More

    ಗರೀಬನ ಕಿಡ್ನಾಪ್ ಹಿಂದಿದೆ ಕಾಸಿನ ರಹಸ್ಯ


    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
    ಆನ್​ಲೈನ್ ಕ್ಯಾಸಿನೋ ಗೇಮ್ಲ್ಲಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಎನ್ನಲಾದ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿ ಗರೀಬ್ ನವಾಜ್​ನನ್ನು ಅಪಹರಿಸಿದ್ದ ಪ್ರಕರಣದ ಹಿಂದೆ ಹಲವು ರಹಸ್ಯಗಳು ಅಡಗಿವೆ. ಈ ಪ್ರಕರಣದ ಹಿಂದೆ ಗರೀಬ್ ಸ್ನೇಹಿತ ಹಾಗೂ ಕಿಂಗ್​ಪಿನ್ ಅಬ್ದುಲ್ ಮುಚಾಲೆ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
    ಅಪಹರಣಕ್ಕೀಡಾಗಿದ್ದ ನಗರದ ಮಂಟೂರ ರಸ್ತೆಯ ಗರೀಬ್ ನವಾಜ್, ಆರೋಪಿ ಅಬ್ದುಲ್ ಮುಚಾಲೆ ಹಾಗೂ ತಾಳಿಕೋಟೆ ಮೂಲದ ದಿಲ್ವಾರ್ ಹುಸೇನ್ ಬಳಿಗಾರ ಮೂವರೂ ಸ್ನೇಹಿತರು. ದಿಲ್ವಾರ್ ಕ್ಯಾಸಿನೋದಲ್ಲಿ ಮೇಲುಗೈ ಸಾಧಿಸಿ ಕೋಟ್ಯಂತರ ರೂ. ಗೆದ್ದಿದ್ದ. ಈತನ ಸಹಾಯದಿಂದ ಗರೀಬ್ ಕ್ಯಾಸಿನೋ ಆನ್​ಲೈನ್ ಗೇಮ್ ಆಡಲು ಕಲಿತಿದ್ದ. ಆದರೆ, ಈತ ಹೆಚ್ಚು ಹಣ ಗೆದ್ದಿರಲಿಲ್ಲ. ಬದಲಾಗಿ ದಿಲ್ವಾರ್ ಹೆಚ್ಚು ಹಣ ಗೆದ್ದಿದ್ದ. ಅದರಲ್ಲಿ ಕೋಟ್ಯಂತರ ರೂ. ಅನ್ನು ಅಬ್ದುಲ್ ಹಾಗೂ ಗರೀಬ್ ಹೆಸರಿನ ಖಾತೆಗಳ ಮೂಲಕ ಚಲಾವಣೆ ಮಾಡಿಕೊಂಡಿದ್ದ.
    ಅಬ್ದುಲ್ ಖಾತೆಗೆ ದಿಲ್ವಾರ್ ಸುಮಾರು ಒಂದೂವರೆ ಕೋಟಿ ರೂ. ವರ್ಗಾಯಿಸಿದ್ದ. ಇದರಲ್ಲಿ ಸ್ವಲ್ಪ ಹಣವನ್ನು ಅಬ್ದುಲ್​ನು ದಿಲ್ವಾರ್​ನಿಗೆ ವಾಪಸ್ ಕೊಟ್ಟಿದ್ದ. ಉಳಿದ ಹಣದಲ್ಲಿ ಮೋಜು, ಮಸ್ತಿ ಮಾಡಿದ್ದ. ಈ ವಿಷಯ ಗೊತ್ತಾದ ಬಳಿಕ ದಿಲ್ವಾರ್​ನು ಅಬ್ದುಲ್​ನಿಂದ ದೂರವಾಗಿದ್ದ. ಗರೀಬ್​ನಿಗೆ ಮತ್ತಷ್ಟು ಹತ್ತಿರವಾಗಿದ್ದ.
    ಈ ನಡುವೆ ಅಬ್ದುಲ್ ಬಳಿ ಕೋಟ್ಯಂತರ ರೂ. ಇರುವುದು ಆರೀಫ್ ದಾಸ್ತಿಕೊಪ್ಪನಿಗೆ ಗೊತ್ತಾಗುತ್ತದೆ. ತುರ್ತಾಗಿ 5 ಲಕ್ಷ ರೂ. ಕೊಡುವಂತೆ ಆರೀಫ್​ನು ಅಬ್ದುಲ್​ಗೆ ಕೇಳುತ್ತಾನೆ. ಉಪಾಯ ಮಾಡಿದ ಅಬ್ದುಲ್ ಕಥೆ ಕಟ್ಟುತ್ತಾನೆ. ನನ್ನ ಬಳಿ ಹಣ ಇಲ್ಲ. ಗರೀಬ್ ಬಳಿ ದಿಲ್ವಾರ್​ನ ಕೋಟ್ಯಂತರ ರೂ. ಇದೆ. ಆತನನ್ನು ಅಪಹರಿಸೋಣ ಎಂದು ಹೊಂಚು ಹಾಕುತ್ತಾನೆ. ತನ್ನ ಜತೆ ಆರು ಜನರನ್ನು ಸೇರಿಸಿಕೊಳ್ಳುತ್ತಾನೆ. ಗರೀಬ್​ನನ್ನು ಆ. 6ರಂದು ಗೋಕುಲ ರಸ್ತೆಯ ಡೆಕಥ್ಲಾನ್ ಬಳಿ ಕರೆಸಿಕೊಂಡು ಅಪಹರಿಸುತ್ತಾರೆ. ಆ. 8ರಂದು ಕಿತ್ತೂರ ಬಳಿ ಬೆಂಡಿಗೇರಿ ಠಾಣೆ ಪೊಲೀಸರು ಆರೋಪಿತರನ್ನು ಬಂಧಿಸುತ್ತಾರೆ.
    ಒಟ್ಟಾರೆ ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಹಣ ಚಲಾವಣೆಯಾಗಿರುವುದು ಸ್ಪಷ್ಟವಾಗುತ್ತಿದೆ. ಆದರೆ, ಅಷ್ಟೂ ಹಣ ಗೇಮ್ಂದಲೇ ಬಂದಿತ್ತಾ, ಬೇರೆ ಯಾವುದಾದರೂ ಮೂಲ ಇದೆಯಾ ? ಅಪಹರಣಕ್ಕೆ ಬೇರೆ ಯಾವುದಾದರೂ ಕಾರಣ ಇತ್ತಾ ? ಎಂಬಿತ್ಯಾದಿ ಮಹತ್ವದ ಅಂಶಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

    ರ್ಯಾಂಕ್ ಸ್ಟೂಡೆಂಟ್ ದಿಲ್ವಾರ್
    ಅಪಹರಣಕ್ಕೀಡಾಗಿದ್ದ ಗರೀಬ್ ನವಾಜ್, ಗೇಮ್ಲ್ಲಿ ಕೋಟ್ಯಂತರ ರೂ. ಗೆದ್ದಿದ್ದ ದಿಲ್ವಾರ್ ಹಾಗೂ ಬಾಲಿ ಎಂಬುವರು ರಾಷ್ಟ್ರೀಯ ವಾಲಿಬಾಲ್ ಪಟುಗಳು. ದಿಲ್ವಾರ್ ಅತಿ ಬುದ್ಧಿವಂತನಾಗಿದ್ದ. ಕ್ಯಾಸಿನೋ ಗೇಮ್ಲ್ಲಿ ಕೋಟ್ಯಂತರ ರೂ. ಗಳಿಸಿದ್ದ. ಅಲ್ಲದೆ, ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 240ನೇ ರ್ಯಾಂಕ್ ಕೂಡ ಪಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    18 ಲಕ್ಷ ಕಿಟ್ ಹಂಚಿದ್ದ
    ಕೋಟ್ಯಂತರ ರೂ. ತನ್ನ ಖಾತೆಗೆ ಬಂದ ಬಳಿಕ ಅಬ್ದುಲ್ ಸ್ನೇಹಿತರೊಂದಿಗೆ ಸೇರಿ ಮೋಜು ಮಸ್ತಿ ಮಾಡಿದ್ದ. ಜತೆಗೆ 18 ಲಕ್ಷ ರೂ. ಮೌಲ್ಯದ ಆಹಾರದ ಕಿಟ್ ಗಳನ್ನು ಬಡವರಿಗೆ ಹಂಚಿದ್ದ. ಕೆಲ ಧಾರ್ವಿುಕ ಕೇಂದ್ರಗಳಿಗೂ ದೇಣಿಗೆ ನೀಡಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
    ಆರೋಪಿಗಳು ಯಾರ್ಯಾರು ?
    ವಿದ್ಯಾನಗರದ ಅಬ್ದುಲ್ ಮುಚಾಲೆ, ಆನಂದ ನಗರದ ಇಮ್ರಾನ್ ಬಂಗಲೆವಾಲೆ, ತೌಸೀಫ್ ಕಂಠವಾಲೆ, ನೂರಾನಿ ಪ್ಲಾಟ್​ನ ಹುಸೇನಸಾಬ ಹಜರೇಸಾಬ, ಮಹ್ಮದ ರಜಾಕ್ ಕಲಬುರ್ಗಿ, ಮಹ್ಮದ ಆರೀಫ್ ದಾಸ್ತಿಕೊಪ್ಪ, ಮದರ ಅಲಿ ಅಲಿಯಾಸ್ ಇಮ್ರಾನ್ ಮುಲ್ಲಾ ಬಂಧಿತ ಆರೋಪಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts