More

    ಗ್ರಾಪಂ ಗ್ರಂಥಾಲಯಕ್ಕೆ ಕ್ರೀಡಾ ಹಾಗೂ ಆಟಿಕೆ ಸಾಮಗ್ರಿ ಪೂರೈಕೆಗೆ ಸೂಚನೆ

    ಕಾರವಾರ:- ಜಿಲ್ಲೆಯ ಎಲ್ಲ ಗ್ರಾಪಂ ಗ್ರಂಥಾಲಯಗಳಿಗೆ ಮಕ್ಕಳ ಆಟಿಗೆ ಪೂರೈಸಲು ಜಿಪಂ ಸಿಇಒ ಮುಂದಾಗಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚಾಯತಿಗಳಿಂದ ಸಂಗ್ರಹಿಸಲಾಗುತ್ತಿರುವ ಶೇ. 6ರಷ್ಟು ಗ್ರಂಥಾಲಯ ಕರದಿಂದಲೇ ಒಳಾಂಗಣ ಕ್ರೀಡೆಗೆ ಸಂಬಂಧಿಸಿದ ಕ್ರೀಡಾ ಸಾಮಗ್ರಿ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ಸಾಧನಗಳನ್ನು ಪೂರೈಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಡಿಜಿಟಲೀಕರಣ ಕಾರ್ಯಕ್ರಮದಡಿ ಈಗಾಗಲೇ ಜಿಲ್ಲೆಯ ಎಲ್ಲ 229 ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಈ ಎಲ್ಲ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಒಳಾಂಗಣ ಕ್ರೀಡೆಗೆ ಸಂಬಂಧಿಸಿದ ಕ್ರೀಡಾ ಸಾಮಗ್ರಿ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ಒಗಟು ಬಿಡಿಸುವ ಆಟಿಕೆ, ರುಬಿಕ್ ಕ್ಯೂಬ್, ಕೇರಂ, ಚೆಸ್, ಹಾವು-ಏಣಿ ಬೋರ್ಡ್, ಎಣಿಸುವ ಮಣಿಗಳ ಸರ, ಅಬ್ಯಾಕಸ್ ಸಾಧನಗಳನ್ನು ಖರಿದಿಸಿ ಪೂರೈಸಲಾಗುತ್ತಿದೆ ಎಂದು ತಿಳಿದ್ದಾರೆ.
    ಜತೆಗೆ 2021-22ನೇ ಸಾಲಿನಲ್ಲಿ ಡಿಜಿಟಲೀಕರಣಗೊಳಿಸಿದ ಗ್ರಾಪಂ ಗ್ರಂಥಾಲಯಗಳಲ್ಲಿನ ಗಣಕ ಯಂತ್ರಗಳ ಉತ್ತಮ ಕಾರ್ಯನಿರ್ವಹಣೆ, ಎಲ್ಲ ಗ್ರಾಪಂ,ಗಳಿಗೆ 1 ರಿಂದ 10 ನೇ ತರಗತಿವರೆಗಿನ (ಎನ್‌ಸಿಇಆರ್‌ಟಿ ಟೆಕ್ಸ್ಟ್ ಬುಕ್ ಸೇರಿ) ಪಠ್ಯಪುಸ್ತಕ ಪೂರೈಕೆ, ಗ್ರಂಥಾಲಯಗಳಿಗೆ ಮಕ್ಕಳ ನೊಂದಣಿ ಸಂಖ್ಯೆಯನ್ನು ಶೇ. 100 ರಷ್ಟು ಪ್ರಗತಿ ಸಾಧನೆ, ಓದುವ ಬೆಳಕು ಕಾರ್ಯಕ್ರಮದಡಿ ಶಿಕ್ಷಣ ಇಲಾಖೆ ಶಾಲಾ ಮಕ್ಕಳನ್ನು ವಾರಕ್ಕೊಮ್ಮೆ ಗ್ರಂಥಾಲಯಕ್ಕೆ ಕರೆತರುವ ಕಾರ್ಯ, ಮಕ್ಕಳ ಶಾಲೆ, ಸಮಯ, ದಿನಾಂಕ ನಿಗದಿ ಹಾಗೂ ಶಾಲೆಯಿಂದ ಒಬ್ಬ ಶಿಕ್ಷಕರು ಮಕ್ಕಳನ್ನು ನಿಗದಿತ ವೇಳಾಪಟ್ಟಿಯಂತೆ ಗ್ರಂಥಾಲಯಕ್ಕೆ ಮಕ್ಕಳನ್ನು ಕರೆತರುವುದು ಒಳಗೊಂಡಂತೆ ರೂಪಿಸಲಾದ ಯೋಜನೆಯ ಮಾಹಿತಿಯನ್ನು ಸುತ್ತೋಲೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾಗಳು ಗ್ರಂಥಪಾಲಕರು ಹಾಗೂ ಎಲ್ಲ ಶಾಲಾ ಮುಖ್ಯಸ್ಥರಿಗೆ ನೀಡಬೇಕು. ಗ್ರಾಮದಲ್ಲಿನ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗ್ರಂಥಾಲಯಕ್ಕೆ ಮಕ್ಕಳು ಭೇಟಿ ನೀಡಿದ ಸಂದರ್ಶನದಲ್ಲಿ ಓದುವ ಹವ್ಯಾಸ, ಕ್ರೀಡೆ ಇವುಗಳ ಬಗ್ಗೆ ಉಚಿತ ಮಾರ್ಗದರ್ಶನ ಕೊಡಿಸಲು ಕಾರ್ಯಕ್ರಮ ರೂಪಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ ಗ್ರಂಥಾಲಯಕ್ಕೆ ಪುಸ್ತಕ ಖರಿದಿಸುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದ ಪುಸ್ತಕಗಳನ್ನು ಜಿಲ್ಲಾ ಪಂಚಾಯತ್ ಸಿಪಾರಸ್ಸು ಮಾಡಿದ ಪುಸ್ತಕಗಳನ್ನು ಮಾತ್ರ ಖರಿದಿಸಬೇಕು. ಎಲ್ಲ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಈಗಾಗಲೇ ಒದಗಿಸಲಾದ ಕರಿಯರ್ ಗೈಡೆನ್ಸ್ ಚಾರ್ಟ್‌ನ್ನು ಉತ್ತಮ ಗುಣಮಟ್ಟದ ಪ್ರಿಂಟ್‌ನಲ್ಲಿ ತೆಗೆದು ಗ್ರಂಥಾಲಯಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದಿದ್ದಾರೆ.

    ಕೋಟ್—-
    ಜಿಲ್ಲೆಯಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಿಕೊಂಡು ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಸದೃಢರಾಗಲಿ ಎಂಬ ಉದ್ದೇಶದಿಂದ ಕ್ರೀಡಾ ಸಾಮಗ್ರಿ ಹಾಗೂ ಆಟಿಕೆ ಸಾಧನಗಳ ಪೂರೈಕೆಗೆ ಯೋಜನೆ ಸಿದ್ಧಪಡಿಸಿ ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಪ್ರಿಯಾಂಗಾ ಎಂ., ಉಕ ಜಿಪಂ ಸಿಇಒ

    ಕೋಟ್—–
    ಗ್ರಾಮ ಪಂಚಾಯತಿ ಗ್ರಂಥಾಲಯಗಳ ಡಿಜಿಟಲೀಕರಣ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವಂತೆ ಜಿಪಂ ಸಿಇಒ ಅವರು ಗ್ರಂಥಾಲಯಗಳಿಗೆ ಜಿಲ್ಲಾ ಪಂಚಾಯತ್‌ನಿಂದಲೇ ಪಠ್ಯ ಹಾಗೂ ಸ್ಪರ್ಧಾತ್ಮಕ ಪುಸ್ತಕ, ಕ್ರೀಡಾ ಮತ್ತು ಆಟಿಕೆ ಸಾಧನಗಳನ್ನು ಪೂರೈಸುವ ಕಾರ್ಯ ಮಹತ್ವದ್ದಾಗಿದೆ. ಇದರಿಂದ ಮಕ್ಕಳು ಮೊಬೈಲ್ ಫೋನ್ ವ್ಯಸನದಿಂದಲೂ ಮುಕ್ತರಾಗಲಿದ್ದಾರೆ. – ಗಣಪತಿ ಎ. ಆಗೇರ, ಮುಖ್ಯೋಪಾಧ್ಯಾಯರು, ಕೆಪಿಎಸ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಮದಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts