More

    ಜನಪರ ಸಾಹಿತ್ಯ ಚಿಂತನೆಗೆ ಮನ್ನಣೆ ನೀಡಿ

    ಮೈಸೂರು: ಪುರಾಣ, ಶ್ಲೋಕ, ಮಹಾಕಾವ್ಯದಲ್ಲಿರುವ ಎಲ್ಲವೂ ಸತ್ಯ ಅಲ್ಲ ಎಂದು ಸಾಹಿತಿ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.
    ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗ.ನಾ.ಭಟ್ಟರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪುರಾತನ ಸಾಹಿತ್ಯದಲ್ಲಿ ಅನ್ಯಾಯಿಕ, ಅಸಂಪ್ರದಾಯಿಕ, ಅವೈಜ್ಞಾನಿಕ ಸಂಗತಿಗಳನ್ನು ಕೈಬಿಡಬೇಕು. ಇಂತಹ ಸಂಗತಿಗಳಿಗೆ ಈಗಲೂ ಅಂಟಿಕೊಳ್ಳಬಾರದು. ಅದರಿಂದ ಹೊರಬರಬೇಕು. ಸಮಾಜಪರ, ಜನಪರ ಸಾಹಿತ್ಯ ಚಿಂತನೆಗೆ ಮನ್ನಣೆ ನೀಡಬೇಕು. ಉತ್ತಮ ವಿಚಾರವನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದರು.
    ಜನವಿರೋಧಿ ಧೋರಣೆಯ ಸಾಹಿತ್ಯ ಚಿಂತನೆಯನ್ನು ಈಗಲೂ ಸಮರ್ಥನೆ ಮಾಡಿಕೊಳ್ಳುವುದು ಮತ್ತು ಅದರ ಕುರಿತು ಮಾತನಾಡುವುದು ಅನಗತ್ಯ. ಉತ್ತಮ ವಿಚಾರವನ್ನು ಸ್ವೀಕಾರ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಮಾಜವನ್ನು ಕಟ್ಟುವ ಆಶಯದ ಕೃತಿಯನ್ನು ಇಟ್ಟುಕೊಂಡು, ಒಡೆಯುವ ಕೃತಿಯನ್ನು ಹೊರಹಾಕಬೇಕು ಎಂದು ಮಾರ್ಮಿಕವಾಗಿ ಹೇಳಿದರು.
    ಇದು ಸ್ತ್ರೀ-ಪುರುಷರ ಸಮಾನತೆಯ ಕಾಲಘಟ್ಟ. ಇಲ್ಲಿ ಯಾರೂ ಹೆಚ್ಚಲ್ಲ ಮತ್ತು ಯಾರೂ ಕಡಿಮೆಯೂ ಅಲ್ಲ. ಇದಕ್ಕೆ ವಿರುದ್ಧವಾದ ಸಾಹಿತ್ಯ ಅಪ್ರಸ್ತುತ. ಅದಕ್ಕೆ ಒತ್ತು ನೀಡಬಾರದು. ಹಿಂದು ಧರ್ಮದಲ್ಲಿರುವ ಮಹಿಳಾ ವಿರೋಧ ಅಂಶಗಳನ್ನು ಡಾ.ಅಂಬೇಡ್ಕರ್ ಅವರು ಕಟುವಾಗಿ ಟೀಕಿಸಿ, ಪಟ್ಟಿ ಮಾಡಿದ್ದಾರೆ. ಇದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ಸ್ತ್ರೀವಾದಕ್ಕೆ ವಿರುದ್ಧವಾದ ಅಂಶಗಳನ್ನು ಈಗಲೂ ಪಾಲನೆ ಮಾಡುವುದು ಅಸಮಂಜಸ. ಅದನ್ನು ಮನ-ಮನಸ್ಸಿನಿಂದ ಹೊರಹಾಕಬೇಕು ಎಂದರು.
    ಪುರಾಣಕ್ಕೆ ಸಂಬಂಧಿಸಿದ ಕೃತಿಗಳು ವಾಸ್ತವಿಕ ಚರಿತ್ರೆ ತೆಗೆಯುವ ಕೌಶಲ ಸಿದ್ಧಿಸಿಕೊಂಡಿರಬೇಕು. ಇಲ್ಲವಾದರೆ, ಅಂತಹ ಕೃತಿಯಿಂದ ಏನೂ ಪ್ರಯೋಜನ ಅಥವಾ ಉಪಯೋಗವಾಗಲ್ಲ. ಇದು ಮಜ್ಜಿಗೆಯನ್ನು ಕಡೆದು ಬೆಣ್ಣೆಯನ್ನು ಹೊರ ತೆಗೆದಂತೆ ಇರಬೇಕು. ಪುರಾಣದಲ್ಲಿರುವ ನ್ಯಾಯ ಕಾನೂನು ಆಗಲ್ಲ, ಕಾನೂನು ಕೂಡ ನ್ಯಾಯವಾಗಲ್ಲ. ಅಂತೆಯೆ, ಧರ್ಮವೂ ಸತ್ಯವಾಗಲ್ಲ, ಸತ್ಯವೂ ಧರ್ಮ ಎನಿಸಿಕೊಳ್ಳಲ್ಲ ಎಂದರು.
    ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸಂವಹನ ಸಲಹೆಗಾರ ಎನ್.ರವಿಶಂಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಕಬ್ಬಿನಾಲೆ ವಸಂತಭಾರದ್ವಾಜ್, ರಂಗಕರ್ಮಿ ಮಂಡ್ಯ ರಮೇಶ್, ಲೇಖಕ ಗ.ನಾ.ಭಟ್ಟ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts