More

    ಚಾಂಗದೇವನ ಜಾತ್ರೆಗೆ ಸಕಲ ಸಿದ್ಧತೆ

    ನವಲಗುಂದ: ಮಾರ್ಚ್ 9ರಿಂದ ತಿಂಗಳ ಪರ್ಯಂತ ಯಮನೂರಿನ ಚಾಂಗದೇವರ ಜಾತ್ರೆ ಅದ್ಧೂರಿಯಾಗಿ ಜರುಗಲಿದ್ದು, ತಾಪಂ ಹಾಗೂ ಗ್ರಾಪಂ ವತಿಯಿಂದ ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

    ಚಾಂಗದೇವನ ದರ್ಶನಕ್ಕೆ ಪ್ರತಿ ಗುರುವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರು ತಿಂದು ಬಿಸಾಡಿದ ಪ್ಲಾಸ್ಟಿಕ್ ತಟ್ಟೆ ಸೇರಿ ಇತರೆ ತ್ಯಾಜ್ಯ ರಾಶಿಗಟ್ಟಲೆ ಬೀಳುತ್ತದೆ. ಅದೆಲ್ಲವನ್ನು ಸ್ವಚ್ಛಗೊಳಿಸುವುದರ ಜತೆಗೆ ಭಕ್ತರು ಹಾಗೂ ಗ್ರಾಮಸ್ಥರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಭಕ್ತರು ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿ ಎಸೆಯಲಾದ ಬಟ್ಟೆಗಳನ್ನು ಒಂದೆಡೆ ಸಂಗ್ರಹಿಸಿಡಲು ಗುಂಡಿಗಳನ್ನು ತೋಡಲಾಗಿದೆ.

    ಯಮನೂರಿನ ಧರ್ಮಶಾಲೆ ಹಳೆಯ ಕಟ್ಟಡ, ಪೊಲೀಸ್ ಚೌಕಿ ಸುತ್ತಲೂ ಬಿದ್ದಿರುವ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ವಿಲೇವಾರಿ ಮಾಡಲಾಗಿದೆ. ಗ್ರಾಮದ ತಿರ್ಲಾಪೂರ, ಪಡೇಸೂರ ರಸ್ತೆ ಅಕ್ಕಪಕ್ಕದ ಚರಂಡಿ, ಸಾರ್ವಜನಿಕ ಶೌಚಗೃಹ ಮತ್ತು ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಶೆಟ್ಟರ್ ಕೆರೆ ಸುತ್ತಲೂ ಬೆಳೆದ ಕಸ, ಕಂಟಿ ತೆಗೆಸಲಾಗಿದೆ. ಹಳೆಯ ಗ್ರಾ.ಪಂ. ಆವರಣದ ಸುತ್ತಲೂ ಭಕ್ತರು ಅಡುಗೆ ಮಾಡಲು ಬಳಸಿದ್ದ ಕಲ್ಲುಗಳನ್ನು, ಅಂಗಡಿಕಾರರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಸ್ಮಶಾನಗಟ್ಟಿ ಸುತ್ತಲೂ ಸ್ವಚ್ಛಗೊಳಿಸಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಣ್ಣಿಹಳ್ಳದ ಹೊಸ ಸೇತುವೆ ಕೆಳಗೆ ತಾತ್ಕಾಲಿಕ ಬಸ್ ವ್ಯವಸ್ಥೆ, ಭಕ್ತರಿಗೆ ನೆರಳಿನ ವ್ಯವಸ್ಥೆ, ಎಲ್​ಇಡಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಗ್ರಾಮದಲ್ಲಿ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸಲಿದೆ. 50 ಸಾವಿರ ಲೀಟರ್ ಸಾಮರ್ಥ್ಯದ ಮೇಲ್ತೊಟ್ಟಿ ನಿರ್ವಿುಸಿ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕೋರಲಾಗಿದೆ.

    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಗುಡದೂರಮಠ, ಕಾರ್ಯದರ್ಶಿ ವಿ.ಜಿ. ಹಿರೇಮಠ, ಲೆಕ್ಕ ಸಹಾಯಕ ಬಸವರಾಜ ಗಿರಿಯಣ್ಣವರ, ಮೀನಾಕ್ಷಿ ದೊಡ್ಡಮನಿ ಸೇರಿ ತಾಪಂ, ಗ್ರಾಪಂ ಸಿಬ್ಬಂದಿ ಗ್ರಾಮದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ.

    ಆರೋಗ್ಯ ತಪಾಸಣೆ ಕೇಂದ್ರ: ಚಾಂಗದೇವನ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ ಭಕ್ತರು ಆಗಮಿಸುವುದರಿಂದ ರೋಗ, ರುಜಿನ ಬಾರದಂತೆ ನೋಡಿಕೊಳ್ಳಲು ಗ್ರಾಮದ ರಸ್ತೆ, ಬೀದಿ ಬದಿಗಳಲ್ಲಿ ಪೌಡರ್ ಸಿಂಪಡಿಸಲಾಗಿದೆ. ಎಲ್ಲೆಡೆ ಆತಂಕ ಸೃಷ್ಟಿಸಿರುವ ಕರೊನಾ ವೈರಸ್ ರೋಗ ಭೀತಿ ತಡೆಗಟ್ಟಲು ತಾಲೂಕು ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ.

    ಯಮನೂರು ಚಾಂಗದೇವನ ಜಾತ್ರೆ ತಿಂಗಳ ಕಾಲ ಜರುಗಲಿದ್ದು, ಅದಕ್ಕಾಗಿ ತಾ.ಪಂ. ಮತ್ತು ಗ್ರಾ.ಪಂ. ವತಿಯಿಂದ ಗ್ರಾಮದ ನೈರ್ಮಲೀಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಊರಲ್ಲಿ ಯಾವುದೇ ರೀತಿಯ ಕಲುಷಿತ ವಾತಾವರಣ ಸೃಷ್ಟಿಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
    | ಪವಿತ್ರಾ ಪಾಟೀಲ, ತಾ.ಪಂ. ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts