More

    ಚಿತ್ರ ವೀಕ್ಷಣೆಗೆ ಬೆರಳೆಣಿಕೆಯಷ್ಟು ಜನ

    ಕೋಲಾರ: ಕರೊನಾ ಲಾಕ್‌ಡೌನ್ ಅನ್‌ಲಾಕ್ ನಂತರ ಕೇಂದ್ರ ಸರ್ಕಾರ ಚಿತ್ರಮಂದಿರದಲ್ಲಿ ಅ. 15ರಿಂದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ಕೋಲಾರದಲ್ಲಿ ಏಕೈಕ ಚಿತ್ರಮಂದಿರ ಮಾತ್ರ ಓಪನ್ ಆಗಿದೆ.

    ನಗರದ ಶ್ರೀ ನಾರಾಯಣಿ ಚಿತ್ರಮಂದಿರದಲ್ಲಿ ಶುಕ್ರವಾರದಿಂದ ಪ್ರದರ್ಶನ ಆರಂಭಗೊಂಡಿದ್ದರೂ ಮೊದಲ ದಿನ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮಾರ್ಚ್ ತಿಂಗಳಲ್ಲಿ ತೆರೆ ಕಂಡಿರುವ ಶಿವಾರ್ಜುನ ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದು, ಬೆಳಗಿನ ಮೊದಲ ಶೋಗೆ 15 ಪ್ರೇಕ್ಷಕರಷ್ಟೇ ಬಂದಿದ್ದರು, ಮಧ್ಯಾಹ್ನದ ಶೋಗೆ 12 ಪ್ರೇಕ್ಷಕರಿದ್ದುದು ಕಂಡುಬಂತು.

    ಚಿತ್ರಮಂದಿರದಲ್ಲಿ 604 ಆಸನ ವ್ಯವಸ್ಥೆ ಇದೆ. ಕೇಂದ್ರದ ಮಾರ್ಗಸೂಚಿಯನ್ವಯ 50 ಸೀಟು ಭರ್ತಿ ಮಾಡುವ ಅವಕಾಶವಿದ್ದರೂ ಸಿನಿ ಪ್ರಿಯರು ಮೊದಲ ದಿನ ಚಿತ್ರಮಂದಿರಕ್ಕೆ ಬರುವ ಮನಸ್ಸು ಮಾಡಲಿಲ್ಲ. ಹಾಗಾಗಿ ಚಿತ್ರ ಮಂದಿರ ಖಾಲಿ ಖಾಲಿಯಾಗಿತ್ತು. ಬಂದಿದ್ದ ಪ್ರೇಕ್ಷಕರಿಗಷ್ಟೇ ಚಿತ್ರಪ್ರದರ್ಶನ ಮಾಡುವುದು ಅನಿವಾರ್ಯವಾಗಿತ್ತು.

    ಚಿತ್ರ ಮಂದಿರದ ಮುಂಭಾಗ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸಿದ್ದವರಿಗಷ್ಟೇ ಪ್ರವೇಶ ನೀಡಲಾಯಿತು, ಬೆರಳೆಣಿಕೆಯಷ್ಟು ಪ್ರೇಕ್ಷಕರು ಇದ್ದುದ್ದರಿಂದ ಪರಸ್ಪರ ಅಂತರ ಕಾಪಾಡಿಕೊಳ್ಳುವ ಸಮಸ್ಯೆ ಕಂಡುಬರಲಿಲ್ಲ.

    ರಾಜ್ಯದ ವಿವಿಧೆಡೆ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಟಿಕೆಟ್ ದರ ಕಡಿತಗೊಳಿಸಲಾಗಿತ್ತು. ಕೋಲಾರದ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಈ ಅವಕಾಶ ಕಲ್ಪಿಸಿರಲಿಲ್ಲ, ಯಥಾಪ್ರಕಾರ ಟಿಕೆಟ್‌ಗೆ 100 ರೂ. ನಿಗದಿಪಡಿಸಲಾಗಿತ್ತು. ಹೊಸ ಚಿತ್ರಗಳು ಬಿಡುಗಡೆ ಆಗುತ್ತಿಲ್ಲವಾದ್ದರಿಂದ ಮಾರ್ಚ್ ಅಥವಾ ಅದಕ್ಕಿಂತ ಮುಂಚೆ ತೆರೆ ಕಂಡಿರುವ ಚಿತ್ರಗಳನ್ನು ಪ್ರದರ್ಶಿಸುವ ಅನಿವಾರ್ಯತೆ ಇದೆ.

    ಹಳೇ ಚಿತ್ರವಾದ್ದರಿಂದ ಈಗಾಗಲೆ ಸಿನಿಪ್ರಿಯರು ಚಿತ್ರಮಂದಿರದಲ್ಲಿ ವೀಕ್ಷಿಸಿರುವ ಅಥವಾ ಲಾಕ್‌ಡೌನ್ ಅವಧಿಯಲ್ಲಿ ಮೊಬೈಲ್ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಚಿತ್ರ ವೀಕ್ಷಿಸಿರುವ ಸಾಧ್ಯತೆ ಇರುವುದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಾರದಿರುವ ಸಾಧ್ಯತೆ ಇದೆ. ಕೆಲವರು ಕರೊನಾತಂಕದಿಂದ ದೂರ ಉಳಿದಿರಬಹುದು, ಒಟ್ಟಿನಲ್ಲಿ ಮೊದಲ ದಿನ ಸಿನಿಪ್ರಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ವೀಕ್ಷಕರು ಚಿತ್ರಮಂದಿರಕ್ಕೆ ಬರಬಹುದೆಂಬ ನಿರೀಕ್ಷೆಯಿಂದ ಮಾಲೀಕರು, ಚಿತ್ರಮಂದಿರ ಲೀಸ್‌ಗೆ ಪಡೆದವರು ಪ್ರದರ್ಶನ ಶುರು ಮಾಡಿದ್ದಾರೆ.

    ಏಳು ತಿಂಗಳಿನಿಂದ ಚಿತ್ರ ಮಂದಿರ ಮುಚ್ಚಿದ್ದರಿಂದ ನೆಚ್ಚಿನ ನಟರ ಸಿನಿಮಾ ವೀಕ್ಷಿಸಲು ಸಾಧ್ಯವಾಗಿರಲಿಲ್ಲ, ಮೊಬೈಲ್ನಲ್ಲಿ ವೀಕ್ಷಿಸಿದರೂ ಥಿಯೇಟರ್‌ನಲ್ಲಿ ನೋಡಿದಷ್ಟು ತೃಪ್ತಿ ಸಿಗುವುದಿಲ್ಲ, ಹಾಗಾಗಿ ಚಿತ್ರ ಮಂದಿರ ಓಪನ್ ಆದ ಮೊದಲ ದಿನವೇ ಚಿತ್ರ ವೀಕ್ಷಣೆ ಮಾಡಿದ್ದೇನೆ.
    ಸುರೇಶ್, ಹುನ್ಕುಂದ

    ಕರೊನಾ ಮಾರ್ಗಸೂಚಿ ಅನುಸರಿಸಿ ಚಿತ್ರಪ್ರದರ್ಶನ ಶುರು ಮಾಡಿದ್ದೇವೆ. ಮೊದಲ ದಿನ ಜನ ಕಡಿಮೆ, ಕನಿಷ್ಟ 50 ಪ್ರೇಕ್ಷಕರಾದರೂ ಬಂದರೆ ಸಿಬ್ಬಂದಿ ಸಂಬಳಕ್ಕಾದರೂ ಆಗುತ್ತದೆ. ಈಗಿನ ಸ್ಥಿತಿಯಲ್ಲಿ ವಿದ್ಯುತ್, ಜನರೇಟರ್ ವೆಚ್ಚಕ್ಕೂ ಬರುವುದಿಲ್ಲ,
    ರವಿ, ಚಿತ್ರಮಂದಿರ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts