More

    ಘನ ತ್ಯಾಜ್ಯ ನಿರ್ವಹಣೆ ಮಹಿಳೆಯರ ಹೆಗಲಿಗೆ

    ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಆರಂಭಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಜವಾಬ್ದಾರಿ ಇದೀಗ ಮಹಿಳಾ ಸ್ವ-ಸಹಾಯ ಸಂಘಗಳ ಹೆಗಲಿಗೇರಿದೆ.

    ಆಯಾ ಗ್ರಾಪಂಗಳಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣ, ನಿರ್ವಹಣೆಗೆ ನಿಯೋಜಿಸುವ ಸಿಬ್ಬಂದಿ ಸಂಖ್ಯೆ ಆಧಾರದ ಮೇಲೆ ಅದಕ್ಕಾಗಿ ಆಯಾ ಸಂಘಗಳಿಗೆ ವಾರ್ಷಿಕವಾಗಿ ಅನುದಾನವನ್ನೂ ನೀಡಲು ಸರ್ಕಾರ ನಿರ್ಧರಿಸಿದೆ.

    ಸಮರ್ಪಕ ನಿರ್ವಹಣೆಗೆ ಕ್ರಮ: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆ, ಸಮಯಕ್ಕೆ ಸರಿಯಾಗಿ ಮನೆ ಮನೆಗೆ ತೆರಳಿ ಕಸ ಸಂಗ್ರಹ, ನಿಗದಿತ ಸಮಯದಲ್ಲಿ ಸಿಬ್ಬಂದಿ ವೇತನ ಪಾವತಿಸುವುದು ಹಾಗೂ ಗ್ರಾಪಂ ಸಿಬ್ಬಂದಿ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರವು ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಹಿಸುತ್ತಿದೆ.

    ಗ್ರಾಪಂ ಸಿಬ್ಬಂದಿಗೆ ಹೆಚ್ಚುವರಿ ಕೆಲಸ: ಜಿಲ್ಲೆಯ 486 ಗ್ರಾಪಂಗಳ ಪೈಕಿ 20 ಕಡೆ ಪ್ರತಿನಿತ್ಯ ಮತ್ತು 240 ಕಡೆ ವಾರದಲ್ಲಿ ಎರಡು ದಿನ ಮಾತ್ರ ಕಸ ಸಂಗ್ರಹ ಕೆಲಸ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ 50 ಕಡೆಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಗ್ರಾಪಂಗಳಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಗ್ರಾಪಂಗಳು ಕಸ ನಿರ್ವಹಣೆ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂ. ವೆಚ್ಚ ಮಾಡುತ್ತಿವೆ. ಇದರಿಂದಾಗಿ ಗ್ರಾಪಂನ ಅನುದಾನ ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗುತ್ತಿಲ್ಲ. ಅಲ್ಲದೆ, ಗ್ರಾಪಂ ಸಿಬ್ಬಂದಿಗೆ ಹೆಚ್ಚುವರಿ ಕೆಲಸವಾಗುತ್ತಿರುವುದರಿಂದ ಬೇರೆ ಕೆಲಸಗಳು ಬಾಕಿ ಉಳಿಯುತ್ತಿದೆ.

    ಇದು ಸಾರ್ವಜನಿಕರ ದಿನನಿತ್ಯದ ಕೆಲಸಗಳ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಿದರೆ ಅನುಕೂಲವಾಗಲಿದೆ. ಜತೆಗೆ ದುಂದು ವೆಚ್ಚಕ್ಕೆ ಕಡಿವಾಣವೂ ಬೀಳಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯ.

    317 ಸಂಘಗಳಿಗೆ ತರಬೇತಿ: ಈಗಾಗಲೇ ಬೆಂಗಳೂರಿನ ಎಂಜಿಐಆರ್‌ಇಡಿ ಮತ್ತು ಮೈಸೂರಿನ ಎಎನ್‌ಎಸ್‌ಎಸ್‌ಐಆರ್‌ಡಿ ಮೂಲಕ 125 ಜಿಪಿಎಲ್‌ಎಫ್ ಒಕ್ಕೂಟಗಳು, 317 ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಲಾಗಿದೆ. 2021ರ ಡಿಸೆಂಬರ್ ಅಂತ್ಯದ ವೇಳೆ 750 ಘನ ಮತ್ತು ದ್ರವ ತ್ಯಾಜ್ಯ ಘಟಕಗಳ ನಿರ್ವಹಣೆಯನ್ನು ಎಸ್‌ಜಿಎಚ್‌ಗಳ ಮೂಲಕ ನಿರ್ವಹಿಸಲು ಗುರಿ ಹೊಂದಲಾಗಿದೆ. ಆಯಾ ಜಿಪಂ ಸಿಇಒ ಅವರು ತರಬೇತಿ ಹೊಂದಿದ ಮಹಿಳಾ ಸ್ವ-ಸಹಾಯ ಸಂಘಗಳು, ಗ್ರಾಪಂ ಅಧ್ಯಕ್ಷ, ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಲಿದ್ದಾರೆ ಎಂದು ಸ್ವಚ್ಛ ಭಾರತ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.

    ಕಸ ವಿಲೇವಾರಿಯೇ ದೊಡ್ಡ ಸಮಸ್ಯೆ: ಬೆಳಗಾವಿ ಜಿಲ್ಲೆಯಲ್ಲಿರುವ 486 ಗ್ರಾಪಂಗಳು, 30 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿತ್ಯ ನೂರಾರು ಟನ್ ಹಸಿ ಮತ್ತು ಒಣ ಕಸ ಉತ್ಪತ್ತಿಯಾಗುತ್ತಿದೆ. ಆದರೆ, ಸಮರ್ಪಕವಾಗಿ ನಿರ್ವಹಣೆ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕ ಕಡೆ ಗುಡ್ಡ, ರಸ್ತೆ ಬದಿ, ಹಳ್ಳಗಳ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಕೆಲವು ಕಡೆ ಕಸ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಸಮಸ್ಯೆ ದಿನವೂ ಹೆಚ್ಚುತ್ತಿದೆ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯರಾದ ರಮೇಶ ದೇಶಪಾಂಡೆ, ಗೋವಿಂದ ಕೊಪ್ಪದ ಇತರರು.

    10 ಗುಂಟೆಯಿಂದ 1 ಎಕರೆ ಅಗತ್ಯ: ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಕನಿಷ್ಠ 10 ಗುಂಟೆಯಿಂದ ಒಂದು ಎಕರೆವರೆಗೆ ಜಾಗದ ಅಗತ್ಯವಿದೆ. ಇದಕ್ಕಾಗಿ ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಜಾಗ ಇಲ್ಲವೇ ಕಂದಾಯ ಇಲಾಖೆಗೆ ಸೇರಿದ ಜಾಗ ಪಡೆದುಕೊಳ್ಳಬಹುದು. ಆದರೆ, ವಿವಿಧ ಕಾರಣಗಳಿಂದಾಗಿ ಈ ಜಾಗ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸಂಗ್ರಹಿಸಿದ ಕಸ, ಊರಿನ ತಿಪ್ಪೆ, ರಸ್ತೆ ಬದಿಯ ಕಸ ವಿಲೇವಾರಿ ಮಾಡುತ್ತಿದ್ದಾರೆ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡುವ ಕೆಲಸ ಪ್ರಗತಿ ಹಂತದಲ್ಲಿದೆ. ಕಸ ಸಂಗ್ರಹ, ಸಿಬ್ಬಂದಿ ವೇತನ ಸೇರಿ ಎಲ್ಲವನ್ನೂ ಸಂಘಗಳೇ ಭರಿಸಲಿವೆ. ಹೊರಗುತ್ತಿಗೆ ಆಧಾರದ ಮೇಲೆ ಸರ್ಕಾರವು ವಾರ್ಷಿಕವಾಗಿ ಹಣ ಬಿಡುಗಡೆ ಮಾಡಲಿದೆ.
    | ದರ್ಶನ ಎಚ್.ವಿ. ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts