More

    ಜನರ ಸಮಸ್ಯೆ ಬಗೆಹರಿಸಲು ಉತ್ತಮ ಅವಕಾಶ

    ಭಟ್ಕಳ: ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾಟಾಚಾರದ ಕಾರ್ಯಕ್ರಮವಲ್ಲ. ಬದಲಿಗೆ ಗ್ರಾಮೀಣ ಜನರ ಅಹವಾಲು ಕೇಳಿ ಸಮಸ್ಯೆಗಳನ್ನು ಬಗೆಹರಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್ ಎಂ.ಪಿ. ಹೇಳಿದರು.

    ತಾಲೂಕಿನ ಹಾಡವಳ್ಳಿಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಜಿಲ್ಲಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದೇನೆ. ನಗರದ ಐಬಿಯಿಂದ ಕಚೇರಿ ಹಾಗೂ ಕಚೇರಿಯಿಂದ ಐಬಿ ಹೊರತುಪಡಿಸಿ ಕಾರವಾರ ನಗರದ ಒಳಗಡೆ ಪ್ರವೇಶಿಸಿಲ್ಲ. ಅಲ್ಲದೆ, ಮೊದಲನೆಯದಾಗಿ ಜಿಲ್ಲಾಧಿಕಾರಿ ವೃತ್ತಿಯನ್ನು ಹಾಡವಳ್ಳಿ ಗ್ರಾಮದಿಂದ ಆರಂಭಿಸುತ್ತಿದ್ದೇನೆ. ಆದ್ದರಿಂದ ನನ್ನ ಜನ್ಮದುದ್ದಕ್ಕೂ ಹಾಡವಳ್ಳಿ ಗ್ರಾಮ ನನ್ನ ನೆನಪಿನಿಂದ ಮರೆಯಾಗುವುದಿಲ್ಲ ಎಂದರು.

    ಜಿಲ್ಲಾಡಳಿತ, ಕಂದಾಯ ಇಲಾಖೆ, ಅಧಿಕಾರಿ ವರ್ಗ ಜನರಿಂದ ತುಂಬಾ ದೂರದಲ್ಲಿದೆ ಎಂಬ ಮನೋಭಾವ ಜನಸಾಮಾನ್ಯರಲ್ಲಿದೆ. ಜಿಲ್ಲೆಯಲ್ಲಿ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯ ಪಡೆಯಲು ಜಿಲ್ಲಾ, ತಾಲೂಕು ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಒಬ್ಬ ವ್ಯಕ್ತಿ ಹಾಡವಳ್ಳಿಯಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರಲು ನೂರಾರು ರೂಪಾಯಿ ಖರ್ಚು ಮಾಡಿ, ನಾಲ್ಕು ಗಂಟೆ ಪ್ರಯಾಣಿಸಬೇಕು. ಖರ್ಚಿನ ಜತೆಗೆ ಅಂದಿನ ದುಡಿಮೆಯೂ ಹಾಳಾಗುತ್ತದೆ ಎಂದರು.

    ಇಡೀ ದಿನ ಗ್ರಾಮದಲ್ಲಿದ್ದು, ಜನರ ಸಮಸ್ಯೆ ಆಲಿಸಲಾಗುವುದು. ಜನನ, ಮರಣ, ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ನಾಗರಿಕರು ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಜತೆಗೆ ಮುಂಬರುವ ದಿನಗಳಲ್ಲಿ ಯಾವುದೇ ಅರ್ಜಿ ಹಾಕದೆ ತಂತ್ರಜ್ಞಾನದ ಮೂಲಕವೇ ಜನರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ದೊರೆಯುವ ಕಾರ್ಯಕ್ರಮವನ್ನು ಕಂದಾಯ ಇಲಾಖೆ ರೂಪಿಸುತ್ತಿದೆ. ಇದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದರು.

    3,486 ಜನ ಸಂಖ್ಯೆಯಿರುವ ಈ ಗ್ರಾಮದಲ್ಲಿ ಆಯೋಜಿಸಿರುವ ಗ್ರಾಮ ವಾಸ್ತವ್ಯದ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು, ಉಪವಿಭಾಗದ ಅಧಿಕಾರಿಗಳು ಅವರ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಸಲಿದ್ದಾರೆ. ಕಂದಾಯ ಇಲಾಖೆಯ ಎಲ್ಲ ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ಗ್ರಾಮಸ್ಥರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಉಪವಿಭಾಗಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ, ತಹಸೀಲ್ದಾರ್ ಎಸ್. ರವಿಚಂದ್ರ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts