More

    ಚಿಲ್ಲರೆ ವ್ಯಾಪಾರಿ ಕ್ಷೇಮಾಭಿವೃದ್ಧಿ ಸಂಘ ರಚನೆಗೆ ನಿರ್ಧಾರ

    ದಾವಣಗೆರೆ: ನಗರದ ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ರಚಿಸಲು ನಿರ್ಧರಿಸಿದ್ದು, ಸಂಘದ ರೂಪುರೇಷೆಯನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಇಸ್ಮಾಯಿಲ್ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷಗಳಿಂದ ದಾವಣಗೆರೆಯಲ್ಲಿ ತರಕಾರಿ, ಸೊಪ್ಪು, ಹೂವು, ಹಣ್ಣು, ಬಟ್ಟೆ ಸೇರಿ ಗೃಹೋಪಯೋಗಿ ವಸ್ತುಗಳನ್ನು ಬೀದಿಬದಿಯಲ್ಲಿ ಸ್ಥಿರವಾಗಿ ಹಾಗೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂದರು.
    ನಾವೆಲ್ಲರೂ ಒಂದೆಡೆ ಸೇರಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಬೆಳೆಯುವ ಜತೆಗೆ ಪಾಲಿಕೆ ಸೇರಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ವ್ಯಾಪಾರಸ್ಥರಿಗೆ ಕೊಡಿಸಲಿಕ್ಕಾಗಿ ಈ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.
    ದಾವಣಗೆರೆಯಲ್ಲಿ ಸದ್ಯ 10,140 ಬೀದಿಬದಿ ವ್ಯಾಪಾರಿಗಳು ನೋಂದಣಿಯಾಗಿದ್ದು, ಈಗಾಗಲೇ ನಮ್ಮ ಸಂಘದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಉಳಿದ ಬೀದಿಬದಿಯ ಸ್ಥಿರ ಮತ್ತು ಸಂಚಾರಿ ವ್ಯಾಪಾರಸ್ಥರು ಸದಸ್ಯತ್ವ ಪಡೆಯಬೇಕು. ಸದಸ್ಯತ್ವ ಪಡೆಯಲಿಚ್ಚಿಸುವ ವ್ಯಾಪಾರಸ್ಥರು ಮಾಹಿತಿಗೆ ಮೊ: 9900402788 ಕರೆ ಮಾಡಬೇಕು ಎಂದು ತಿಳಿಸಿದರು.
    ಸಂಘದ ಗೌರವಾಧ್ಯೆಕ್ಷೆ ಕೆ.ಭಾರತಿ ಮಾತನಾಡಿ, ಮೊದಲು ಜಕಾತಿ ವಸೂಲಿ ಮಾಡಲು ಗುತ್ತಿಗೆ ಪಡೆದಿದ್ದವರು ದೌರ್ಜನ್ಯದಿಂದ 50, 100 ರೂ.ಗಳವರೆಗೆ ವಸೂಲಿ ಮಾಡುತ್ತಿದ್ದರು. ಅಲ್ಲದೇ ರಸೀದಿ ನೀಡುತ್ತಿರಲಿಲ್ಲ. ನಮ್ಮ ಹೋರಾಟದ ಫಲದಿಂದ ಈಗ ಜಕಾತಿ ಟೆಂಡರ್ ರದ್ದಾಗಿ, ಪಾಲಿಕೆಯಿಂದಲೇ ರಸೀದಿ ನೀಡಿ, ಪ್ರತಿ ವ್ಯಾಪಾರಿಯಿಂದ 20 ರೂ. ಪಡೆಯಲಾಗುತ್ತಿದೆ. ಇದೇ ಜಕಾತಿ ಪದ್ಧತಿ ಮುಂದುವರೆಸಬೇಕು. ವ್ಯಾಪಾರಸ್ಥರಲ್ಲದವರಿಗೆ ಗುರುತಿನ ಚೀಟಿ ನೀಡಬಾರದು ಎಂದರು.
    ಉಪಾಧ್ಯಕ್ಷ ಎಚ್.ಸಿ. ಮಲ್ಲಪ್ಪ ಮಾತನಾಡಿ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 10,000ದಿಂದ 5 ಲಕ್ಷ ರೂ.ಗಳವರೆಗೂ ಸಾಲ ಪಡೆಯಲು ಅವಕಾಶವಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಕೆಲ ಮಧ್ಯವರ್ತಿಗಳ ಮೂಲಕ ಸಾಲ ನೀಡಲಾಗುತ್ತಿದೆ. ಇದರಿಂದ ಅರ್ಹರಿಗೆ ಸಾಲ ದೊರೆಯುತ್ತಿಲ್ಲ. ಪಟ್ಟಣ ಸಮಿತಿ ಸದಸ್ಯರ ಗಮನಕ್ಕೆ ತಾರದೇ ಸಾಲ ನೀಡಲಾಗುತ್ತಿದೆ ಎಂದು ಆರೋಪಿಸಿದರು.
    ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ದುಗ್ಗಪ್ಪ, ಖಜಾಂಚಿ ತಿಪ್ಪೇಸ್ವಾಮಿ, ಹೊನ್ನಮ್ಮ, ಕೃಷ್ಣಮೂರ್ತಿ, ನಾಗಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts