More

    ಗೊಂದಲದ ಗೂಡಾದ ನಿಪ್ಪಾಣಿ ನಗರ ಸಾಮಾನ್ಯ ಸಭೆ

    ನಿಪ್ಪಾಣಿ: ನಗರಸಭೆಯಿಂದ ಬೀದಿದೀಪ ಅಳವಡಿಕೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರ ನಡುವಿನ ಮಾತಿನ ಚಕಮಕಿಯಿಂದಾಗಿ ಮಂಗಳವಾರ ಹಮ್ಮಿಕೊಂಡಿದ್ದ ನಗರಸಭೆ ಸಾಮಾನ್ಯ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.

    ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ವಿಲಾಸ ಗಾಡಿವಡ್ಡರ ಮಾತನಾಡಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ನಗರಸಭೆಯಿಂದ ಬೀದಿದೀಪ ಅಳವಡಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಸಂಬಂಧಪಡದ ಕಾಮಗಾರಿ ಕೈಗೊಂಡು ಹಣ ಪೋಲು ಮಾಡುತ್ತಿರುವುದೇಕೆ ಎಂದು ಕೇಳಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಸದಸ್ಯರು ಕೂಗಾಡಿ ಗಲಾಟೆ ಮಾಡಿದರು. ಪರಿಣಾಮ ಮಹತ್ವದ ವಿಷಯ ಚರ್ಚಿಸಬೇಕಿದ್ದ ಸಭೆ ಸದಸ್ಯರ ವಾಗ್ವಾದದಲ್ಲೇ ಅಂತ್ಯಗೊಂಡಿತು.

    ಎಸ್‌ಟಿಪಿಗಾಗಿ ಜಮೀನು ಖರೀದಿಸುವುದು, ಆಶ್ರಯ ಯೋಜನೆಗೆ ಯಮಗರ್ಣಿ ಗ್ರಾಮದ 6 ಎಕರೆ ಜಮೀನು ಬದಲಾಗಿ ಪಟ್ಟಣಕುಡಿ ಜಮೀನು ಖರೀದಿಸುವುದಕ್ಕೆ ಸಭೆಯಲ್ಲಿ ಚರ್ಚೆ ನಡೆಯುವುದಿತ್ತು. ಪ್ರಸಕ್ತ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆ ಮಂಜೂರು ಮಾಡುವುದು, ನಾಗನೂರು ಗ್ರಾಮದ 14 ಜಮೀನನ್ನು ತಾಲೂಕು ಸ್ಟೇಡಿಯಂಗಾಗಿ ನೀಡುವುದು, ಮುನ್ಸಿಪಲ್ ಪ್ರೌಢಶಾಲೆ ಸರ್ಕಾರಕ್ಕೆ ಹಸ್ತಾಂತರಿಸದಿರುವ ಬಗ್ಗೆ ಹಾಗೂ ನಗರದಲ್ಲಿ ಪದವಿ ಕಾಲೇಜಿಗೆ ಸ್ಥಳಾವಕಾಶ ಕಲ್ಪಿಸುವುದು ಸೇರಿ ಮಹತ್ವದ ವಿಷಯಗಳು ಚರ್ಚೆಗೆ ಸಾಕ್ಷಿಯಾಗಬೇಕಿದ್ದ ಸಭೆ ಸದಸ್ಯರ ಕೋಪ-ತಾಪಗಳಿಗೆ ಬಲಿಯಾಯಿತು.

    ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸದಸ್ಯರು ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರು. ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸಿದ ನಿಯಮಗಳನ್ನು ಗಾಳಿಗೆ ತೂರಿದರು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ಸದ್ದಾಂ ನಗಾರಜಿ, ಉಭಯ ಪಕ್ಷದ ಸದಸ್ಯರು, ಅಧಿಕಾರಿಗಳು ಇದ್ದರು.

    ನಿಪ್ಪಾಣಿಯಲ್ಲಿ ಮರಾಠಿ ಶಾಲೆಗಳು ಇಲ್ಲದ ಸಂದರ್ಭದಲ್ಲಿ ಅನೇಕ ಹಿರಿಯರು ಸೇರಿ 116 ವರ್ಷಗಳ ಹಿಂದೆ ಮುನ್ಸಿಪಲ್ ಪ್ರೌಢಶಾಲೆ ಸ್ಥಾಪಿಸಿದ್ದಾರೆ. ಇದು ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಇದನ್ನು ಸರ್ಕಾರಕ್ಕೆ ಹಸ್ತಾಂತರಿಸಬಾರದು.
    | ವಿಲಾಸ್ ಗಾಡಿವಡ್ಡರ, ನಗರಸಭೆ ವಿಪಕ್ಷ ನಾಯಕ

    ವಿರೋಧ ಪಕ್ಷದ ಸದಸ್ಯರು ಗಲಾಟೆ ಮಾಡಿ ನಗರಸಭೆಗೆ ಅಗೌರವ ಮಾಡಿದ್ದಾರೆ. ಮೊದಲು 1,850 ವಿದ್ಯಾರ್ಥಿಗಳು ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈಗ 143ಕ್ಕೆ ಕುಸಿದಿದೆ. ಮುನ್ಸಿಪಲ್ ಪ್ರೌಢಶಾಲೆ ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು.
    | ಜಯವಂತ ಭಾಟಲೆ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts