More

    ಜನರೇ ಇಲ್ಲದ ಜನಸಂಪರ್ಕ ಸಭೆ

    ನೂರು: ಪಟ್ಟಣದ ಸೆಸ್ಕ್ ಉಪ ವಿಭಾಗದ ಕಚೇರಿಯಲ್ಲಿ ಶುಕ್ರವಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಶಂಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಐದಾರು ರೈತರಿಗೆ ಮಾತ್ರ ಸೀಮೀತವಾಗಿತ್ತು.


    ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರಿಂದ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಸೆಸ್ಕ್ ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಆಯೋಜಿಸುತ್ತಿದ್ದು, ಕಚೇರಿ ಮುಂಭಾಗದಲ್ಲಿ ಶಾಮಿಯಾನ ಹಾಗೂ ಸಾರ್ವಜನಿಕರಿಗೆ ಅಗತ್ಯಕ್ಕೆ ತಕ್ಕಂತೆ ಕುರ್ಚಿಗಳನ್ನು ಹಾಕಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸಭೆಯ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಇಲ್ಲದ ಪರಿಣಾಮ ಐದಾರು ರೈತರು ಮಾತ್ರ ಭಾಗವಹಿಸಿದ್ದರು. ಇದರಿಂದ ಕಚೇರಿಯಲ್ಲಿ ನೌಕರರು ಕಾರ್ಯನಿರ್ವಹಿಸುವ ಇಕ್ಕಟ್ಟಾದ ಸ್ಥಳದಲ್ಲಿ ಸಭೆ ನಡೆಸಿದರು.


    ಸಭೆಯನ್ನು ಕೊಳ್ಳೇಗಾಲ ವಿಭಾಗದ ಇಇ ಅಧ್ಯಕ್ಷತೆಯಲ್ಲಿ ಏರ್ಪಡಿಸಲು ನಿರ್ಧರಿಸಲಾಗಿತ್ತು. ಆದರೆ ಅವರು ಸಭೆಗೆ ಗೈರು ಹಾಜರಾಗಿದ್ದರು. ನೂರಾರು ಸಾರ್ವಜನಿಕರು ಭಾಗವಹಿಸುವ ಇಂತಹ ಸಭೆಯಲ್ಲಿ ಐದಾರು ಜನರು ಮಾತ್ರ ಭಾಗವಹಿಸಿದ್ದು, ಇದೊಂದು ಕಾಟಾಚಾರದ ಸಭೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತು.


    ಸಭೆಯಲ್ಲಿ ವಡಕೆಹಳ್ಳದ ನಿವಾಸಿ ರಾಜು ಮಾತನಾಡಿ, ಗ್ರಾಮದ ಓವರ್‌ಹೆಡ್ ಟ್ಯಾಂಕ್ ಬಳಿಯಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಆಗಾಗ್ಗೆ ದುರಸ್ತಿಗೊಳ್ಳುತ್ತಿದೆ. ಇದರಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರೆ, ಗುಳ್ಯದ ಸಿದ್ದಪ್ಪ ಎಂಬವರು ಮಾತನಾಡಿ, ಕೆ.ವಿ.ಎನ್.ದೊಡ್ಡಿಯ ಟಿಸಿ ಆಗಾಗ್ಗೆ ಸುಟ್ಟು ಹೋಗುತ್ತಿದೆ. ಅದನ್ನು ಸರಿಪಡಿಸುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ರೈತರು ತೊಂದರೆ ಪಡುವಂತಾಗಿದೆ ಎಂದು ದೂರಿದರು.


    ಶಾಗ್ಯದ ಪ್ರಸಾದ್ ಎಂಬುವರು ಮಾತನಾಡಿ, ತಾಲೂಕು ವ್ಯಾಪ್ತಿಯ ಕೆಲವು ಕಡೆಗಳಲ್ಲಿ ನಿರಂತರ ಜ್ಯೋತಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ವಿದ್ಯುತ್ ಕಂಬ ಹಾಗೂ ಟಿಸಿಯ ಮೇಲೆ ಹಸಿರು ಬಳ್ಳಿಗಳು ಹಬ್ಬಿವೆ. ಅದನ್ನು ತೆರವುಗೊಳಿಸುವಲ್ಲಿ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಜತೆಗೆ ದುರಸ್ತಿಗೊಂಡ ಟಿಸಿಯನ್ನು ಬದಲಾಯಿಸುವುದು ಇಲಾಖೆಯ ಜವಾಬ್ದಾರಿ. ಆದರೆ ರೈತರು ವಂತಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಟಿಸಿಯನ್ನು ಟ್ರಾೃಕ್ಟರ್ ಮೂಲಕ ಕೊಂಡೊಯ್ಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


    ಈ ಬಗ್ಗೆ ಎಇಇ ಶಂಕರ್ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಸಭೆ ಮುಕ್ತಾಯಗೊಳಿಸಿದರು.
    ಸಭೆಯಲ್ಲಿ ಜೆಇ ರಂಗಸ್ವಾಮಿ ಹಾಗೂ ನೌಕರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts