More

    ಜನಪರ ಕಾಳಜಿಯೇ ಪ್ರಧಾನಿ ಮೋದಿ ಉಸಿರು: ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥವಾದ ಆಡಳಿತ ಮತ್ತು ಸೌಹಾರ್ದಯುತ ನಡವಳಿಕೆಯಿಂದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ. ಅಭಿವೃದ್ಧಿ ಮತ್ತು ಜನಪರ ಕಾಳಜಿ ಪ್ರಧಾನಿ ಉಸಿರಾಗಿವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಭಾನುವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜತೆಗೆ ಮೋದಿ ಅವರ 91ನೇ ‘ಮನ್ ಕಿ ಬಾತ್’ ಕಾರ್ಯಕ್ರಮ ಆಲಿಸಿದ ನಂತರ ಮಾತನಾಡಿ, ಪ್ರಧಾನಿ ಮೋದಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಾದರಿ. ಅವರ ರಾಜನೀತಿ, ಸಂಘಟನಾ ಚತುರತೆ, ಚಾಣಕ್ಯನ ಆಡಳಿತ ಶೈಲಿ, ಸ್ವಾಭಿಮಾನದ ಹೆಜ್ಜೆಗಳು ನಮಗೆ ಸದಾ ಸ್ಫೂರ್ತಿ ಆಗಬೇಕು. ಅವರು ದೇಶದ ಸಮಗ್ರತೆಯ ವಿಚಾರ ಬಂದಾಗ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅವರ ಮೊದಲ ಆದ್ಯತೆ ರಾಷ್ಟ್ರಹಿತ ಅಷ್ಟೇ ಎಂದರು.
    ಸಣ್ಣ ಸಣ್ಣ ಕಾರ್ಯಕರ್ತ ಕೂಡ ಪಕ್ಷದ ಆಸ್ತಿ. ಹಿಂದಿನ ತಲೆಮಾರಿನ ಹಿರಿಯರು ಪಕ್ಷ ಇಂದು ಇಷ್ಟೊಂದು ಎತ್ತರಕ್ಕೇರಲು ಕಾರಣರಾದವರು. ನಾವು ಈ ಎರಡೂ ಗುಂಪುಗಳನ್ನು ಯಾವ ಕಾರಣಕ್ಕೂ ಉಪೇಕ್ಷೆ ಮಾಡಬಾರದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಮಾಡಬೇಕು. ಸಂಘಟನೆಯ ಶಕ್ತಿಯೇ ನಮಗೆ ಸದಾ ಭೀಮಬಲ ಎಂದು ಹೇಳಿದರು.
    ಭಾರತ ತನ್ನ ಅಖಂಡತೆ ಮತ್ತು ಏಕತೆಯ ದೃಷ್ಟಿಯಿಂದ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ರಾಷ್ಟ್ರೀಯ ವಿಚಾರಧಾರೆಗಳಿಗೆ ಹೆಚ್ಚಿನ ಒತ್ತು ನೀಡಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೇ ಆದಂತಹ ಸ್ಥಾನ ಉಳಿಸಿಕೊಂಡಿದೆ. ನಾವೂ ಪ್ರತಿ ವಾರ್ಡ್‌ಗಳು ನಮ್ಮದಾಗುವಂತೆ ಶ್ರಮಪಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರವಾದ ಯೋಜನೆ ಮತ್ತು ಸವಲತ್ತುಗಳನ್ನು ಜನರಿಗೆ ತಲುಪಿಸಬೇಕು ಎಂದರು.
    ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ನಿಂಬೆಗೊಂದಿ ಸಿದ್ದಲಿಂಗಪ್ಪ, ವಸಂತ್ ಗೌಡ, ಕೆ.ಹಾಲಪ್ಪ, ಡಾ. ಬಿ.ಡಿ.ಭೂಕಾಂತ್, ಪುರಸಭಾ ಅಧ್ಯಕ್ಷೆ ರೇಖಾಬಾಯಿ, ಯುವ ಮೋರ್ಚಾ ನಗರಾಧ್ಯಕ್ಷ ಬೆಣ್ಣೆ ಪ್ರವೀಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts