More

    ಜನರ ಸಂಕಷ್ಟ ಅರಿತರೆ ನೈಜ ಸಾಹಿತ್ಯ ಸೃಷ್ಟಿ : ನಿವೃತ್ತ ಪ್ರೊ.ಚಂದ್ರಪ್ಪ ಅಭಿಮತ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ


    ಸಾಹಿತ್ಯ ಪಾಠ ಶಾಲೆಗಳಲ್ಲಿ ಕಲಿಯುವುದಲ್ಲ. ಜನರ ಕಷ್ಟಸುಖದಲ್ಲಿ ಭಾಗಿಯಾಗುವ ಗುಣ ಇದ್ದವರಲ್ಲಿ ನೈಜ್ಯ ಸಾಹಿತ್ಯ ಹುಟ್ಟುತ್ತದೆ ಎಂದು ನಿವೃತ್ತ ಪ್ರೊ.ಚಂದ್ರಪ್ಪ ಹೇಳಿದರು.
    ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು ಎಲ್ಲರನ್ನು ಒರೆಗಚ್ಚಿ ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಕೆಲಸವನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡುತ್ತಿವೆ. ಇಂತಹ ಕಾರ್ಯಗಳಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಬೇಕು ಎಂದರು.
    ಕಸಾಪ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಸಮ್ಮೇಳನದ ಯಶಸ್ವಿಗೆ ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಕನ್ನಡ ಪರ ಸಂಘಟನೆಗಳ ಸಹಕಾರ ಅಪಾರವಾಗಿದೆ ಎಂದರು.
    ಕನ್ನಡ ಪರ ಹೋರಾಟಗಾರ ಗುರುರಾಜ್, ಸಾಸಲು ಹೋಬಳಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಜನಪದ ಗಾಯಕ ವಾಸು ಇದ್ದರು.

    ಕೈಗಾರಿಕೆಗಳಿಂದಲೇ ಅಭಿವೃದ್ಧಿ ಅಸಾಧ್ಯ

    ಸರ್ಕಾರ ಕೈಗಾರಿಕೀಕರಣದ ಉದ್ದೇಶದಿಂದ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಇದರಿಂದ ದೊಡ್ಡಬಳ್ಳಾಪುರ ಅಭಿವೃದ್ಧಿ ಹೊಂದುವುದು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕವಾಗಿ ಚರ್ಚೆಗಳು ಆರಂಭವಾಗಬೇಕಿದೆ ಎಂದು ಪತ್ರಕರ್ತ ಕೆ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ದೊಡ್ಡಬಳ್ಳಾಪುರ ತಾಲೂಕು ಅಭಿವೃದ್ಧಿ ಮುನ್ನೋಟ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಶತಮಾನಗಳ ಇತಿಹಾಸ ಹೊಂದಿರುವ ದೊಡ್ಡಬಳ್ಳಾಪುರದ ನೇಕಾರಿಕೆ ಕುಟುಂಬಗಳು ಇನ್ನೂ ಕೂಲಿ ಮಾಡುತ್ತಿವೆ. ರಾಜಕೀಯ ಶಕ್ತಿ ಅದರದೇ ಪರದಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ರಾಜಕಾರಣದಿಂದ ದೊಡ್ಡಬಳ್ಳಾಪುರದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಸೂಕ್ಷ್ಮ ಅರಿವಿನೊಂದಿಗೆ ನಮ್ಮ ಊರನ್ನು ನಾವೇ ಅಭಿವೃದಿ ್ಧಮಾಡಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಗಂಭೀರ ಚರ್ಚೆ ನಡೆಯಬೇಕು. ಇಂತಹ ಸೂಕ್ಷ್ಮ ಪ್ರಜ್ಞೆಗಳನ್ನು ನೀಡುವ ಕಾರ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದರು. ಹಿರಿಯ ಪತ್ರಕರ್ತ ಘನಶ್ಯಾಮ್ ಮಾತನಾಡಿ, ಬೆಂಗಳೂರು ಬೆಳವಣಿಗೆಯ ಅಬ್ಬರಕ್ಕೆ ದೊಡ್ಡಬಳ್ಳಾಪುರ ಕರಗುತ್ತಿದೆ. ಇದಕ್ಕೆ ಪರಿಹಾರವೆಂದರೆ ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ತೊಡಕಾದ ಅಂಶಗಳು ಹಾಗೂ ಅಭಿವೃದ್ಧಿಗೆ ಬೇಕಾದ ಅಂಶಗಳ ಕುರಿತ ವಿಸ್ತಾರವಾದ ಪುಸ್ತಕ ನಿಮ್ಮ ಮುಂದಿದೆ ಎಂದರು. ನಿವೃತ್ತ ಉಪನ್ಯಾಸಕರಾದ ಕೆ.ಎಸ್. ಪ್ರಭಾ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎ.ನಂಜಪ್ಪ, ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಗ್ನಿ ವೆಂಕಟೇಶ್, ಸಿಪಿಐಎಂ ಮುಖಂಡ ಪಿ.ಎ.ವೆಂಕಟೇಶ್, ಕಸಾಪ ಕಸಬಾ ಘಟಕದ ಅಧ್ಯಕ್ಷ ದಾದಾಫಿರ್, ಗೌರವ ಕಾರ್ಯದರ್ಶಿ ಗಿರೀಶ್ ಎನ್.ಬರಗೂರು ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಜೈಕುಮಾರ್ ಹಾಗೂ ಇತರರು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.

    ಸಾಸಲು ಚಿನ್ನಮ್ಮನ ಪ್ರಚಾರ ಹೆಚ್ಚಲಿ

    ಸಾದ್ವಿಮಣಿ ಸಾಸಲು ಚಿನ್ನಮ್ಮ ಅವರ ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕುರಿತು ಅರಿವು ಮೂಡಿಸುವ ಜಾನಪದರ ಸಂಖ್ಯೆ ಹೆಚ್ಚಬೇಕು ಎಂದು ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ತಿಳಿಸಿದರು. ಸಮ್ಮೇಳನದಲ್ಲಿ ಸಾದ್ವಿಮಣಿ ಸಾಸಲು ಚಿನ್ನಮ್ಮ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. ಸಾದ್ವಿಮಣಿ ಸಾಸಲು ಚಿನ್ನಮ್ಮ ಮಗಳಾಗಿ, ಸೊಸೆಯಾಗಿ ಮಾನವನ ಜೀವನ ಕ್ರಮದಲ್ಲಿ ಬದುಕಿ ಇಂದಿಗೂ ಬಹುತೇಕ ಮಂದಿಗೆ ದೇವರಾಗಿ ಉಳಿದಿರುವುದು ಅವರ ಬದುಕಿನ ಸಾರ್ಥಕತೆಯಾಗಿದೆ. ಇಂತಹ ಸಾರ್ಥಕತೆ ಇಂದಿನ ಹೆಣ್ಣು ಮಕ್ಕಳ ಬದುಕಿಗೆ ದಾರಿದೀಪವಾಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ಮಾಧ್ಯಮಲ್ಲಿ ಓದಿಸುವುದು ಎಷ್ಟು ಮುಖ್ಯವೋ ಕನ್ನಡ ಭಾಷೆಯನ್ನು ಹೃದಯದಿಂದ ಪ್ರೀತಿಸುವ ಮನಸ್ಥಿತಿಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು. ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಚೈತ್ರಾ, ಲಾವಣ್ಯಾ ಕನ್ನಡ ನೆಲದ ಕುರಿತ ಭಾಷಣ ಮಾಡಿದರು. ಪ್ರಗತಿಪರ ರೈತ ಜಕ್ಕೇನಹಳ್ಳಿ ಶಿವಪ್ಪ, ಡಿವೈಎಸ್ಪಿ ಎ.ಪಿ.ನರಸಿಂಹಮೂರ್ತಿ, ಕಸಾಪ ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಫಿರ್, ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಮಂಗಳಗೌರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts