More

    ಗೌರವ ಡಾಕ್ಟರೇಟ್‌ಗೂ ಅರ್ಜಿ ಆಹ್ವಾನ!

    ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ತನ್ನ 10ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡುವುದಕ್ಕೆ ‘ಅರ್ಜಿ ಆಹ್ವಾನಿಸುವ’ ಮೂಲಕ ವಿವಾದಕ್ಕೀಡಾಗಿದೆ.

    ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವುದಕ್ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಕಮಿಟಿ ಹಾಗೂ ರಾಜ್ಯಪಾಲರು ಸೂಚಿಸುವ ವ್ಯಕ್ತಿಗಳಿರುವ ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯೇ ತನ್ನ ಮೂಲದಿಂದ ಗೌರವ ಡಾಕ್ಟರೇಟ್ ನೀಡುವುದಕ್ಕೆ ಅರ್ಹರನ್ನು ಆಯ್ಕೆ ಮಾಡಿ, ಒಪ್ಪಿಗೆಗೆ ರಾಜ್ಯಪಾಲರಿಗೆ ಕಳುಹಿಸಬೇಕೆನ್ನುವ ನಿಯಮವಿದೆ.

    ಆದರೆ, ರಾಣಿ ಚನ್ನಮ್ಮ ವಿಶವಿದ್ಯಾಲಯವು ಗೌರವ ಡಾಕ್ಟರೇಟ್‌ಗೆ ಅರ್ಜಿ ಆಹ್ವಾನಿಸುವ ಮೂಲಕ ತನ್ನ ಘನತೆ-ಗೌರವಕ್ಕೆ ಧಕ್ಕೆ ತಂದುಕೊಂಡಿದೆ. ಗೌರವ ಡಾಕ್ಟರೇಟ್‌ಗಾಗಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ನೀಡುವ ಮೂಲಕ ವಿಶ್ವವಿದ್ಯಾಲಯ ಅನಿಷ್ಟ ಪದ್ಧತಿಗೆ ನಾಂದಿ ಹಾಡಿದೆ ಎಂದು ನಾಗರಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಕಮಿಟಿಯಲ್ಲಿ ಚರ್ಚೆ ಮಾಡಿ, ಗೌರವ ಡಾಕ್ಟರೇಟ್‌ಗೆ ಆಯ್ಕೆ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಗೆ ನಿವೃತ್ತ ಉಪಕುಲಪತಿ ಅಧ್ಯಕ್ಷರಾಗಿರುತ್ತಾರೆ. ಈ ಆಯ್ಕೆ ಸಮಿತಿಯೇ ತಮ್ಮ ಮೂಲಗಳಿಂದ ಸಮಾಜ ಒಪ್ಪುವ ಸಾಧಕರನ್ನು ಆಯ್ಕೆ ಮಾಡಬೇಕು. ಅದು ಬಿಟ್ಟು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ಗೆ ಅರ್ಜಿ ಆಹ್ವಾನಿಸಿ, ಸಮಾಜದ ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.

    ಲಾಬಿ, ಪ್ರಭಾವವೇ ಹೆಚ್ಚು: ಅರ್ಜಿ ಕರೆದು ಗೌರವ ಡಾಕ್ಟರೇಟ್ ನೀಡುವುದಾದರೆ ಬೇಕಾಬಿಟ್ಟಿ ಅರ್ಜಿಗಳು ಬರುತ್ತವೆ. ಲಾಬಿ ಮಾಡುವವರು, ಜನಪ್ರತಿನಿಧಿಗಳ ಮೂಲಕ ಪ್ರಭಾವ ಬೀರುವವರು ಸುಲಭವಾಗಿ ಗೌರವ ಡಾಕ್ಟರೇಟ್ ಪಡೆಯುವುದಕ್ಕೆ ಇದು ಅವಕಾಶ ಮಾಡಿಕೊಟ್ಟಂತಾಗಿದೆ. ಅರ್ಹರಲ್ಲದವರಿಂದಲೂ ಬಹಳಷ್ಟು ಅರ್ಜಿಗಳು ಸಲ್ಲಿಕೆಯಾಗುವ ಸಂಭವ ಇರುತ್ತದೆ. ಹೀಗಾಗಿ ಅರ್ಜಿ ಕರೆದು ಗೌರವ ಡಾಕ್ಟರೇಟ್ ನೀಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕೆಂಬ ಒತ್ತಾಯ ಕೇಳಿಬಂದಿದೆ.

    ಮೈಮೇಲೆ ವಿವಾದ ಎಳೆದುಕೊಂಡ ವಿವಿ

    ರಾಣಿ ಚನ್ನಮ್ಮ ವಿವಿ ಆರಂಭವಾದಾಗಿನಿಂದ ಯಾವ ವರ್ಷವೂ ಗೌರವ ಡಾಕ್ಟರೇಟ್ ಕೊಡುವುದಕ್ಕೆ ಅರ್ಜಿ ಕರೆದಿಲ್ಲ. ಈ ವರ್ಷ ಅರ್ಜಿ ಕರೆಯುವ ಮೂಲಕ ಹೊಸ ಪದ್ಧತಿ ಅನುಸರಿಸಿ ತನ್ನ ಮೈಮೇಲೆ ವಿವಾದ ಎಳೆದುಕೊಂಡಿದೆ. ವಿವಿ ಆಗುವುದಕ್ಕಿಂತ ಮೊದಲು ಸ್ನಾತಕೋತ್ತರ ಕೇಂದ್ರವಾಗಿತ್ತು. ದಶಕಗಳ ಹೋರಾಟದ ಬಳಿಕ ವಿಶ್ವವಿದ್ಯಾಲಯವಾಗಿ, ರಾಣಿ ಚನ್ನಮ್ಮ ಹೆಸರಿಟ್ಟುಕೊಂಡಿರುವ ವಿವಿಗೆ ಇಂತಹ ದುಸ್ಥಿತಿ ಬರಬಾರದಿತ್ತೆಂಬ ಕಟು ಟೀಕೆಗಳು ವ್ಯಕ್ತವಾಗುತ್ತಿವೆ.

    ವಿಶ್ವವಿದ್ಯಾಲಯ ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್ ಕೊಡುತ್ತಾರೆಂಬ ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಈ ಬಾರಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಬೇಕು ಅಂತ ಯೋಚನೆ ಮಾಡಿದ್ದೇವೆ. ಅಂತಿಮವಾಗಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಕಮಿಟಿ ಸಿಫಾರಸು ಮಾಡುವ ಹೆಸರುಗಳು ರಾಜ್ಯಪಾಲರ ಒಪ್ಪಿಗೆ ಕಳುಹಿಸಲಾಗುತ್ತದೆ.
    | ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

    ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವುದಕ್ಕೆ ಅರ್ಜಿ ಕರೆಯುವುದನ್ನು ಇತಿಹಾಸದಲ್ಲಿ ಎಂದೂ ಮಾಡಿರಲಿಲ್ಲ. ಈ ಬಾರಿ ಅರ್ಜಿ ಕರೆದಿದ್ದಾರೆ ಎನ್ನುವುದು ವಿವಿ ತಪ್ಪು ಹೆಜ್ಜೆ ಇಟ್ಟ ಹಾಗೆ. ಪದವಿ, ಪ್ರಶಸ್ತಿಗಳನ್ನು ನೀಡುವ ವಿಷಯದಲ್ಲಿ ಯಾವುದೇ ಪ್ರಭಾವ ಇರಬಾರದು.
    | ಅಶೋಕ ಚಂದರಗಿ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts