More

    ಚುನಾವಣಾ ವೆಚ್ಚ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ಅಭ್ಯರ್ಥಿಗಳಿಗೆ ಬುಧವಾರ ತರಬೇತಿ ನೀಡಲಾಯಿತು. ಅಭ್ಯರ್ಥಿಗಳು ೧೦ ಸಾವಿರ ಮೀರಿದ ವೆಚ್ಚವನ್ನು ಚೆಕ್ ಅಥವಾ ಆನ್‌ಲೈನ್ ಮೂಲಕ ಪಾವತಿ ಮಾಡುವಂತೆ ಚುನಾವಣಾ ವೆಚ್ಚ ವೀಕ್ಷಕರು ಅಭ್ಯರ್ಥಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ವೆಚ್ಚ ವೀಕ್ಷಕರಾದ ಪ್ರವೀಣ್ ಕುಮಾರ್ ಬಾಲಿ, ಬಂಡಾರು ಬಾಲು ಮಹೇಂದ್ರ ಹಾಗೂ ಚುನಾವಣಾ ವೆಚ್ಚ ನಿರ್ವಹಣಾ ನೋಡಲ್ ಅಧಿಕಾರಿ ವಸಂತ ಕುಮಾರ್ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ಅಭ್ಯರ್ಥಿಗಳು ಎ.ಬಿ. ಮತ್ತು ಸಿ ವಹಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಎ ವಹಿಯಲ್ಲಿ ಪ್ರತಿನಿತ್ಯದ ಖರ್ಚು, ಬಿ ವಹಿಯಲ್ಲಿ ನಗದು ವಹಿವಾಟು ಮತ್ತು ಸಿ ವಹಿಯಲ್ಲಿ ಬ್ಯಾಂಕ್ ವಹಿವಾಟಿನ ಬಗ್ಗೆ ನಮೂದಿಸಬೇಕು ಎಂದು ಸೂಚಿಸಲಾಯಿತು.

    ಪ್ರತಿನಿತ್ಯ ಖರ್ಚು ವೆಚ್ಚಗಳ ವಹಿವಾಟನ್ನು ನಮೂದಿಸಬೇಕು. ಒಟ್ಟು ಚುನಾವಣಾ ವೆಚ್ಚ ೯೫ ಲಕ್ಷ ರೂ.ಗಳಿಗೆ ಮೀರಬಾರದು. ಚುನಾವಣಾ ವೆಚ್ಚ ವೀಕ್ಷಕರು ಅಭ್ಯರ್ಥಿಗಳ ಚುನಾವಣಾ ವೆಚ್ಚ ಲೆಕ್ಕಪತ್ರಗಳನ್ನು ಏಪ್ರಿಲ್ ೧೫ ರಂದು ಮೊದಲನೇ ಲೆಕ್ಕ ತಪಾಸಣೆ, ೧೯ ರಂದು ಎರಡನೇ ಲೆಕ್ಕ ತಪಾಸಣೆ, ೨೪ ರಂದು ಮೂರನೇ ಲೆಕ್ಕ ತಪಾಸಣೆ ನಡೆಯಲಿದೆ ಎಂದು ಚುನಾವಣಾ ವೆಚ್ಚ ವೀಕ್ಷಕರು ತಿಳಿಸಿದರು.

    ತಪಾಸಣೆ ಸಮಯದಲ್ಲಿ ಎ.ಬಿ. ಮತ್ತು ಸಿ ವಹಿಗಳು ಬ್ಯಾಂಕ್ ಪಾಸ್‌ಬುಕ್ ದಾಖಲೆಗಳು ಮತ್ತು ಬಿಲ್‌ಗಳನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು. ತಪ್ಪಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ಸೆಕ್ಷೆನ್ ೧೦ರ ಪ್ರಕಾರ ಮೂರು ವರ್ಷ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಲಾಗುತ್ತದೆಯೆಂದು ತಿಳಿಸಿದರು.

    ವಾಹನಗಳ ಬಳಕೆಗೆ ಅಭ್ಯರ್ಥಿಗಳು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ತರಬೇತಿಯಲ್ಲಿ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯಾತೀತ) ಅಭ್ಯರ್ಥಿಗಳ ಪ್ರತಿನಿಧಿಗಳು ಸೇರಿದಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಪಕ್ಷೇತರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

    ಚಿತ್ರ ೧೧ ಕೆ.ಎಲ್.ಆರ್. ೦೧ : ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ವೆಚ್ಚ ವೀಕ್ಷಕರಿಂದ ತರಬೇತಿ.

    ಚುನಾವಣಾ ವೆಚ್ಚ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts