More

    ಗಾರಂಪಳ್ಳಿ ಸೇತುವೆ ಮೇಲ್ದರ್ಜೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ

    ಚಿಂಚೋಳಿ: ಪ್ರತಿ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗಿ ಗಾರಂಪಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುತ್ತಿದೆ. ಇದನ್ನು ತಪ್ಪಿಸಲು ಸೇತುವೆ ಮೇಲ್ದರ್ಜೆಗೇರಿಸಲು ಕೂಡಲೇ ಕ್ರಿಯಾಯೋಜನೆ ರೂಪಿಸಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್‌ಸಿಂಗ್ ಮೀನಾ ಸೂಚಿಸಿದರು.

    ಗಾರಂಪಳ್ಳಿಗೆ ಶನಿವಾರ ಭೇಟಿ ನೀಡಿ ಸೇತುವೆ ಪರಿಶೀಲಿಸಿದ ಅವರು, ಮಳೆ ನಿಲ್ಲುವವರೆಗೂ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಬೇಕು. ನಾಗರಾಳ ಜಲಾಶಯದಿಂದ ಭೋಗಾವತಿ ನದಿಗೆ ನೀರು ಬಿಡುವ ಮುನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಡಂಗೂರ ಸಾರಬೇಕು. ಸೇತುವೆ ಗುಣಮಟ್ಟ ಪರಿಶೀಲಿಸಿದ ಬಳಿಕವೇ ವಾಹನಗಳ ಓಡಾಟಕ್ಕೆ ಅವಕಾಶ ಕೊಡಿ ಎಂದು ತಾಕೀತು ಮಾಡಿದರು.

    ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವಚ್ಛತೆ ಮತ್ತು ಸುಂದರೀಕರಣಕ್ಕೆ ಆದ್ಯತೆ ನೀಡಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಸ್ಥಾಪಿಸಿರುವ ಶಿಶು ಪಾಲನೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

    ಟಿಎಚ್‌ಒ ಡಾ.ಮಹ್ಮದ್ ಗಫಾರ್, ಕುಡಿಯುವ ನೀರು ಸರಬರಾಜು ಎಇ ರಾಜಶೇಖರ ಹದನೂರ, ಕಾಳಗಿ ತಾಪಂ ಇಒ ರೇವಣಸಿದ್ದಪ್ಪ ಪಾಟೀಲ್, ಪಿಡಬ್ಲ್ಯುಡಿ ಅಭಿಯಂತರ ರಮೇಶ, ತಾಪಂ ಸಿಬ್ಬಂದಿ ಶಿವಶಂಕ್ರಯ್ಯ ಸ್ವಾಮಿ, ನಾಗೇಂದ್ರಪ್ಪ ಸುಲೇಪೇಟ, ಮಲ್ಲಿಕಾರ್ಜುನ ಕಟ್ಟಿಮನಿ, ಪಿಡಿಒಗಳಾದ ಗುರುನಾಥ ರಾಠೋಡ್, ಯಲಗೊಂಡ ಪೂಜಾರಿ, ರಾಮಕೃಷ್ಣ ಹಡಪದ, ಗೋವಿಂದರೆಡ್ಡಿ ಮುದನಾಳ, ಕಾರ್ಯದರ್ಶಿ ಜಗನ್ನಾಥರೆಡ್ಡಿ ಚಟ್ನಳ್ಳಿ, ಪ್ರಮುಖರಾದ ಮಹೇಶ ಗುತ್ತೇದಾರ್, ಮೋಹನ ಗುತ್ತೇದಾರ್, ಜಗನ್ನಾಥ ಹೊಸಮನಿ, ಸಂತೋಷ ಗೌನಳ್ಳಿ ಇತರರಿದ್ದರು.

    ಮತಕ್ಷೇತ್ರದ ಕೋಡ್ಲಿ, ಸುಲೇಪೇಟ ಹಾಗೂ ಗಾರಂಪಳ್ಳಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ ನೀಡಿದ ಸಿಇಒ, ನಾಗರಾಳದ ಲೋಹಾರ್ ಮುಲ್ಲಾಮಾರಿ ಜಲಾಶಯಕ್ಕೂ ಭೇಟಿ ನೀಡಿದರು.

    ಅಸ್ವಚ್ಛ ಕಂಡು ಪಿಡಿಒಗೆ ಕ್ಲಾಸ್
    ಸುಲೇಪೇಟದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಗ್ರಾಪಂ ಪಿಡಿಒಗೆ ಜಿಪಂ ಸಿಇಒ ಮೀನಾ ಕ್ಲಾಸ್ ತೆಗೆದುಕೊಂಡರು. ಸುಲೇಪೇಟ ಪಂಚಾಯಿತಿಗೆ ಭೇಟಿ ನೀಡುವಾಗ ರಸ್ತೆಯ ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ಅವರು, ನೀವೇನು ಕೆಲಸ ಮಾಡುತ್ತಿದ್ದೀರಿ? ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ವೆ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಗ್ರಾಮಸ್ಥರು ಸರ್, ನಮ್ಮ ಏರಿಯಾದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ಆಗುವುದೇ ಇಲ್ಲ. ಸ್ವಚ್ಛತೆ ಸಂಪೂರ್ಣ ಕಣ್ಮರೆಯಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಚರಂಡಿ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಳ್ಳಿ ಇನ್ನೊಮ್ಮೆ ಭೇಟಿ ನೀಡುವಾಗ ಯಾವುದೇ ಸಮಸ್ಯೆ ಇರಬಾರದು ಎಂದು ಪಿಡಿಒ ರಾಮಕೃಷ್ಣ ಹಡಪದಗೆ ಸೂಚಿಸಿದರು.

    ಶುದ್ಧ ಕುಡಿವ ನೀರು ಸರಬರಾಜು ಮಾಡಿ
    ಕಾಲರಾ ಉಲ್ಬಣಿಸಿದ್ದ ಚಿಮ್ಮನಚೋಡ ಗ್ರಾಮದ ದಲಿತರ ಬಡಾವಣೆಗೆ ಭನ್ವರ್‌ಸಿಂಗ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಯಾವ ಕಾರಣಕ್ಕೂ ಭಯಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತ್ರಸ್ತ ಕುಟುಂಬದವರಲ್ಲಿ ಆತ್ಮಸ್ಥೈರ್ಯ ತುಂಬಿದರು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಎಲ್ಲೆಡೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಜನರಲ್ಲಿ ಸ್ವಚ್ಛತೆ ಕುರಿತು ತಿಳಿವಳಿಕೆ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವಂತೆ ಪಿಡಿಒ ಗೋವಿಂದರೆಡ್ಡಿ ಮುದನಾಳಗೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts