More

    ಗಾಳಿಪಟ ಉತ್ಸವಕ್ಕೆ ಜನಸಾಗರ, ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಪಟುಗಳು

    ಹುಬ್ಬಳ್ಳಿ: ಸೂತ್ರದಾರ ಕಟ್ಟಿ ಒಬ್ಬರು ಕೈಯಲ್ಲಿ ಹಿಡಿದು ನಿಂತರೆ ಮತ್ತೊಬ್ಬರು ಅದರ ದಾರ ಎಳೆಯುತ್ತ ಆಕಾಶದ ಎತ್ತರಕ್ಕೆ ಹಾರಿಸಿದರು. ಬಣ್ಣಬಣ್ಣದ ಗಾಳಿಪಟಗಳು ಆಕಾಶಕ್ಕೆ ನೆಗೆಯುತ್ತಿದ್ದಂತೆ ಮನದಲ್ಲಿ ಏನೋ ಉಲ್ಲಾಸ, ಉತ್ಸಾಹ… ಕುಣಿದು ಕುಪ್ಪಳಿಸುತ್ತ ಮತ್ತಷ್ಟು ಗಾಳಿಪಟ ಹಾರಿಸುತ್ತ ನೀಲಿ ಬಾನಂಗಳದಲ್ಲಿ ಮನಸ್ಸು ತೇಲುವಂತೆ ಮಾಡಿದರು.

    ಇಲ್ಲಿಯ ಉಣಕಲ್ ನೃಪತುಂಗ ಬೆಟ್ಟ ಹಿಂಭಾಗದಲ್ಲಿ ಸಜ್ಜುಗೊಳಿಸಲಾಗಿರುವ ಬೃಹತ್ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ನೂರಾರು ಜನರು ವೈವಿದ್ಯಮಯ ಪಟ ಹಾರಿಸುವ ಮೂಲಕ ಸಂಭ್ರಮಪಟ್ಟರು.

    ತ್ರಿವರ್ಣ ಧ್ವಜ, ಐ ಲವ್ ಹುಬ್ಬಳ್ಳಿ, ಬೃಹತ್ ರಿಂಗ್, ಕಾಂತಾರ ಸಿನಿಮಾದ ಪಂಜುರ್ಲಿ, ಡಾಲ್ಪಿನ್, ಪಕ್ಷಿಗಳು ಹೀಗೆ ಬೃಹತ್ ಗಾತ್ರದ ಒಂದಕ್ಕಿಂತ ಒಂದು ಚೆಂದ ಗಾಳಿಪಟಗಳು ಮೈದಾನಕ್ಕೆ ಇಳಿಯುತ್ತಿದ್ದಂತೆ ಸುತ್ತಲೂ ಜಮಾಯಿಸಿದ್ದ ಜನರು ಅಬ್ಬಾ ಎಂದು ತದೇಕಚಿತ್ತದಿಂದ ನೋಡಿದರು. ಅವು ಆಕಾಶಕ್ಕೆ ಹಾರುತ್ತಿದ್ದಂತೆ ಚಪ್ಪಾಳೆ ತಟ್ಟಿ, ಕೇಕೇ ಹಾಕಿ ಸಂಭ್ರಮಿಸಿದರು.

    ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಂಸದ ಸಾಂಸ್ಕೃತಿಕ ಮಹೋತ್ಸವ ಆಶ್ರಯದಲ್ಲಿ ನಡೆದ ಗಾಳಿಪಟ ಉತ್ಸವಕ್ಕೆ ಅಪಾರ ಜನಸಾಗರ ಹರಿದು ಬಂದಿತು.

    ದೇಶ, ವಿದೇಶದಿಂದ ಬಂದಿದ್ದ 30ಕ್ಕೂ ಹೆಚ್ಚು ಗಾಳಿಪಟ ರೂವಾರಿಗಳು ವಿವಿಧ ಗಾತ್ರ, ಬಣ್ಣದ ಪಟ ಹಾರಿಸಿ ಸಂಭ್ರಮ ಹೆಚ್ಚಿಸಿದರು. ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

    ಚಿಕ್ಕಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಈ ಸಂಭ್ರಮದಲ್ಲಿ ಪಾಲ್ಗೊಂಡು ಗಾಳಿಪಟ ಉತ್ಸವಕ್ಕೆ ಸಾಕ್ಷಿಯಾದರು. ಪಾಲಕರು ಗಾಳಿಪಟಗಳ ಮುಂದೆ ನಿಂತು ಮಕ್ಕಳೊಂದಿಗೆ ಫೋಟೋಗಳಿಗೆ ಫೋಸ್ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಹಾರ ಮೇಳ ಜನರ ಹಸಿವು ಹಾಗೂ ನೀರಿನ ದಾಹ ನೀಗಿಸಿದವು.

    ಸಂಗೀತ ಸಂಜೆ: ಮೈದಾನದಲ್ಲಿ ಶನಿವಾರ ಸಂಜೆ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾವಿರಾರು ಜನರು ಪಾಲ್ಗೊಂಡು ಸಂಗೀತದ ರಸದೌತಣ ಸವಿದರು.

    ಪರೀಕ್ಷಾ ಪೇ ಚರ್ಚಾ: ಎಸ್​ಎಸ್​ಎಲ್​ಸಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಉತ್ಸವದ ಮೈದಾನದಲ್ಲಿ ಪರೀಕ್ಷಾ ಪೇ ಚರ್ಚಾ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡರು.

    ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ದಾದ ಜೋಶಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆಗೆ ಹೆದರಬಾರದು. ಭಯ ಪಟ್ಟರೆ ಓದಿರುವುದೂ ಮರೆತು ಹೋಗುತ್ತದೆ. ಪಾಲಕರು ಕೂಡ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸಾಂ ವಾರಿಯರ್ಸ್ ಪುಸ್ತಕ ಎಲ್ಲರೂ ಓದಬೇಕು ಎಂದು ಹೇಳಿದರು.

    ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಗಾಳಿಪಟದ ಮಹತ್ವ ತಿಳಿಸುವ ಕಾರ್ಯ ಈ ಉತ್ಸವದಿಂದ ಆಗುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆ, ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಪ್ರಲ್ಹಾದ ಜೋಶಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಉತ್ಸವ ಮಾಡಿ ಹುಬ್ಬಳ್ಳಿಗೆ ಮೆರಗು ತಂದಿದ್ದಾರೆ ಎಂದರು.

    ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರು, ಸಂಕ್ರಮಣದ ನಂತರ ಬಿಸಿಲಲ್ಲಿ ನಿಂತು ಗಾಳಿಪಟ ಹಾರಿಸುವುದಕ್ಕೆ ವೈಜ್ಞಾನಿಕ ಕಾರಣವಿದೆ. ಈ ಬಿಸಿಲಿನಿಂದ ಇಡೀ ವರ್ಷಕ್ಕೆ ಆಗುವಷ್ಟು ವಿಟಮಿನ್ ಡಿ ದೇಹದಲ್ಲಿ ಸಂಗ್ರಹವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts