More

    ‘ಛಾಯಾಪತಿ ಸಂಸ್ಕೃತಿ ಪುರಸ್ಕಾರ’ ಪ್ರದಾನ

    ಮೈಸೂರು: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕನ್ನಡ ಸಾಹಿತ್ಯ ಕಲಾಕೂಟ, ಹೊಯ್ಸಳ ಕನ್ನಡ ಸಂಘ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ‘ಪ್ರಕಾಶಕ ಟಿ.ಎಸ್. ಛಾಯಾಪತಿ ಸಂಸ್ಕೃತಿ ಪುರಸ್ಕಾರ’ ಹಾಗೂ ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ತ.ಸು. ಶಾಮರಾಯ ರಚನೆಯ ‘ಮೂರು ತಲೆಮಾರು’, ಡಾ.ನೀಲಗಿರಿ ತಳವಾರ ರಚನೆಯ ‘ನೂರಾರು ನುಡಿಗಟ್ಟುಗಳು’, ಟಿ.ಎಸ್. ಲಕ್ಷ್ಮೀದೇವಿ ರಚನೆಯ ‘ಸೃಜನಶೀಲರು’ ಹಾಗೂ ಆರ್. ದಿಲೀಪ್ ಕುಮಾರ್ ರಚನೆಯ ‘ಶಬ್ದ ಸೋಪಾನ’ ಕೃತಿ ಬಿಡುಗಡೆ ಮಾಡಿದ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಜನರು ತಾವು ಹೇಗೆ ಬದುಕುತ್ತಿದ್ದಾರೋ ಅದಕ್ಕೆ ತಕ್ಕಂತೆ ಫಿಲಾಸಫಿ ಕಟ್ಟಿಕೊಳ್ಳುತ್ತಾರೆಯೇ ಹೊರತು ಫಿಲಾಸಫಿಗೆ ತಕ್ಕಂತೆ ಬದುಕು ನಡೆಸುವುದಿಲ್ಲ, ಫಿಲಾಸಫಿ ತಕ್ಕಂತೆ ಬದುಕುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

    ಸಾಹಿತಿಗಳು ಸಾಮಾಜಿಕ ವಿದ್ಯಮಾನಗಳಿಗೆ ಸ್ಪಂದಿಸಬೇಕು, ಸತ್ಯಾನ್ವೇಷಣೆ ಮಾಡಬೇಕು, ಸಾಮಾಜಿಕ ಅನ್ಯಾಯಗಳನ್ನು ಪ್ರತಿಭಟಿಸಬೇಕು. ಹಿಂದಿನ ಸಾಹಿತಿಗಳ ಬದುಕು ಅವರ ಸಾಹಿತ್ಯಕ್ಕಿಂತ ಘನವಾಗಿತ್ತು. ಆದರೆ ಈಗ ಬದುಕೇ ಬೇರೆ ಬರಹವೇ ಬೇರೆ ಎಂಬಂತೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ತ.ಸು. ಶ್ಯಾಮರಾಯ, ತಳುಕಿನ ವೆಂಕಣ್ಣಯ್ಯ, ದ.ರಾ. ಬೇಂದ್ರೆ, ಕುವೆಂಪು, ಕಾರಂತರಂತಹ ತೂಕದ ವ್ಯಕ್ತಿತ್ವದ ಸಾಹಿತಿಗಳು ನಮ್ಮಲ್ಲಿ ಕಡಿಮೆ ಆಗುತ್ತಿದ್ದಾರೆ. ಅಂತಹವರನ್ನು ಓದಿದಷ್ಟು ನಮ್ಮ ಮನಶುದ್ಧಿ ಆಗುತ್ತದೆ ಎಂದರು.

    ಈ ಸಂದರ್ಭ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ‘ಪ್ರಕಾಶಕ ಟಿ.ಎಸ್. ಛಾಯಾಪತಿ ಸಂಸ್ಕೃತಿ ಪುರಸ್ಕಾರ’ ಪ್ರದಾನ ಮಾಡಲಾಯಿತು.

    ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ರಾಜಶೇಖರ್ ಮೆಡಿಕಲ್ ಫೌಂಡೇಷನ್ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಪ್ರಕಾಶಕಿ ಪ್ರತಿಭಾ ಛಾಯಾಪತಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts