More

    ಗೊಂದಲ ಮೂಡಿಸುತ್ತಿದೆ ಆಂಟಿಜನ್ ಪರೀಕ್ಷೆ

    ಧಾರವಾಡ: ಕರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದೇ ಹಂತವಾಗಿ

    ನಿತ್ಯ ಇಂತಿಷ್ಟು ಜನರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಆದೇಶ ಸಹ ಮಾಡಿದೆ. ಈ ಆದೇಶ ಜನರಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿದ್ದಲ್ಲದೆ, ಆತಂಕ ಸೃಷ್ಟಿಸುವಲ್ಲಿಯೂ ಕಾರಣವಾಗಿದೆ.

    ರ್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕರೊನಾ ಲಕ್ಷಣ ಹೊಂದಿರುವ ಜನರ ವರದಿ ನೆಗೆಟಿವ್ ಬಂದರೆ, ಮತ್ತೆ ಆರ್​ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಈ ಆದೇಶ ಮೊದಲಿನಿಂದ ಇದ್ದರೂ ಕೆಲ ದಿನಗಳಿಂದ ಕಟ್ಟು ನಿಟ್ಟಾಗಿ ಜಾರಿಗೆ ಬಂದಿದೆ. ಆದರೆ, ಈ ತಪಾಸಣೆ ನಡೆಸುವ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುವ ಎಡವಟ್ಟಿನಿಂದ ಜನರು ತೊಂದರೆಗೆ ಸಿಲುಕುವಂತಾಗಿದೆ.

    ರೋಗದ ಲಕ್ಷಣ ಇಲ್ಲದವರ ತಪಾಸಣೆ

    ನಡೆಸುವ ಸಿಬ್ಬಂದಿ, ಲಕ್ಷಣಗಳಿವೆ ಎಂದು ವರದಿ ಮಾಡುತ್ತಿದ್ದಾರೆ. ಆರೋಗ್ಯವಾಗಿದ್ದರೂ, ಕಫ, ಐಎಲ್​ಐ ಲಕ್ಷಣಗಳು ಇವೆ ಎಂದು ಅರ್ಜಿಯಲ್ಲಿ ನಮೂದಿಸುತ್ತಿದ್ದಾರೆ. ಈ ವ್ಯಕ್ತಿಗಳು ರ್ಯಾಪಿಡ್ ಆಂಟಿಜನ್ ತಪಾಸಣೆ ಒಳಪಟ್ಟಾಗ ನೆಗೆಟಿವ್ ಬರುವುದು ಸಾಮಾನ್ಯ. ಆದರೆ, ಆರೋಗ್ಯ ಸಿಬ್ಬಂದಿ ಕಳುಹಿಸಿದ ವರದಿ ಆಧಾರದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ, ನಿಮಗೆ ಲಕ್ಷಣಗಳಿವೆ. ಹೀಗಾಗಿ ಆರ್​ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಹೇಳುತ್ತಾರೆ. ಹೀಗಾಗಿ ಯಾವುದೇ ಲಕ್ಷಣ ಇಲ್ಲದ ಜನರೂ ತಪಾಸಣೆಗೆ ಒಳಪಡಲು ಹಿಂಜರಿಯುತ್ತಲೇ ಹೋಗಬೇಕಾಗಿ ಬರುತ್ತಿದೆ.

    ಸರ್ಕಾರ ಇಂತಿಷ್ಟು ಜನರ ತಪಾಸಣೆ ನಡೆಸಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಕರೊನಾದಿಂದ ಆಸ್ಪತ್ರೆಗಳಿಗೆ ದಾಖಲಾಗುವ ವ್ಯಕ್ತಿಗಳು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ 7 ದಿನ ಮಾತ್ರ ಮನೆಯಲ್ಲಿ ಇರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಆಸ್ಪತ್ರೆಯವರು ಮಾತ್ರ 14 ದಿನ ಎಂದು ಹೇಳುತ್ತಿದ್ದಾರೆ. ಹೀಗೆ ಆದೇಶಗಳ ಬಗ್ಗೆ ಆರೋಗ್ಯ ಇಲಾಖೆಯಲ್ಲೇ ಸ್ಪಷ್ಟತೆ ಇಲ್ಲವಾಗಿದೆ. ಇದು ಸಹ ಜನರನ್ನು ಗೊಂದಲಕ್ಕೆ ಈಡುಮಾಡಿದೆ.

    ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಲಕ್ಷಣಗಳಿವೆ ಎಂದು ತಪಾಸಣೆ ವೇಳೆ ನಮೂದು ಮಾಡುವುದು ಸರಿಯಲ್ಲ. ಇಂತಹ ಘಟನೆಗಳು ನಡೆದಿರುವ ಕುರಿತು ನನ್ನ ಗಮನಕ್ಕೂ ಬಂದಿವೆ. ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗುವುದು. ಆಸ್ಪತ್ರೆಯಿಂದ ಬಿಡುಗಡೆಯಾದವರು ಹೊಸ ಆದೇಶದಂತೆ 7 ದಿನ ಮಾತ್ರ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು.

    | ನಿತೇಶ ಪಾಟೀಲ ಜಿಲ್ಲಾಧಿಕಾರಿ

    ತಾಂತ್ರಿಕ ಕಾರಣವಂತೆ!

    ರೋಗ ಲಕ್ಷಣ ಇಲ್ಲ. ರ್ಯಾಪಿಡ್ ಟೆಸ್ಟ್​ನಲ್ಲೂ ನೆಗೆಟಿವ್. ಆದರೆ, ವರದಿಯಲ್ಲಿ ಜ್ವರ, ಕೆಮ್ಮು, ಸುಸ್ತು ಇತ್ತು ಎಂದು ನಮೂದಿಸಲಾಗುತ್ತಿದೆ. ನಿರ್ದಿಷ್ಟ ವೈದ್ಯರಿಂದ ಚಿಕಿತ್ಸೆ ಪಡೆಯಲಾಗಿದೆ ಎಂದೂ ರ್ಯಾಪಿಡ್ ಟೆಸ್ಟ್ ವರದಿಯಲ್ಲಿ ನಮೂದಿಸಲಾಗಿದೆ. ಇಂತಹ 50ಕ್ಕೂ ಹೆಚ್ಚು ಜನರ ರ್ಯಾಪಿಡ್ ವರದಿ ವಿಜಯವಾಣಿ ಬಳಿ ಇದೆ. ತಪಾಸಣೆ ಮಾಡಿಸಿಕೊಂಡವರು ತಕ್ಷಣವೇ ಪ್ರಶ್ನಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ತರಾಟೆಗೆ ತೆಗೆದುಕೊಂಡಾಗ, ‘ತಾಂತ್ರಿಕ ದೋಷ ಆಗಿದೆ… ಸರಿಪಡಿಸಿದ್ದೇವೆ…’ ಎಂದು ಉತ್ತರ ನೀಡಿದರೂ, ಇದರ ಹಿಂದೆ ಟಾರ್ಗೆಟ್ ತಂತ್ರ ಇದೆ ಎನ್ನಲಾಗಿದೆ. ಅಮಾಯಕರು ಅನಗತ್ಯ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ…

    ಗುರುವಾರ 159 ಪ್ರಕರಣ ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಗುರುವಾರ 159 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸ್ವಲ್ಪ ಇಳಿಮುಖವಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 8543ಕ್ಕೇರಿದೆ. ಈವರೆಗೆ 6051 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2234 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಈವರೆಗೆ ಒಟ್ಟು 258 ಜನ ಮೃತಪಟ್ಟಿದ್ದಾರೆ.

    ಗುರುವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 30 ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಸೇರಿ ಅಂದಾಜು 45 ಪ್ರಕರಣಗಳು ಪತ್ತೆಯಾಗಿವೆ.

    ಕಲಘಟಗಿ ತಾಲೂಕಿನ ಅರಳಿಹೊಂಡ; ನವಲಗುಂದ ತಾಲೂಕಿನ ನವಲಗುಂದ ಡಿಪೋ, ಮೊರಬ ಗ್ರಾಮದ ಹಳ್ಳಿಗೇರಿ ಓಣಿ, ಬಸಾಪುರ, ಶಿರಕೋಳ, ಶಲವಡಿ ವೀರಭದ್ರೇಶ್ವರ ಗುಡಿ ಹತ್ತಿರ; ಕುಂದಗೋಳ ತಾಲೂಕಿನ ವಾಲ್ಮೀಕಿ ಓಣಿ, ಯಲ್ಲಮ್ಮನ ಟೆಂಪಲ್ ಹತ್ತಿರ, ಕಡಪಟ್ಟಿ ಅಲ್ಲಾಪುರ ರಸ್ತೆ, ಬೆಟದೂರ ಕೊಪ್ಪದವರ ಓಣಿ, ಹಿರೇನರ್ತಿ, ಸಂಶಿ; ಅಣ್ಣಿಗೇರಿ ಮಾರ್ಕೆಟ್ ರಸ್ತೆ, ಕುರುಬರ ಓಣಿ, ಮಠದ ಓಣಿ, ಭದ್ರಾಪುರದ ಅಕ್ಕಿ ಓಣಿ, ಅಗಸಿ ಓಣಿ, ಸಿದ್ಧಲಿಂಗೇಶ್ವರಮಠ ಪ್ರದೇಶದಲ್ಲಿ ಪ್ರಕರಣ ಕಂಡುಬಂದಿದೆ. ಅನ್ಯ ಜಿಲ್ಲೆಗಳ ಹತ್ತಾರು ಪ್ರಕರಣಗಳು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts