾನದ ನವೀಕೃತ ಕಟ್ಟಡ ಕಾಮಗಾರಿಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು. ಕರೊನಾ ವೈರಸ್ ವ್ಯಾಪಿಸಿದ್ದರಿಂದ ಕೆಲಸ ಸ್ಥಗಿತಗೊಂಡಿದ್ದರಿಂದ ಬೈಂದೂರು, ಬಂಟ್ವಾಳ ಮತ್ತಿತರ ಕಡೆಗೆ ಕೆಲಸ ಮಾಡುತ್ತಿದ್ದ ಕಾರ್ವಿುರು ಟೆಂಪೋ ಬಾಡಿಗೆ ಪಡೆದು ಸ್ವಗ್ರಾಮದ ಕಡೆಗೆ ಬರಲು ಮುಂದಾಗಿದ್ದರು. ಆದರೆ, ಉಡುಪಿ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಆಸ್ಪದ ನೀಡಿಲ್ಲ. ಹೀಗಾಗಿ ಸದ್ಯ ನಾವೆಲ್ಲರೂ ಬ್ರಹ್ಮಾವರದ ರುಕ್ಮಿಣಿ ಕಾಲೇಜ್​ನಲ್ಲಿ ಇದ್ದೇವೆ ಎಂದು ಲಕ್ಷೆ್ಮೕಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಸುರೇಶ ಲಮಾಣಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾಡಳಿತ ಕಾಲೇಜ್​ನಲ್ಲಿ ತಂಗಲು ಅವಕಾಶ ನೀಡಿದೆ. ಆದರೆ, ಇಲ್ಲಿನ ಜನರು ನಮಗೆ ಇಲ್ಲಿರಬಾರದು ಎಂದು ಧಮ್ಕಿ ಹಾಕುತ್ತಿದ್ದಾರೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಸೋಮನಾಥ ಲಮಾಣಿ, ಸುನೀಲ ಲಮಾಣಿ, ಶಂಕು ಲಮಾಣಿ, ಧರ್ಮ ಲಮಾಣಿ, ಶಿವು ಲಮಾಣಿ, ನಾಗೇಶ ಲಮಾಣಿ, ಹನುಮಂತ ಲಮಾಣಿ, ಇತರರು ಪ್ರಶ್ನಿಸುತ್ತಿದ್ದಾರೆ.

    ಮಂಗಳೂರು ಸೇರಿ ವಿವಿಧೆಡೆ ತೆರಳಿರುವ ಜನರಿಗೆ ಸ್ಥಳೀಯ ಜಿಲ್ಲಾಡಳಿತ ವಸತಿ ವ್ಯವಸ್ಥೆ ಕಲ್ಪಿಸುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ದಿನಸಿ, ತರಕಾರಿ ಖರೀದಿಗೆ ಮುಗಿಬಿದ್ದ ಜನ

    ಶಿರೋಳ: ಗ್ರಾಮದಲ್ಲಿ ತಳ್ಳುವ ಗಾಡಿಯಲ್ಲಿ ಬಂದ ತರಕಾರಿ ಖರೀದಿಸಲು ಜನರು ಜಾತ್ರೆಗೆ ಬಂದಂತೆ ಜಮಾಯಿಸಿದ್ದರು. ಸರ್ಕಾರ ಯಾರೊಬ್ಬರು ವ್ಯಾಪಾರ-ವಹಿವಾಟು ನಡೆಸಬಾರದು. ಅಲ್ಲಲ್ಲಿ ಜನರು ಗುಂಪು ಗುಂಪಾಗಿ ಸೇರಬಾರದು. ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ತಾಕೀತು ಮಾಡುತ್ತಿದ್ದರೂ ಅಲ್ಲಲ್ಲಿ ಜನ ಸೇರುವುದು, ಮನೆಯಿಂದ ಹೊರಬರುವುದು ಕಂಡುಬರುತ್ತಿದೆ. ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಜನರಿಗೆ ಬುದ್ಧಿ ಬರುತ್ತಿಲ್ಲ. ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರೂ ಜನರು ಸಹಕರಿಸುತ್ತಿಲ್ಲ ಎಂದು ಪೊಲೀಸರು ಅಸಮಾಧಾನ ತೋಡಿಕೊಂಡರು.

    ಈ ವೇಳೆ ಮಾತನಾಡಿದ ಗ್ರಾಪಂ ಪಿಡಿಒ ಎಸ್.ಆರ್. ಕಡದಳ್ಳಿಮಠ, ಗ್ರಾಮದ ಜನತೆ ಲಾಕ್​ಡೌನ್​ಗೆ ಸಹಕರಿಸಿ ಮಾರಕ ರೋಗ ಕರೊನಾ ನಿಯಂತ್ರಿಸುವಲ್ಲಿ ಸಹಕರಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಹನುಮಂತ ಕಾಡಪ್ಪನವರ, ಹವಾಲ್ದಾರ್ ಎಂ.ಆರ್. ಹಿರೇಮಠ, ಎಸ್.ಎನ್. ಚಿಮ್ಮನಕಟ್ಟಿ, ಆರ್.ಜೆ. ರುದ್ರಾಕ್ಷಿ, ಗ್ರಾಪಂ ಸದಸ್ಯರಾದ ಬಸವರಾಜ ಹೂಗಾರ, ಮುತ್ತಣ್ಣ ಸುಳ್ಳದ, ಬಸವರಾಜ ಮೆಣಸಗಿ, ರಾಜು ರಡ್ಡಿ, ಗಣಪತಿ ಹಿರೇಮನಿ, ಇತರರಿದ್ದರು.

    ಸಾಮಾಜಿಕ ಅಂತರ ಕಾಯ್ದುಕೊಳ್ಳಿ

    ಮುಂಡರಗಿ: ಕರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ. ಭಯಭೀತರಾಗದೆ ತಮ್ಮ ಜವಾಬ್ದಾರಿ ಅರಿತು ರೋಗದ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗುಂಪುಗುಂಪಾಗಿ ಸೇರುವುದು ಸರಿಯಾದ ವ್ಯವಸ್ಥೆ ಅಲ್ಲ. ಸರ್ಕಾರ ಕೈಗೊಂಡಿರುವ ನಿರ್ಧಾರ ನಿರ್ಣಯಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಗೌರವ. ವೈದ್ಯರು, ಪೊಲೀಸರು, ದಾದಿಯರ ಕರ್ತವ್ಯವನ್ನು ನಾವೆಲ್ಲರೂ ಗೌರವಿಸಬೇಕು. ಪ್ರತಿಯೊಬ್ಬರೂ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು ಎಂದಿದ್ದಾರೆ.

    ಸಿಎಂ ಪರಿಹಾರ ನಿಧಿಗೆ ತಿಂಗಳ ಗೌರವಧನ ಅರ್ಪಣೆ

    ಲಕ್ಷ್ಮೇಶ್ವರ: ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ್ ಮತ್ತು ಜಿ.ಎಸ್. ಗಡ್ಡದೇವರಮಠ ಅವರು ತಮ್ಮ ಒಂದು ತಿಂಗಳ ಗೌರವ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ಎಪಿಎಂಸಿ ವರ್ತಕರ ಸಂಘದಿಂದ ಮಾಸ್ಕ್, ಸ್ಯಾನಿಟೈಸರ್ ಪೂರೈಸುವ ಮೂಲಕ ಉದಾರತೆ ಮೆರೆದಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶವೇ ಲಾಕ್​ಡೌನ್ ಆಗಿರುವುದರಿಂದ ತಮ್ಮ ಅಳಿಲು ಸೇವೆ ಎಂಬಂತೆ ಒಂದು ತಿಂಗಳ ಗೌರವಧನ ಮತ್ತು ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಕಲ್ಯಾಣ ಮಂಟಪದಿಂದ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಟ್ಟಣದಲ್ಲಿ ಕರೊನಾ ಕಾರಣದಿಂದ ತೊಂದರೆಗೊಳಗಾದ ಅಸಹಾಯಕ ಜನತೆ, ಪೊಲೀಸರು, ವೈದ್ಯರ ನೆರವಿಗೆ ಸ್ಪಂದಿಸಲು ಸದಾ ಸಿದ್ಧರಿದ್ದೇವೆ ಎಂದಿದ್ದಾರೆ.

    ಮಾಸ್ಕ್, ಸ್ಯಾನಿಟೈಸರ್ ಪೂರೈಕೆ: ಕರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹಗಲೂ ರಾತ್ರಿ ಸೇವೆಗೈಯುತ್ತಿರುವ ಆರೋಗ್ಯ, ಪುರಸಭೆ ಹಾಗೂ ಪೊಲೀಸ್ ಇಲಾಖೆಯವರಿಗೆ ಎಪಿಎಂಸಿ ವರ್ತಕರ ಸಂಘದಿಂದ ಮಾಸ್ಕ್, ಸ್ಯಾನಿಟೈಸರ್​ಗಳನ್ನು ಪೂರೈಸಲಾಗುವುದು ಎಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್ ತಿಳಿಸಿದ್ದಾರೆ. ಈ ವೇಳೆ ಕೆ.ಎಂ. ಮಹಾಂತಶೆಟ್ಟರ್, ಡಾ.ವೈ.ಎಫ್. ಹಂಜಿ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ವಡಕಣ್ಣವರ, ಬಸಣ್ಣ ಅಂಗಡಿ, ವಿಜಯಕುಮಾರ ಮಹಾಂತಶೆಟ್ಟರ್, ಎಸ್.ಕೆ. ಕಾಳಪ್ಪನವರ ಇತರರಿದ್ದರು.

    ಅನಿರ್ದಿಷ್ಟಾವಧಿವರೆಗೆ ಸ್ಥಗಿತ

    ಗದಗ: ಕರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗುತ್ತಿದ್ದ ಒಣಮೆಣಸಿನಕಾಯಿ ಇಟೆಂಡರ್, ಜಾನುವಾರು ಮಾರುಕಟ್ಟೆ, ಉಪಮಾರುಕಟ್ಟೆ ಪ್ರಾಂಗಣಗಳಾದ ಮುಳುಗುಂದ ಮತ್ತು ಹುಲಕೋಟಿಗಳಲ್ಲಿ ನಡೆಯುತ್ತಿದ್ದ ಸಂತೆ, ಹೂವಿನ ಮಾರುಕಟ್ಟೆಯನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗಿದೆ. ರೈತ ಬಾಂಧವರು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts