More

    ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ಟ್ರಸ್ಟ್ ತೆಕ್ಕೆಗೆ ; ಷರತ್ತು, ನಿಬಂಧನೆಗೊಳಪಡಿಸಿ ಹಸ್ತಾಂತರ ; 6 ವರ್ಷಗಳ ನಂತರ ಪ್ರಕರಣ ಸುಖಾಂತ್ಯ

    ಕೊರಟಗೆರೆ; ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯವನ್ನು ಹಲವು ಷರತ್ತು ಮತ್ತು ನಿಬಂಧನೆಗೊಳಪಡಿಸಿ ಧಾರ್ಮಿಕ ದತ್ತಿ ಇಲಾಖೆ ಶ್ರೀಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ಗೆ ಶನಿವಾರ ಹಸ್ತಾಂತರ ಮಾಡಿದೆ.  ದೇಗುಲ ಟ್ರಸ್ಟ್ ಮತ್ತು ಸ್ಥಳೀಯರ ಹೊಂದಾಣಿಕೆ ಕೊರತೆಯಿಂದ ದೇವಾಲಯವನ್ನು ಧಾರ್ಮಿಕ ದತ್ತಿ ಇಲಾಖೆ 2015ರಲ್ಲಿ ವಶಕ್ಕೆ ಪಡೆದಿತ್ತು. ಹೀಗಾಗಿ ಟ್ರಸ್ಟ್ ನ್ಯಾಯಾಲದ ಮೊರೆ ಹೋಗಿತ್ತು.

    ಹೈಕೋರ್ಟ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ, ಜಿಲ್ಲಾಧಿಕಾರಿ ನಿರ್ದೇಶನದಂತೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ. ಆರ್. ಶ್ರೀರಂಗಯ್ಯ ಅವರಿಗೆ ನಿಬಂಧನೆ ಮತ್ತು ಷರತ್ತು ವಿಧಿಸಿ ನ್ಯಾಯಾಲಯದ ಆದೇಶದಂತೆ ಹಸ್ತಾಂತರಿಸಿದರು.

    ಹಿನ್ನೆಲೆ: ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮತ್ತು ಮಹಾಲಕ್ಷ್ಮೀ ಪುನರ್ ಸ್ಥಾಪಿತ ಟ್ರಸ್ಟ್ ನಡುವೆ ಗೊಂದಲ ಸೃಷ್ಟಿಯಾಗಿ ಶ್ರೀಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಸ್ಥಳೀಯರಿಗೆ ಟ್ರಸ್ಟ್‌ನಲ್ಲಿ ಅವಕಾಶ ಮಾಡಿಕೊಡದೆ ಕೇವಲ ಬೆಂಗಳೂರು ಮತ್ತು ಇತರ ನಗರಗಳ ವ್ಯಕ್ತಿಗಳನ್ನೇ ಧರ್ಮದರ್ಶಿಗಳನ್ನಾಗಿ ಮಾಡಿಕೊಂಡು ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ನಡೆದ ಕಲಹದಿಂದ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿ 2015ರ ಮಾರ್ಚ್ 7ರಂದು ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ಪಡೆದಿತ್ತು. ನಂತರ 6 ವರ್ಷಗಳ ಕಾನೂನು ಸಮರ ನಡೆದು ಈಗ ಪ್ರಕರಣ ಸುಖಾಂತ್ಯವಾಗಿದ್ದು ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವಶಕ್ಕೆ ಮತ್ತೆ ಬಂದಿದೆ.

    ಅಧಿಕಾರ ಹಸ್ತಾಂತರದ ವೇಳೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಕಾರ‌್ಯದರ್ಶಿ ಚಿಕ್ಕನರಸಪ್ಪ, ಧರ್ಮದರ್ಶಿಗಳಾದ ರಂಗಶಾಮಯ್ಯ, ರಾಮಕೃಷ್ಣಯ್ಯ, ಲಕ್ಷ್ಮಿನರಸಯ್ಯ, ನರಸರಾಜು, ತೀತಾ ಗ್ರಾಪಂ ಅಧ್ಯಕ್ಷ ನಟರಾಜು, ಉಪ ತಹಸೀಲ್ದಾರ್ ಮಧುಚಂದ್ರ ಸೇರಿ ಟ್ರಸ್ಟ್ ಸದಸ್ಯರು ಇದ್ದರು.

    ಅಭಿವೃದ್ಧಿಯ ಭರವಸೆ: ದೇಗುಲದಲ್ಲಿ ದಾಸೋಹ ನಿಲಯ, ಕಲ್ಯಾಣ ಮಂಟಪ, ಯಾತ್ರಿನಿವಾಸ, ಯಾಗಶಾಲೆ, ಸ್ನಾನಗೃಹಗಳು, ಶೌಚಗೃಹಗಳು, ರಂಗಮಂದಿರಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳಿಗೆ ಪುನರ್ ಕಾಯಕಲ್ಪ ನೀಡಬೇಕಿದೆ. ಇನ್ನೂ ಉತ್ತಮ ರೀತಿಯಲ್ಲಿ ಎಲ್ಲ ಭಕ್ತರಿಗೂ ಉಚಿತ ಊಟದ ವ್ಯವಸ್ಥೆ ಮಾಡುವುದು, ಉಚಿತ ವಿವಾಹ, ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ವಿತರಣೆ ಕಾರ‌್ಯಕ್ರಮಗಳನ್ನು ಮುಂದುವರಿಸುವುದಾಗಿ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

    ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಟ್ರಸ್ಟ್ ಸ್ಥಾಪನೆಯಾಗಿತ್ತು. ಅದೇ ರೀತಿ ಸೇವಾ ಮನೋಭಾವದಿಂದ ಕಾರ‌್ಯ ನಿರ್ವಹಿಸುತ್ತಿತ್ತು. ಕೆಲವು ತಾಂತ್ರಿಕ ಸ್ಥಳೀಯ ತೊಂದರೆಯಿಂದ ಟ್ರಸ್ಟ್ ಅನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಭಕ್ತರ ಆಶಯ ಮತ್ತು ನ್ಯಾಯಾಲಯದಲ್ಲಿ ಹೋರಾಟದ ಫಲವಾಗಿ ದೇಗುಲ ಹಸ್ತಾಂತರವಾಗಿದ್ದು, ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
    ಟಿ.ಆರ್.ಶ್ರೀರಂಗಯ್ಯ, ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಗೊರವನಹಳ್ಳಿ

    ಷರತ್ತು ಮತ್ತು ನಿಬಂಧನೆ ಪಾಲನೆಯೊಂದಿಗೆ ಗೊಂದಲಗಳಿಲ್ಲದೆ, ಟ್ರಸ್ಟ್ ನಿರ್ವಹಿಸುವಂತೆ ನ್ಯಾಯಾಲಯ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅದೇಶದಂತೆ ಶನಿವಾರ ಟ್ರಸ್ಟ್ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಲಾಗಿದೆ, ಸೋಮವಾರ ಸಂಪೂರ್ಣ ದಾಖಲೆಗಳೊಂದಿಗೆ ಎಲ್ಲ ಟ್ರಸ್ಟ್ ಆಸ್ತಿಯನ್ನು ವಿವರವಾಗಿ ನೀಡುತ್ತೇವೆ. ನ್ಯಾಯಾಲಯದ ಕಾಯ್ದೆ ಅನುಸಾರ ಘೋಷಿತ ಸಂಸ್ಥೆ ಎಂದು ಆದೇಶ ಬರುವುವವರೆಗೆ ಟ್ರಸ್ಟ್ ಭಕ್ತರ ವಂತಿಕೆ ಮತ್ತು ಮಹತ್ತರ ನಿರ್ಧಾರ ಕೈಗೊಳ್ಳಬಾರದು. ಅದೇ ರೀತಿ ಪ್ರತೀ ತಿಂಗಳು ದಾಖಲೆ ಮತ್ತು ಲೆಕ್ಕಪತ್ರಗಳನ್ನು ಜಿಲ್ಲಾಧಿಕಾರಿಗೆ ನೀಡಲು ತಿಳಿಸಿದೆ.
    ಸೋಮಪ್ಪ ಕಾಡಕೋಳ, ಟ್ರಸ್ಟ್ ಅಡಳಿತ ಅಧಿಕಾರಿ ಮತ್ತು ಉಪವಿಭಾಗಾಧಿಕಾರಿ ಮಧುಗಿರಿ

    ನ್ಯಾಯಾಲಯದ ಆದೇಶದ ಪಾಲನೆಗಾಗಿ ಧಾರ್ಮಿಕ ದತ್ತಿ ಇಲಾಖೆ ಕೇವಲ ನಿತ್ಯದ ದೇವಾಲಯ ನಿರ್ವಹಣೆಗಷ್ಟೇ ಅಧಿಕಾರ ನೀಡಿದೆ. ಯಾವುದೇ ಮಹತ್ತರ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ, ಟ್ರಸ್ಟ್‌ನ ಮನವಿಗಳನ್ನು ಸರಿಯಾಗಿ ಪುರಸ್ಕರಿಸಿಲ್ಲ, ಅಲ್ಲಿಯವರೆಗೂ ನಮ್ಮ ಹೋರಾಟವಿರುತ್ತದೆ.
    ಎನ್. ಮಂಜುನಾಥ್, ಮಹಾಲಕ್ಷ್ಮಿ ಪುನರ್ ಸ್ಥಾಪಿತ ಚಾರಿಟಬಲ್ ಟ್ರಸ್ಟ್, ಕಾರ‌್ಯದರ್ಶಿ, ಗೊರವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts