More

    ಗೊಬ್ಬರಕ್ಕಾಗಿ ಶುಕ್ರವಾರವೂ ನೂಕುನುಗ್ಗಲು

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಶುಕ್ರವಾರವೂ ನೂಕುನುಗ್ಗಲು ಉಂಟಾಯಿತು. ಗೊಬ್ಬರ ಬಂದಿದೆ ಎಂಬ ಮಾಹಿತಿ ಆಧರಿಸಿ ಶುಕ್ರವಾರ ಬೆಳಗ್ಗೆಯೇ ಜಿಟಿಜಿಟಿ ಮಳೆ ಹಾಗೂ ಕರೊನಾ ಭೀತಿ ಲೆಕ್ಕಿಸದೇ ನೂರಾರು ರೈತರು ಆಗಮಿಸಿದ್ದರು.

    ಖಾಸಗಿ ಅಂಗಡಿಯೊಂದಕ್ಕೆ 220 ಚೀಲ ಯೂರಿಯಾ ಪೂರೈಕೆಯಾಗಿತ್ತು. ಒಬ್ಬ ರೈತರಿಗೆ 2 ಚೀಲದಂತೆ ಗೊಬ್ಬರ ಮಾರಾಟ ಮಾಡಲಾಯಿತು. ಅರ್ಧ ಗಂಟೆಯಲ್ಲಿ ಎಲ್ಲ ಗೊಬ್ಬರ ಖಾಲಿಯಾಯಿತು. ಸರದಿಯಲ್ಲಿ ನಿಂತರೂ ಗೊಬ್ಬರ ಸಿಗಲಿಲ್ಲ ಎಂದು ರೈತರು ಅಸಮಾಧಾನಗೊಂಡು ಮನೆಯತ್ತ ತೆರಳಿದರು.

    ಸಿಪಿಐ ವಿಕಾಸ ಪಿ.ಎಲ್., ಪಿಎಸ್​ಐ ಶಿವಯೋಗಿ ಲೋಹಾರ ಹಾಗೂ ಎಂ.ಎಸ್. ಬಡಿಗೇರ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಇನ್ನೆರಡು ದಿನಗಳಲ್ಲಿ ಇನ್ನಷ್ಟು ಗೊಬ್ಬರ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೈತರಿಗೆ ಪೊಲೀಸರು ಸಮಾಧಾನಪಡಿಸಿ ಕಳುಹಿಸಿದರು.

    ಬೆಳೆ ಹಾಳಾದ ಮೇಲೆ ಗೊಬ್ಬರ ಬಂದ್ರೆ…

    ಮಳೆಯಿಂದ ತೇವಾಂಶ ಹೆಚ್ಚಿರುವ ಭೂಮಿಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಇದರಿಂದಾಗಿ ಗೊಬ್ಬರ ಅಂಡಗಡಿಗಳಿಗೆ ದಿನಾಲೂ ಎಡತಾಕುವಂತಾಗಿದೆ. ಅಂಗಡಿಯವರನ್ನು ಕೇಳಿದರೆ ನಮಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ಗೊಬ್ಬರ ಬರುತ್ತಿದ್ದಂತೆಯೇ ಅರ್ಧ ಗಂಟೆಯಲ್ಲೆ ಖಾಲಿಯಾಗುತ್ತದೆ ಎನ್ನುತ್ತಿದ್ದಾರೆ. ಹಂಗಾಮು ಮುಗಿದು ಬೆಳೆ ಹಾಳಾದ ಮೇಲೆ ಗೊಬ್ಬರ ಬಂದರೆ ಏನು ಉಪಯೋಗ? ಎಂದು ರೈತ ಯಲ್ಲಪ್ಪಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

    ಸದ್ಯಕ್ಕೆ 150 ಟನ್ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಎರಡು ದಿನಗಳಲ್ಲಿ ಬರಲಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಹೇಳಿದ್ದಾರೆ. ರೈತರು ಕೇವಲ ಯೂರಿಯಾ ಬಳಸದೇ ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು.

    | ಎಸ್.ಬಿ. ಲಮಾಣಿ ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts