More

    ಗೋಹತ್ಯೆ ನಿಷೇಧ ಕಾಯ್ದೆ ಪರಾಮರ್ಶೆ ಸಲ್ಲದು: ಕುರುಬೂರು ಶಾಂತಕುಮಾರ್

    ಮೈಸೂರು: ಗೋಹತ್ಯೆ ನಿಷೇಧ ಕಾಯ್ದೆ ಪರಾಮರ್ಶಿಸುವುದು ಸರಿಯಲ್ಲ. ಗೋವಿನೊಂದಿಗೆ ರೈತರಿಗೆ ಪೂಜ್ಯಭಾವನೆ ಇದ್ದು, ಇದರಲ್ಲಿ ಧರ್ಮ ರಾಜಕಾರಣ ಮಾಡಬಾರದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಕೋರಿದರು.
    ರೈತರ ಬದುಕಿಗೆ ಆಸರೆಯಾಗಿ, ಜೀವನಾಡಿಗಳಾಗಿರುವ ಗೋವುಗಳನ್ನು ಗೌರವ ಭಾವನೆಯಿಂದ ಪೂಜಿಸುತ್ತೇವೆ. ಇಂಥ ಪ್ರಾಣಿಗಳನ್ನು ವಯಸ್ಸಾದ ಬಳಿಕ ಹತ್ಯೆ ಮಾಡುವುದು ಒಪ್ಪುವಂಥದ್ದಲ್ಲ. ಕೃಷಿಕರ ಕುಟುಂಬದ ಸದಸ್ಯರ ರೀತಿಯಲ್ಲಿ ಇರುವ ಹಸುಗಳನ್ನು ಹತ್ಯೆ ಮಾಡಲು ಅವಕಾಶ ನೀಡುವುದು ಸರಿಯಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಅನಾದಿ ಕಾಲದಿಂದಲೂ ಕೃಷಿ ಜತೆ ರೈತರೊಂದಿಗೆ ಬದುಕು ನಡೆಸುತ್ತಿರುವ ಹಸುಗಳನ್ನು ಮಾನವೀಯತೆ ಮೀರಿ ಕೊಲ್ಲಲು ಅವಕಾಶ ಕೊಡುವುದು ನಮ್ಮ ಸಂಸ್ಕೃತಿ ಅಲ್ಲ. ಕೋಣನಿಗೂ, ಹಸುವಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಗೋವುಗಳ ವಿಚಾರದಲ್ಲಿ ಧರ್ಮ ರಾಜಕಾರಣ ಬಿಡಬೇಕು ಎಂದು ಸಲಹೆ ನೀಡಿದರು.
    ಕಾನೂನಿನಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಿ. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಜೂ. 28ರಂದು ಬೆಂಗಳೂರಿನಲ್ಲಿ ರೈತ ಸಂಘಟನೆಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಸಲಿದ್ದೇವೆ. ಅಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಸಿದ ಬಳಿಕ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
    ಪ್ರಾಣಿಗಳು ಕಾಡಿನ ಒಳಗೆ ಸ್ವಚ್ಚಂದವಾಗಿರಲು ಅವಕಾಶವಾಗುತ್ತಿಲ್ಲ. ಆದ್ದರಿಂದಲೇ ನಾಡಿಗೆ ಬಂದು ಜನರ ಬಲಿ ಪಡೆಯುತ್ತಿವೆ. ಜತೆಗೆ, ಬೆಳೆಗಳನ್ನು ನಾಶಪಡಿಸುತ್ತಿವೆ. ಆದ್ದರಿಂದ ರೈತರ ಬೆಳೆ, ಪ್ರಾಣಹಾನಿ ತಪ್ಪಿಸಲು ಕಾಡಿನ ಒಳಗೆ ಇರುವ ಎಲ್ಲ ರೆಸಾರ್ಟ್, ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
    ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಆದ್ದರಿಂದ ಡಾ.ಸ್ವಾಮಿನಾಥನ್ ವರದಿಯಂತೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
    ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts