More

    ಗ್ರಾಪಂ ಅಧ್ಯಕ್ಷ, ಸದಸ್ಯರ ಓಲೈಕೆಗೆ ಕಸರತ್ತು!

    ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಸದಸ್ಯರಿಗೆ ಭಾರಿ ಬೇಡಿಕೆ ಬಂದಿದೆ! ಅಲ್ಲದೆ, ಗ್ರಾಪಂ ಸದಸ್ಯರ ಸ್ನೇಹ ಸಾಧಿಸಲು ರಾಜಕೀಯ ಪಕ್ಷಗಳು, ಆಕಾಂಕ್ಷಿಗಳು ಓಲೈಕೆ ನಡೆಸುತ್ತಿದ್ದಾರೆ.

    ಹೌದು, ಜಿಪಂ, ತಾಪಂ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಆದರೆ, ಕ್ಷೇತ್ರ ಮೀಸಲಾತಿ ಕಾರಣದಿಂದಾಗಿ ಚುನಾವಣೆ ನಡೆಯದೇ ಇರುವುದರಿಂದ ಅವರೆಲ್ಲರೂ ಇದೀಗ ಮಾಜಿಗಳಾಗಿದ್ದಾರೆ. ಅಲ್ಲದೆ, ಜನರೊಂದಿಗೆ ಒಡನಾಟ, ಸಮಾಜ ಸೇವೆ ಮಾಡಿ ಪ್ರಭಾವ ಬಳಸುವ ಸ್ಥಿತಿಯಲ್ಲಿ ಅವರಿಲ್ಲ. ಹಾಗಾಗಿ ಹಾಲಿ, ಮಾಜಿ ಶಾಸಕರು ಗ್ರಾಪಂ ಸದಸ್ಯರನ್ನು ಸೆಳೆದುಕೊಳ್ಳಲು ಕಸರತ್ತು ನಡೆಸಿದ್ದಾರೆ. ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಜಿಪಂ, ತಾಪಂ ಸದಸ್ಯರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಈ ಸದಸ್ಯರ ನಂತರದ ಸ್ಥಾನದಲ್ಲಿ ಗ್ರಾಪಂ ಅಧ್ಯಕ್ಷ, ಸದಸ್ಯರು ಇರುತ್ತಿದ್ದರು. ಆದರೆ, ಇದೀಗ ಜಿಪಂ,ತಾಪಂಗಳಲ್ಲಿ ಚುನಾವಣೆ ನಡೆಯದಿರುವುದರಿಂದ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದ್ದು, ಗ್ರಾಪಂ ಸದಸ್ಯರೇ ಪಕ್ಷಗಳಿಗೆ, ಆಕಾಂಕ್ಷಿಗಳಿಗೆ ಆಸರೆಯಾಗಿದ್ದಾರೆ. ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರುವುದರಿಂದ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಪಂ ಸದಸ್ಯರಿಂದಲೇ ಚಾಲನೆ ಕೊಡಿಸುತ್ತಿದ್ದಾರೆ. ಅಲ್ಲದೆ, ಸಭೆ, ಸಮಾರಂಭಗಳನ್ನು ನಡೆಸುವುದು ಸೇರಿ ಕೆಲ ಜವಾಬ್ದಾರಿಗಳನ್ನು ಸದಸ್ಯರಿಗೆ ವಹಿಸುತ್ತಿರುವುದು ವಿಶೇಷ ಎನ್ನಲಾಗಿದೆ.

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 484 ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಒಟ್ಟು 8,871 ಸದಸ್ಯರಿದ್ದಾರೆ. ಇದರಲ್ಲಿ 8405 ಗ್ರಾಪಂ ಸದಸ್ಯರೇ ಅಧಿಕ ಪ್ರಮಾಣದಲ್ಲಿರುವುದು ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸಲಿದ್ದಾರೆ. ಸುಮಾರು 8871 ಸದಸ್ಯರಲ್ಲಿ ಅಧಿಕ ಪ್ರಮಾಣದಲ್ಲಿ ಅಹಿಂದ ವರ್ಗದ ಸದಸ್ಯರಿದ್ದಾರೆ. ಆ ಪೈಕಿ ಮಹಿಳಾ ಸದಸ್ಯರೆ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸ್ಥಳೀಯ ಮಟ್ಟದ ರಾಜಕೀಯ ಮುಖಂಡರು ಜಾತಿವಾರು ಮತಗಳ ವಿಂಗಡಣೆ ಲೆಕ್ಕಾಚಾರದ ಮೂಲಕ ಹಿಡಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆಕಾಂಕ್ಷಿಗಳು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸ್ಥಳೀಯ ಮುಖಂಡರು, ಗ್ರಾಪಂ ಸದಸ್ಯರ ಬೆನ್ನು ಬಿದ್ದಿದ್ದಾರೆ ಎಂದು ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ 1 ಮಹಾನಗರ ಪಾಲಿಕೆ, 2 ನಗರ ಸಭೆ, 15 ಪುರಸಭೆ, 15 ಪಟ್ಟಣ ಪಂಚಾಯಿತಿ ಇವೆ.

    ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಮನೆ, ಹಕ್ಕುಪತ್ರ ವಿತರಣೆ ಕಾರ್ಯ ಕ್ರಮಗಳಿಗೆ ಶಾಸಕರು ಆಹ್ವಾನಿಸುತ್ತಿದ್ದಾರೆ. ನಾವು ಯಾವುದೇ ಪಕ್ಷದ ಚಿಹ್ನೆಯೊಂದಿಗೆ ಗುರುತಿಸಿಕೊಂಡಿಲ್ಲ. ಎಲ್ಲ ಪಕ್ಷದವರು ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳುತ್ತಿದ್ದಾರೆ. ನಮ್ಮ ಗ್ರಾಮಗಳಲ್ಲಿರುವ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಆದ್ಯತೆ ನೀಡುತ್ತೇವೆ.
    | ಸಾವಿತ್ರಿ ಕೆ. ಮಾದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts