More

    ಜನೌಷಧ ಕೇಂದ್ರ, ಸಂತೆ ಮಾರುಕಟ್ಟೆ ಜಲಾವೃತ

    ಬಾಳೆಹೊನ್ನೂರು: ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಆಶ್ಲೇಷ ಮಳೆ ಅಬ್ಬರ ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಸೋಮವಾರ ಧಾರಾಕಾರ ಮಳೆಯಾಗಿದ್ದರಿಂದ ರಾತ್ರಿ ವೇಳೆಗೆ ಬಾಳೆಹೊನ್ನೂರಿನ ಭದ್ರಾನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಪಟ್ಟಣದ ಎನ್.ಆರ್.ಪುರ ರಸ್ತೆಯಲ್ಲಿರುವ ಜನೌಷಧ ಕೇಂದ್ರದ ಒಳಭಾಗಕ್ಕೆ ನೀರು ನುಗ್ಗಿ ಜನೌಷಧ ಕೇಂದ್ರದ ಅರ್ಧಭಾಗ ಮುಳುಗಡೆಯಾಗಿದೆ. ಮೀನು ಮಾರ್ಕೆಟ್ ಸಮೀಪದ ಸಂತೆ ಮಾರುಕಟ್ಟೆ ಸಂಕೀರ್ಣವೂ ಅರ್ಧ ಭಾಗ ನೀರಿನಿಂದ ಆವೃತವಾಗಿತ್ತು. ತಗ್ಗು ಪ್ರದೇಶದ ಹಲವು ತೋಟ, ಗದ್ದೆಗಳು ನೀರಿನಿಂದ ಜಲಾವೃತವಾಗಿವೆ.

    ಮಳೆಗೆ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಶಾಂತಿನಗರದ ಶಾಂತಿ ಫೆರ್ನಾಂಡಿಸ್ ಎಂಬುವವರ ಮನೆ ಅರ್ಧಭಾಗ ಕುಸಿದಿದೆ. ಸ್ಥಳಕ್ಕೆ ಬಿ.ಕಣಬೂರು ಗ್ರಾಪಂ ಸದಸ್ಯ ರವಿಚಂದ್ರ, ಇಂಜಿನಿಯರ್ ಸುನೀಲ್​ಕುಮಾರ್, ಗ್ರಾಮಲೆಕ್ಕಿಗ ವಿನಯ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಟುಕೊಡಿಗೆಯ ನಾಗಪ್ಪ ಎಂಬುವವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ. ಮಳೆ ಸುರಿಯುತ್ತಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರಿಗೆ ಆಹುತಿಯಾಗಿವೆ. ಸ್ಥಳಕ್ಕೆ ಬಿ.ಕಣಬೂರು ಗ್ರಾಪಂ ಅಧ್ಯಕ್ಷೆ ಜಾನಕಿ, ಉಪಾಧ್ಯಕ್ಷ ಇಬ್ರಾಹಿಂ ಶಾಫಿ, ಪಿಡಿಒರಾಮಪ್ಪ, ಸದಸ್ಯ ಮಹೇಶ್ ಆಚಾರ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ

    ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಕೋಣೆಮನೆ ಎಂಬಲ್ಲಿ ಗದ್ದೆ ಬದಿಯಲ್ಲಿದ್ದ ಧರೆ ಕುಸಿದಿದೆ. ಮಳೆ ಮುಂದುವರಿದಲ್ಲಿ ಧರೆ ಕುಸಿದು ಗದ್ದೆ ಮೇಲೆ ಮಣ್ಣು ಬಂದು ನಾಟಿ ಮಾಡಿದ ಗದ್ದೆ ಮೇಲೆ ಬೀಳುವ ಆತಂಕ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts