More

    ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಿ

    ಬೆಳಗಾವಿ: ಮಹಾತ್ಮರ ಜಯಂತಿ ಆಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಡಿಸಿ ಎಂ.ಜಿ.ಹಿರೇಮಠ ಸೂಚಿಸಿದ್ದಾರೆ.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇ 3 ರಂದು ಬಸವೇಶ್ವರ, ಮೇ 6ಕ್ಕೆ ಶಂಕರಾಚಾರ್ಯರು, ಮೇ 8ಕ್ಕೆ ಭಗೀರಥ ಹಾಗೂ ಮೇ 10ರಂದು ಹೇಮರಡ್ಡಿ ಮಲ್ಲಮ್ಮ ಜಯಂತಿ ಇದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

    ಮೇ 3 ಬಸವೇಶ್ವರ ಜಯಂತಿ ದಿನದಂದು ನಗರದ ಗೋವಾವೇಸ್‌ನಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಪೂಜೆ ನೆರವೇರಿಸಲಾಗುವುದು. ಸಂಜೆ 4 ಗಂಟೆಗೆ ಚನ್ನಮ್ಮ ವೃತ್ತದಿಂದ ಲಿಂಗರಾಜ ಕಾಲೇಜು ಮೈದಾನದವರೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಬಸವೇಶ್ವರ ಉದ್ಯಾನದಲ್ಲಿ ಮುಖ್ಯ ವೇದಿಕೆ ಕಾಯಕ್ರಮ ಜರುಗಲಿದ್ದು, ವಚನ ಗಾಯನ, ವಿದ್ವಾಂಸರಿಂದ ಉಪನ್ಯಾಸ ನಡೆಯಲಿದೆ. ಮೇ 6 ರಂದು ಶಂಕರಾಚಾರ್ಯರ ಜಯಂತಿ ಅಂಗವಾಗಿ ನಗರದಲ್ಲಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಶಂಕರಾಚಾರ್ಯರ ಜೀವನವನ್ನು ಸಾರುವ ರೂಪಕಗಳ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಗುವುದು. ಮುಖ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ತತ್ತ್ವ, ಸಿದ್ಧಾಂತ, ಜೀವನಗಾಥೆ ಸಂಬಂಧ ತಜ್ಞರಿಂದ ಉಪನ್ಯಾಸ ನೀಡಲಾಗುವುದು ಎಂದು ತಿಳಿಸಿದರು.

    ಮೇ 8 ರಂದು ಮಹರ್ಷಿ ಭಗೀರಥ ಜಯಂತಿ ದಿನ ಸಂಜೆ 5 ರಿಂದ 7:30ರ ವರೆಗೆ ನಗರದಲ್ಲಿ ಭಗೀರಥ ಮೆರವಣಿಗೆ ನಡೆಸಲಾಗುವುದು, ರೂಪಕಗಳು ಮೆರವಣಿಗೆ ಕಳೆಗಟ್ಟಲಿವೆ. ಕನ್ನಡ ಸಾಹಿತ್ಯ ಭವನದಲ್ಲಿ ಮುಖ್ಯ ವೇದಿಕೆಯ ಕಾರ್ಯಕ್ರಮ ನಡೆಯಲಿದ್ದು ಭಗೀರಥರ ಜೀವನ ಸಂದೇಶ, ಉಪನ್ಯಾಸ ನೀಡಲಾಗುವುದು ಎಂದರು.
    ಮೇ 10 ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಲಾಗುವುದು. ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮನ ಜೀವನದ ಕುರಿತು ಮಾತು, ಮಂಥನ, ಉಪನ್ಯಾಸ ಜರುಗಲಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಿಸಿಪಿ ರವೀಂದ್ರ ಗಡಾದ, ಮಲ್ಲೇಶ ಚೌಗಲೆ, ಮಹಾದೇವಿ ತಳವಾರ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts