More

    ಚುನಾವಣೆ ಘೋಷಣೆಗೂ ಮೊದಲೇ ರಾಜೀನಾಮೆ ನೀಡಲ್ಲ

    ಅರಸೀಕೆರೆ: ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಮಾ. 5ರಂದು ಸ್ವಾತಂತ್ರ್ಯಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಂಬಂಧ ಶಾಸಕ ಕೆ.ಎಂ.ಶಿವಲಿಂಗೇಗೌಡ ನಗರದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಮಂಗಳವಾರ ರಾತ್ರಿ ಸಭೆ ನಡೆಸಿದ್ದಾರೆ.

    ಈ ವೇಳೆ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ತಕ್ಷಣವೇ ನೀವು ಕಾಂಗ್ರೆಸ್ ಸೇರಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್‌ಗೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಮುಖಂಡರ ಜತೆ ಹೋಗಬಹುದು. ಆದರೆ ಪಕ್ಷದ ಬಾವುಟ ಹಿಡಿಯುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನಾತ್ಮಕ ಸಮಸ್ಯೆ ಎದುರಾಗಲಿದೆ. ನಿಮ್ಮ ಸಲಹೆ, ಸೂಚನೆ ಪಡೆಯುವ ಉದ್ದೇಶದಿಂದಲೇ ಫೋನ್ ಮೂಲಕ ಆಹ್ವಾನಿಸಿದ್ದು, ಅಪಾರ ಸಂಖ್ಯೆಯಲ್ಲಿ ನೀವು ಆಗಮಿಸಿದ್ದೀರಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳೋಣ. ಆನಂತರವೇ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎನ್ನುವ ಭಾವನೆ ನನ್ನದಾಗಿದೆ ಎಂದಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷರನ್ನು ಸಕಾರಣ ನೀಡದೆ ಬದಲಿಸಲಾಗಿದ್ದು ಶಾಸಕರನ್ನು ಕಡೆಗಣಿಸಿ ಸಭೆಯನ್ನೂ ಮಾಡಿರುವುದು ಅಕ್ಷಮ್ಯ ಎಂದು ಕೆಲ ಮುಖಂಡರು ಪಟ್ಟುಹಿಡಿದರು ಎನ್ನಲಾಗಿದೆ.

    ಅಂತಿಮವಾಗಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಕೆಎಂಸಿ ಆಡಿರುವ ಮಾತುಗಳ ವಿಡಿಯೋ ವೈರಲ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ.
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮಾ.5ರಂದು ಕಾಂಗ್ರೆಸ್ ಸೇರುವುದಾಗಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಹಿಂದಿನ ರಾತ್ರಿ ನಡೆದ ಸಭೆಯಲ್ಲಿ ಬೆಂಬಲಿಗರು ಬಿಜೆಪಿಗೆ ಸೇರುವುದು ಬೇಡ, ನಮ್ಮ ನಡೆ ಕಾಂಗ್ರೆಸ್ ಕಡೆ ಎಂಬುದಾಗಿ ಹೇಳಿರುವುದನ್ನು ಹೀಗೆ ಅರ್ಥೈಸಲಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ನೊಳಂಬ ಲಿಂಗಾಯತ ಸಂಘದ ಆಸ್ತಿಯನ್ನು ಆ ಸಮುದಾಯಕ್ಕೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಆತುರದ ನಿರ್ಧಾರದಿಂದಾಗಿ ಇಂತಹ ಬೆಳವಣಿಗೆಗಳು ನಡೆದಿದ್ದು ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.

    ಐತಿಹಾಸಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಂಬಂಧ ಮಾ.5ರಂದು ಗುತ್ತಿನಕೆರೆಯಲ್ಲಿ ಪಕ್ಷಾತೀತ ಹಾಗೂ ಜ್ಯಾತ್ಯತೀತವಾಗಿ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದ ಅವರು, ನಗರಸಭೆ ಮೀಸಲು ನಿಗದಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಅವಧಿ ಪೂರ್ಣಗೊಳ್ಳುವ ಸಮಯ ಬಂದರೂ ವಿವಾದ ಬಗೆಹರಿಯುತ್ತಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts