More

    ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ಗೆ ಅಸ್ತು

    ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ವಣಕ್ಕೆ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಈ ಮೂಲಕ ಹುಬ್ಬಳ್ಳಿ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ತಿಳಿಸಿದ್ದಾರೆ.

    ಫ್ಲೈ ಓವರ್ ನಿರ್ವಣದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಸಚಿವ ಜೋಶಿ ತಿಳಿಸಿದ್ದಾರೆ.

    ವಾಹನ ದಟ್ಟಣೆ ಹೆಚ್ಚಿರುವ ಚನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಫ್ಲೈ ಓವರ್ ನಿರ್ವಿುಸುವ ಮೂಲಕ ವಾಹನಗಳ ಸಂಚಾರ ಸರಳಗೊಳಿಸಬೇಕೆಂಬ ಅವಳಿ ನಗರದ ಜನತೆಯ ಒತ್ತಾಸೆ ದಶಕಗಳದ್ದು. ಇದೀಗ ಕೇಂದ್ರ ಸರ್ಕಾರ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಹಾಗೂ ವೃತ್ತ ಸೇರುವ ರಸ್ತೆಗಳಲ್ಲಿ ಫ್ಲೈ ಓವರ್ ನಿರ್ವಣಕ್ಕೆ ಹಸಿರು ನಿಶಾನೆ ತೋರಿಸಿದೆ.

    ಯೋಜನೆಯ ವಿವರ: ಚನ್ನಮ್ಮ ವೃತ್ತದಲ್ಲಿ ರಿಂಗ್ ರೋಡ್​ವೊಂದನ್ನು ನಿರ್ವಿುಸಲಾಗುತ್ತದೆ. ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದ ಮೂಲಕ ಮಹಿಳಾ ವಿದ್ಯಾಪೀಠದವರೆಗೆ ನಿರ್ವಣಗೊಳ್ಳಲಿರುವ ಫ್ಲೈ ಓವರ್​ನಲ್ಲಿ ವಾಹನಗಳು ಎರಡೂ ಬದಿಯಲ್ಲಿ ಸಂಚರಿಸಬಹುದಾಗಿದೆ.

    ಮತ್ತೊಂದೆಡೆ ವಿಜಯಪುರ ರಸ್ತೆಯ ಗಿರಿಯಾಸ್​ನಿಂದ ದ್ವಿಪಥ ರಸ್ತೆಯ ಫ್ಲೈಓವರ್ ಚನ್ನಮ್ಮ ವೃತ್ತದ ಮೂಲಕ ಗೋಕುಲ ರಸ್ತೆಯ ಕ್ಲರ್ಕ್ ಇನ್ ಹೋಟೆಲ್​ವರೆಗೆ ನಿರ್ವಣಗೊಳ್ಳುತ್ತದೆ. ಆದರೆ, ಚನ್ನಮ್ಮ ವೃತ್ತದಿಂದ ಕ್ಲರ್ಕ್ ಇನ್ ರಸ್ತೆವರೆಗಿನ ಫ್ಲೈಓವರ್ ಏಕಪಥ ರಸ್ತೆಯಾಗಿದ್ದು, ಗೋಕುಲ ರಸ್ತೆಯತ್ತ ಸಂಚರಿಸುವ ವಾಹನಗಳು ಮಾತ್ರ ಸಂಚರಿಸಬಹುದು. ಗೋಕುಲ ರಸ್ತೆಯಿಂದ ಸ್ಟೇಶನ್ ರಸ್ತೆ ಅಥವಾ ವಿಜಯಪುರ ರಸ್ತೆಯತ್ತ ತೆರಳುವ ವಾಹನಗಳಿಗೆ ಈಜುಗೊಳ ಸಂಕೀರ್ಣದ ಬಳಿ ಫ್ಲೈಓವರ್ ಏರಲು ಮಾರ್ಗ ನಿರ್ವಿುಸಲಾಗುತ್ತದೆ. ಸುಮಾರು 3.5 ಕಿಮೀ ಉದ್ದದ ಈ ಫ್ಲೈ ಓವರ್ ನಿರ್ಮಾಣ ಕಾಮಗಾರಿ 2 ವರ್ಷದೊಳಗೆ ಫೂರ್ಣಗೊಳ್ಳುವ ನಿರೀಕ್ಷೆ ಇದೆ.ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2021ರ ಪ್ರಾರಂಭದಲ್ಲಿ ಕಾಮಗಾರಿ ಪ್ರಾರಂಭಗೊಂಡರೂ, 2023-24ರಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ವಣಕ್ಕೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಈ ಹಿಂದೆಯೇ ಯೋಜನೆ ಸಿದ್ಧಪಡಿಸಿಕೊಂಡಿತ್ತು. ಇದೀಗ ಕೇಂದ್ರ ಸರ್ಕಾರದ ಸಮ್ಮತಿಯೂ ದೊರೆತಿರುವ ಕಾರಣ ಶೀಘ್ರ ಇ ಟೆಂಡರ್ ಕರೆಯುವುದಕ್ಕಾಗಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಘಟಕದ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಯೋಜನೆ ಮಂಜೂರಿಗೆ ಸಂಸದರ ಇಚ್ಛಾಶಕ್ತಿ
    ಹುಬ್ಬಳ್ಳಿಯಲ್ಲಿ ಫ್ಲೈಓವರ್ ನಿರ್ವಣದ ಕನಸು ನನಸಾಗಿಸಲು ಪ್ರಮುಖ ಕಾರಣ ಕೇಂದ್ರ ಸಂಸದೀಯ ವ್ಯವಹಾರಗಳಿ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಭೂಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಇಚ್ಛಾಶಕ್ತಿ. ದಶಕಗಳಿಗೂ ಹೆಚ್ಚು ಕಾಲದಿಂದ ಅವಳಿ ನಗರದಲ್ಲಿ ಫ್ಲೈ ಓವರ್ ನಿರ್ವಿುಸಬೇಕೆಂಬ ಆಶಯಕ್ಕೆ ಚಾಲನೆ ಸಿಕ್ಕಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ವಿುಸಲು ಇ ಟೆಂಡರ್ ಕರೆಯುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಸಮಿತಿ ಕಳೆದ ಜುಲೈನಲ್ಲಿ ಅನುಮೋದನೆ ನೀಡಿತ್ತು. ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಸಂಪೂರ್ಣ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವೇ ಒದಗಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts